ಕಾಲೇಜು ಬದಲಾವಣೆಗೆ ಅಪಹರಣ ಎಂಬ ಹೈಡ್ರಾಮ!
– ಮಂಗಳೂರು ಕಾಲೇಜು ಸೇರಲು ಕಿಡ್ನಾಪ್ ಕಥೆ ಕಟ್ಟಿದ ಯುವತಿ
– ಕೈ ಕೊಯ್ದುಕೊಂಡು ಅಪಹರಣ ಎಂದು ಸುಳ್ಳು ಹೇಳಿದ್ದಳು!
– ಪೊಲೀಸ್ ತನಿಖೆಯಲ್ಲಿ ಬಹಿರಂಗ: ಏನಿದು ಘಟನೆ..?
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಳ್ತಂಗಡಿ: ಕಾಲೇಜಿಗೆ ಸ್ಕೂಟರಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ, ಕಾರಿನಲ್ಲಿ ಆಗಮಿಸಿದ ಮೂವರು ಅಪರಿಚಿತರು ಆ ಬಾಲಕಿಯನ್ನು ಅಪಹರಿಸಲು ಯತ್ನಿಸಿದ್ದಾರೆ ಎಂಬ ಘಟನೆ ಸುಳ್ಳು ಎಂಬ ಬಗ್ಗೆ ಮಾಹಿತಿ ಲಭ್ಯ ಆಗುತ್ತಿದೆ.
ಸೋಮವಾರದಂದು ಸುದೇಮುಗೇರು ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯು ಬೆಳಿಗ್ಗೆ 8.30ರ ಸುಮಾರಿಗೆ ಸಂತೆಕಟ್ಟೆ ಬಸ್ ನಿಲ್ದಾಣಕ್ಕೆ ಸ್ಕೂಟಿಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಈ ಕಾರಿನಲ್ಲಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು ಸ್ಕೂಟಿಯನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಬಾಲಕಿಯನ್ನು ಬಲವಂತವಾಗಿ ಎಳೆದು ತಂದು, ಕಾರಿನೊಳಗೆ ತೂರಿಸಲು ಯತ್ನಿಸಿದ್ದಾರೆ. ಬಾಲಕಿಯು ಜೋರಾಗಿ ಕಿರುಚಾಡಿ ಪ್ರತಿರೋಧ ವ್ಯಕ್ತಪಡಿಸಿದ್ದಾಳೆ. ಅದೇ ಸಂದರ್ಭದಲ್ಲಿ ಹಿಂಭಾಗದಲ್ಲಿ ಸ್ಕೂಟರ್ ಬರುತ್ತಿರುವುದನ್ನು ಗಮನಿಸಿದ ವ್ಯಕ್ತಿಗಳು ಗಾಬರಿಗೊಂಡಿದ್ದಾರೆ. ತಕ್ಷಣ ದುಷ್ಕರ್ಮಿಗಳು ಬಾಲಕಿಯ ಕೈ ಮತ್ತು ಬೆರಳುಗಳಿಗೆ ಚಾಕುವಿನಿಂದ ಇರಿದು, ಆಕೆಯನ್ನು ಗಾಯಗೊಳಿಸಿ, ಅವಳ ಬಳಿಯಿದ್ದ ಕಾಲೇಜ್ ಬ್ಯಾಗನ್ನು ಕಿತ್ತುಕೊಂಡು ಕಾರನ್ನು ಹತ್ತಿ ಪರಾರಿಯಾಗಿದ್ದಾರೆ. ಸ್ಥಳೀಯರು ತಕ್ಷಣ ಗಾಯಗೊಂಡಿದ್ದ ಬಾಲಕಿಯನ್ನು ಬೆಳ್ತಂಗಡಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಿದರು. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಪೊಲೀಸರು ಬಾಲಕಿಯನ್ನು ವಿಚಾರಣೆ ನಡೆಸಿದ್ದು, ಇದೀಗ ಪ್ರಕರಣ ರೋಚಕ ಟ್ವಿಸ್ಟ್ ತೆಗೆದುಕೊಂಡಿದೆ.
ಸತ್ಯ ಬಯಲು ಮಾಡಿದ ‘ಫಾರೆನ್ಸಿಕ್’ ವಿಜ್ಞಾನ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಸಂಚಲನ ಮೂಡಿಸಿದ್ದ ಕಾಲೇಜು ವಿದ್ಯಾರ್ಥಿನಿಯ ಅಪಹರಣ ಯತ್ನ ಪ್ರಕರಣವು ಪೊಲೀಸರ ಚಾಣಾಕ್ಷ ತನಿಖೆ ಮತ್ತು ವೈಜ್ಞಾನಿಕ ಸಾಕ್ಷ್ಯಗಳ ಮುಂದೆ ಅಂತಿಮವಾಗಿ ‘ಠುಸ್’ ಆಗಿದೆ.
ಕಾಶಿಬೆಟ್ಟು ಸರ್ಕಾರಿ ಕಾಲೇಜಿಗೆ ತೆರಳುತ್ತಿದ್ದ ಯುವತಿಯನ್ನು ಮುಸುಕುಧಾರಿಗಳು ಕಾರಿನಲ್ಲಿ ಬಂದು ಅಪಹರಿಸಲು ಯತ್ನಿಸಿದರು ಎಂಬ ಸುದ್ದಿ ಇಡೀ ಜಿಲ್ಲೆಯನ್ನು ಆತಂಕಕ್ಕೆ ತಳ್ಳಿತ್ತು. ಆದರೆ, ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳ ಶೋಧನೆ ಬಳಿಕ ಮತ್ತು ವಿದ್ಯಾರ್ಥಿನಿಯ ಗೊಂದಲಮಯ ಹೇಳಿಕೆಗಳು ಪೊಲೀಸರಲ್ಲಿ ಮೊದಲೇ ಸಂಶಯ ಮೂಡಿಸಿದ್ದವು. ಅಂತಿಮವಾಗಿ ಮಂಗಳೂರಿನ ಕಾಲೇಜು ಸೇರಬೇಕೆಂಬ ತನ್ನ ಹಠಕ್ಕಾಗಿ ಆಕೆಯೇ ಸೃಷ್ಟಿಸಿದ ನಾಟಕವಿದು ಎಂಬುದು ಸಾಬೀತಾಗಿದೆ.ಈ ಪ್ರಕರಣದಲ್ಲಿ ಫಾರೆನ್ಸಿಕ್ ತಜ್ಞರ ಪ್ರಕಾರ, ವಿದ್ಯಾರ್ಥಿನಿಯ ಕೈ ಮೇಲಿದ್ದ ಗಾಯಗಳು ‘ಸ್ವಯಂ ಪ್ರೇರಿತ ಗಾಯಗಳು’ (Self-inflicted injuries) ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ.ಗಾಯದ ಆಳ ಮತ್ತು ಹೋಗಿರುವ ದಿಕ್ಕನ್ನು (Tailing of the wound) ಗಮನಿಸಿದಾಗ, ಅದು ಹೊರಗಿನ ವ್ಯಕ್ತಿ ಮಾಡಿದ ದಾಳಿಯಲ್ಲ, ಬದಲಾಗಿ ಆಕೆಯ ದೇಹದ ದಿಕ್ಕಿಗೇ ಗೀಚಿಕೊಂಡಿರುವುದು ಸ್ಪಷ್ಟವಾಗಿದೆ. ಅಲ್ಲದೆ, ಗಾಯಗಳು ಒಂದಕ್ಕೊಂದು ಸಮಾನಾಂತರವಾಗಿದ್ದು (Parallel), ಇವು ಸಾಮಾನ್ಯವಾಗಿ ಒಬ್ಬ ವ್ಯಕ್ತಿ ತಾನೇ ಇಚ್ಛಾಶಕ್ತಿಯಿಂದ ಮಾಡಿಕೊಳ್ಳುವ ಗಾಯಗಳ ಲಕ್ಷಣಗಳಾಗಿವೆ ಎಂದು ವಿಧಿ ವಿಜ್ಞಾನ ತಜ್ಞ ಮಹಾಬಲ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.
ಮತ್ತೊಂದು ಪ್ರಮುಖ ತಾಂತ್ರಿಕ ಅಂಶವೆಂದರೆ ಬಟ್ಟೆ ಮತ್ತು ಗಾಯಗಳ ನಡುವಿನ ವ್ಯತ್ಯಾಸ. ಫಾರೆನ್ಸಿಕ್ ವರದಿಯಂತೆ, ವಿದ್ಯಾರ್ಥಿನಿಯ ಶರ್ಟ್ ಮೇಲೆ ಕೇವಲ 3 ಕಟ್ಗಳಿದ್ದವು, ಆದರೆ ಆಕೆಯ ಕೈ ಮೇಲೆ 5 ಗಾಯಗಳಿದ್ದವು. ಅಪಹರಣಕಾರರು ಹಲ್ಲೆ ನಡೆಸಿದ್ದಲ್ಲಿ ಬಟ್ಟೆ ಮತ್ತು ಗಾಯಗಳ ನಡುವೆ ಇಂತಹ ಅಸಮತೋಲನ ಇರಲು ಸಾಧ್ಯವಿಲ್ಲ. ಇದು ವಿದ್ಯಾರ್ಥಿನಿಯೇ ಬ್ಲೇಡ್ ಬಳಸಿ ಗಾಯ ಮಾಡಿಕೊಂಡ ನಂತರ ಕತೆ ಸೃಷ್ಟಿಸಿದ್ದಾಳೆ ಎಂಬುದಕ್ಕೆ ಭದ್ರ ಸಾಕ್ಷ್ಯ ಒದಗಿಸಿದೆ. ದಕ್ಷಿಣ ಕನ್ನಡ ಮತ್ತು ಮಂಗಳೂರು ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ‘ನಕಲಿ ಹಲ್ಲೆ’ ಪ್ರಕರಣಗಳು ಮರುಕಳಿಸುತ್ತಿರುವುದು ಆತಂಕಕಾರಿ ಬೆಳವಣಿಗೆ.
ಮಂಗಳೂರಿನ ಕಾಲೇಜು ಸೇರಲು ಪ್ಲಾನ್!
ಕೇವಲ ಕಾಲೇಜು ಬದಲಾಯಿಸುವ ಹಠಕ್ಕಾಗಿ ಇಷ್ಟೊಂದು ವ್ಯವಸ್ಥಿತವಾಗಿ ಸುಳ್ಳಿನ ಜಾಲ ಹೆಣೆದದ್ದು ಆಘಾತಕಾರಿ. ತನ್ನ ಪುಸ್ತಕಗಳನ್ನು ತಾನೇ ಸುಟ್ಟು ಹಾಕಿ, ಬ್ಯಾಗ್ ಕಳುವಾಗಿದೆ ಎಂದು ಬಿಂಬಿಸಿದ್ದು ಮತ್ತು ಕೈ ಕೊಯ್ದುಕೊಂಡು ರಕ್ತ ಸುರಿಸುತ್ತಾ ಆಸ್ಪತ್ರೆ ಸೇರಿದ್ದು ದೊಡ್ಡ ಮಟ್ಟದ ಕಾನೂನು ಸುವ್ಯವಸ್ಥೆಯ ತಲ್ಲಣಕ್ಕೆ ಕಾರಣವಾಗಿತ್ತು. ಕ್ಷೇತ್ರದ ಶಾಸಕರು ಮತ್ತು ಉನ್ನತ ಪೊಲೀಸ್ ಅಧಿಕಾರಿಗಳು ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಧಾವಿಸಿದ್ದರು. ಆದರೆ, ಒಬ್ಬ ಅಪ್ರಾಪ್ತ ವಿದ್ಯಾರ್ಥಿನಿ ಇಷ್ಟೊಂದು ರೋಚಕವಾಗಿ ಕತೆ ಕಟ್ಟಿದ್ದು ಭಾವನಾತ್ಮಕವಾಗಿ ಹಾದಿ ತಪ್ಪಿಸುವ ಪ್ರಯತ್ನ ನಡೆಸಿದ್ದು, ಇಂತಹ ಘಟನೆಗಳು ಸಾರ್ವಜನಿಕರಲ್ಲಿ ಅನಗತ್ಯ ಭಯ ಹುಟ್ಟಿಸುವುದರ ಜೊತೆಗೆ, ನಿಜವಾದ ಸಂಕಷ್ಟದಲ್ಲಿರುವವರಿಗೆ ಸಿಗಬೇಕಾದ ಪೊಲೀಸ್ ನೆರವು ಮತ್ತು ತುರ್ತು ಸೇವೆಯ ಸಮಯವನ್ನು ವ್ಯರ್ಥ ಮಾಡುತ್ತವೆ ಎಂಬ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.








