ಕರಾವಳಿ ಟಾಪ್ ನ್ಯೂಸ್
• ಮಂಗಳೂರು-ಮೂಡುಬಿದ್ರೆ ರಸ್ತೆ 1 ತಿಂಗಳು ಬಂದ್!
– ರಸ್ತೆ ಕಾಮಗಾರಿ ಹಿನ್ನೆಲೆ ಫೆ.12ರಿಂದ ಮಾರ್ಚ್ 13ರವರೆಗೆ ನಿಷೇಧ
-ಬೈಂದೂರು: ತೀರ್ಥಹಳ್ಳಿ-ಕುಂದಾಪುರ ರಸ್ತೆಯಲ್ಲಿ ಹೊಸ ಸೇತುವೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಮಂಗಳೂರಿನಿಂದ ಮೂಡಬಿದಿರೆ ಹಾಗೂ ಮೂಡಬಿದಿರೆಯಿಂದ ಮಂಗಳೂರಿನ ಕಡೆಗೆ ವಾಹನಗಳ ಓಡಾಟದಿಂದಾಗಿ ರಸ್ತೆಗಳು ಬಿರುಕು ಬಿಟ್ಟು ಕುಸಿಯಲು ಪ್ರಾರಂಭಿಸಿರುವ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇದೇ ತಿಂಗಳ 12ರಿಂದ ಮಾರ್ಚ್ 13ರ ವರೆಗೆ ಒಂದು ತಿಂಗಳ ಕಾಲ ರಸ್ತೆ ದುರಸ್ತಿ ಕಾಮಗಾರಿಯನ್ನು ನಡೆಸಲು ನಿರ್ಧರಿಸಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಮಂಗಳೂರಿನಿಂದ ಮೂಡಬಿದರೆ ಕಡೆಗೆ ಹಾಗೂ ಮೂಡಬಿದರೆಯಿಂದ ಮಂಗಳೂರಿನ ಕಡೆಗೆ ಸಂಚರಿಸುವ ವಾಹನಗಳು ಬದಲಿ ಮಾರ್ಗವನ್ನು ಕಂಡುಕೊಳ್ಳಲು ಸೂಚಿಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಂಗಳೂರು ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಅವರು “ಮೂಡಬಿದಿರೆ ಕಡೆಯಿಂದ ಮಂಗಳೂರಿನೆಡೆಗೆ ಬರುವ ಸಾರ್ವಜನಿಕ ಬಸ್ ಗಳು ಮತ್ತು ಸ್ಥಳೀಯ ಲಘುವಾಹನಗಳು ದಡ್ಡಿ ತಿರುವಿನ ಬಳಿ ಬಲಕ್ಕೆ ತಿರುಗಿ, ಪುಮಾರ್ ಪದವು ತಿರುವು- ಮಂಜನ ಕಟ್ಟೆ ತಿರುವು-ಅರ್ಜುನ ಕೋಡಿ- ಈಶ್ವರ ಕಟ್ಟೆ ತಿರುವು- ಮುಚ್ಚೂರು ತಿರುವಿನ ಬಳಿ ಬಲಕ್ಕೆ ತಿರುಗಿ ಕೈಕಂಬ ಗುರುಪುರ ಮೂಲಕ ಮಂಗಳೂರಿನ ಕಡೆಗೆ ಸಂಚರಿಸುವುದು, ಅದೇ ರೀತಿ ಮಂಗಳೂರಿನ ಕಡೆಯಿಂದ ಮೂಡುಬಿದಿರೆಯೆಡೆಗೆ ಸಂಚರಿಸುವವರು ಗುರುಪುರ-ಕೈಕಂಬದ ಮೂಲಕ ಮೂಡಬಿದರೆ ಕಡೆಗೆ ಹೋಗುವುದು.
ಸಾರ್ವಜನಿಕ ಬಸ್ ಗಳು ಮತ್ತು ಲಘು ವಾಹನಗಳು ಮಾತ್ರ ಗಂಜಿಮಠದಿಂದ ಮುಂದೆ ಮುಚ್ಚೂರು ತಿರುವಿನ ಬಳಿ ಎಡಕ್ಕೆ ತಿರುಗಿ ಈಶ್ವರ ಕಟ್ಟೆ ತಿರುವು- ಅರ್ಜುನಕೋಡಿ- ಮಂಜನ ಕಟ್ಟೆ ತಿರುವು- ಪುಮಾರ್ ಪದವು ತಿರುವು-ದಡ್ಡಿ ತಿರುವಿನ ಬಳಿ ಎಡಕ್ಕೆ ತಿರುಗಿ ಮೂಡಬಿದರೆ ತಲುಪುವ ಮಾರ್ಗವನ್ನು ಅನುಸರಿಸತಕ್ಕದ್ದು. ಹಾಗೆಯೇ ಮಂಗಳೂರಿನ ಕಡೆಯಿಂದ ಮೂಡಿಬಿದಿರೆ ಮೂಲಕ ಕಾರ್ಕಳದತ್ತ ಸಂಚರಿಸುವ ಎಲ್ಲಾ ಲಾರಿಗಳು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸುರತ್ಕಲ್- ಮೂಲ್ಕಿ- ಪಡುಬಿದ್ರೆಯಿಂದ ಕಾರ್ಕಳದ ಕಡೆಗೆ ಸಂಚರಿಸಬೇಕು” ಎಂದು ತಿಳಿಸಿದ್ದಾರೆ.
ಬೈಂದೂರು: ತೀರ್ಥಹಳ್ಳಿ-ಕುಂದಾಪುರ ರಸ್ತೆಯಲ್ಲಿ ಹೊಸ ಸೇತುವೆ
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕುಂದಾಪುರ ತಾಲ್ಲೂಕು ತೀರ್ಥಹಳ್ಳಿ – ಕುಂದಾಪುರ ರಾಜ್ಯ ಹೆದ್ದಾರಿ ಕಿ. ಮೀ. 75.68 (ಕಂಡ್ಲೂರು) ರಲ್ಲಿನ ಸೇತುವೆಗೆ ₹55 ಕೋಟಿ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಬೈಂದೂರು ಶಾಸಕ ಗುರುರಾಜ್ ಗಂಟೆಹೊಳೆ ಅವರ ಮನವಿಗೆ ಸ್ಪಂದಿಸಿದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸಲಾಗಿದೆ.








