ಕಾರ್ಕಳದ ಹಿರ್ಗಾನದಲ್ಲಿ ಅದ್ಧೂರಿ ನೇಮೋತ್ಸವ!
– ಶ್ರೀಕ್ಷೇತ್ರ ಪೆಲತ್ತಿಜೆಯ ಅಣ್ಣಪ್ಪ ಪಂಜುರ್ಲಿ ದೇವಸ್ಥಾನದಲ್ಲಿ ಧಾರ್ಮಿಕ ರಂಗು
– ಕ್ರಿಯೇಟಿವ್ ಕಾಲೇಜು ಸಂಸ್ಥಾಪಕರಿಂದ ಹರಕೆ ನೇಮೋತ್ಸವ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕಾರ್ಕಳ: ಪರಶುರಾಮನ ಊರು ಕಾರ್ಕಳ ಪಟ್ಟಣ ಸಮೀಪದ ಹಿರ್ಗಾನ ಗ್ರಾಮದ ಶ್ರೀಕ್ಷೇತ್ರ ಪೆಲತ್ತಿಜೆಯ ಅಣ್ಣಪ್ಪ ಪಂಜುರ್ಲಿ ದೇವಸ್ಥಾನದಲ್ಲಿ ಮಾ. 22 ಭಾನುವಾರ ರಾತ್ರಿ ಹರಕೆಯ ಸಿರಿ ಸಿಂಗಾರದ ನೇಮೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಧರ್ಮದೈವ ಅಣ್ಣಪ್ಪ ಪಂಜುರ್ಲಿ ಗಗ್ಗರ ಸೇವೆ ನಡೆದಿದ್ದು, ಸೇವೆಯ ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಗಗ್ಗರ ಸೇವೆಯಲ್ಲಿ ಪಾಲ್ಗೊಂಡ ಭಕ್ತಾದಿಗಳು ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸುವ ಮೂಲಕ, ಧರ್ಮದೈವ ಅಣ್ಣಪ್ಪ ಪಂಜುರ್ಲಿ ದೈವದ ಕೃಪೆಗೆ ಪಾತ್ರರಾಗಿ ಕೃತಾರ್ಥರಾದರು.
ನೇಮೋತ್ಸವ ಹರಕೆದಾರರಾದ ಕ್ರಿಯೇಟಿವ್ ಕಾಲೇಜಿನ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್, ವಿಮಲ್ ರಾಜ್, ಗಣಪತಿ ಕೆ. ಎಸ್ ಮತ್ತು ಕುಟುಂಬದವರು ಹಾಗೂ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ಗಣನಾಥ ಶೆಟ್ಟಿ, ಆದರ್ಶ, ಅಮೃತ್ ಮತ್ತು ಕುಟುಂಬದವರು, ಹಿರ್ಗಾನ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಣ್ಯರು, ಕಾರ್ಕಳ ಪಟ್ಟಣದ ಗಣ್ಯರು, ಗ್ರಾಮಸ್ಥರು, ಭಕ್ತರು, ಸಂಘ ಸಂಸ್ಥೆಗಳ ಪ್ರಮುಖರು, ಕ್ರಿಯೇಟಿವ್ ಕಾಲೇಜಿನ ಸಿಬ್ಬಂದಿ, ಪೋಷಕರು ಹಾಜರಿದ್ದರು. ದೇವಸ್ಥಾನವನ್ನು ವಿಶೇಷ ಹೂವು ಹಾಗೂ ವಿದ್ಯುತ್ ಅಲಂಕಾರ ಮಾಡಲಾಗಿತ್ತು. ಹಿರ್ಗಾನ, ಕಾರ್ಕಳ ಸುತ್ತಮುತ್ತಲಿನ ಗ್ರಾಮಸ್ಥರು, ಧಾರ್ಮಿಕ ಗಣ್ಯರು, ಸ್ಥಳೀಯ ಭಜನಾ ಕುಣಿತ ತಂಡ ಗಮನ ಸೆಳೆಯಿತು. ಮುಂಜಾನೆವರೆಗೆ ಕೋಲಾ ನಡೆಯಿತು.








