ಈಗ ಅಣಬೆ ಕಾಲ: ಅರೋಗ್ಯಯುತ ಆಹಾರ!
– ಮಳೆ ಹಿಡಿದ ಬೆನ್ನಲ್ಲೇ ಎಲ್ಲೆಡೆ ಅಣಬೆ ಸೀಸನ್
– ಅಣಬೆ ಎಲ್ಲರ ನೆಚ್ಚಿನ ಆಹಾರ…ಮಿಸ್ ಮಾಡ್ಕೋಬೇಡಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಲೆನಾಡು/ಕರಾವಳಿ: ಆಹಾರ ಪ್ರಿಯರ ಅತ್ಯಂತ ಮೆಚ್ಚಿನ ಹಾಗೂ ಪೌಷ್ಟಿಕಾಂಶದ ಆಹಾರ ಅಣಬೆ. ಬಹು ಬೇಡಿಕೆಯ ಆಹಾರ ಕೂಡ. ಪಟ್ಟಣ, ನಗರ, ಹಳ್ಳಿಗಳಲ್ಲಿ ಅಣಬೆಗೆ ಭಾರೀ ಡಿಮ್ಯಾಂಡ್ ಇದೆ. ಮಳೆ ಶುರುವಾಗುವ ಮುನ್ನ ಕಾಡಲ್ಲಿ ಅಣಬೆ ಹುಟ್ಟುವುದು ಸಾಮಾನ್ಯ. ಈ ಅಣಬೆ ವಿಭಿನ್ನ ವಿಭಿನ್ನ ರೀತಿಯಲ್ಲಿ ಸಿಗುತ್ತವೆ.
ಅರೋಗ್ಯಯುತ ಆಹಾರ..!
ಮಾನವನ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ, ಜೀರ್ಣಕ್ರಿಯೆಯನ್ನು ಸುಧಾರಿಸುವ, ತೂಕ ಇಳಿಕೆಗೆ ನೆರವಾಗುವ ಮತ್ತು ಮೂಳೆಗಳನ್ನು ಬಲಪಡಿಸುವ ವಿಟಮಿನ್ ಡಿ, ಬಿ ಹಾಗೂ ಪ್ರೋಟೀನ್ ಅನ್ನು ಸಮೃದ್ಧವಾಗಿ ಹೊಂದಿರುವ ಪದಾರ್ಥವಾದ ಅಣಬೆಯು ಇದೀಗ ಮಲೆನಾಡಿನಲ್ಲಿ ಸಂಭವಿಸಿದ ತೀವ್ರ ಮಳೆಯಿಂದಾಗಿ ತಲೆಯೆತ್ತಿ ನಿಂತಿದೆ. ಮಳೆಯ ಪರಿಣಾಮವಾಗಿ ಮಲೆನಾಡಿನ ನೆಲವು ತಂಪಾಗಿರುವ ಕಾರಣ ಅಣಬೆಗಳು ಮಣ್ಣಿನ ಮೇಲೆ ಈಗಾಗಲೇ ಹುಟ್ಟಿಕೊಂಡಿದ್ದು, ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರು ಮತ್ತು ಅದರ ರುಚಿಗೆ ಮಾರುಹೋಗಿರುವ ಆಹಾರಪ್ರಿಯರಿಗೆ ಬಹುಬೇಗ ಲಭಿಸಿದಂತಾಗಿದೆ. ಕೇವಲ ಮಲೆನಾಡು ಅಷ್ಟೇ ಅಲ್ಲದೆ ರಾಜ್ಯದ ಹಲವಾರು ಭಾಗಗಳಲ್ಲಿ ಇದಕ್ಕೆ ಬಹು ಬೇಡಿಕೆಯಿದ್ದು ಈ ಬಾರಿ ಎಲ್ಲರಿಗೂ ಬೇಗನೆ ಸಿಗುವಂತಾಗಿದೆ.
ಎಲ್ಲಾ ಅಣಬೆಗಳು ತಿನ್ನೋಕೆ ಆಗಲ್ಲ..!
ಮತ್ತೊಂದು ಆತಂಕಕಾರಿ ಸಂಗತಿ ಎಂದರೆ ಅಣಬೆಗಳಲ್ಲಿ ವಿಷಕಾರಿ ಅಣಬೆಗಳು ಕೂಡ ಸೇರಿಕೊಂಡಿವೆ. ಎಲ್ಲಾ ಅಣಬೆಗಳು ತಿನ್ನೋಕೆ ಅಲ್ಲ. ವಿಷ ಅಣಬೆ ಇವೆ. ಜೀವ ಹಾನಿ, ಫುಡ್ ಪಾಯಿಸನಿಂಗ್ ಕೂಡ ಆಗಲಿದೆ. ಅಣಬೆಗಳನ್ನು ಮಾರಾಟ ಮಾಡುವವರು ಮತ್ತು ಅದನ್ನು ಖರೀದಿಸುವವರು ಜಾಗೃತಿಯಿಂದ ನೋಡಿಕೊಂಡು ತೆಗೆದುಕೊಳ್ಳಬೇಕು. ಹೆಗ್ಗಲು ಅಣಬೆ, ಎಣ್ಣೆ ಅಣಬೆ, ಚುಳ್ಳ ಅಣಬೆ, ಹೈಗ ಅಣಬೆ ಸೇರಿದಂತೆ ಅನೇಕ ಅಣಬೆಗಳು ಈಗ ಸಿಗುತ್ತಿವೆ.








