ಚಿಕ್ಕಮಗಳೂರು ಟಾಪ್ ನ್ಯೂಸ್
• ಚಿಕ್ಕಮಗಳೂರು: ಮಗುವಿನ ಮರ್ಮಾಂಗಕ್ಕೆ ತಗುಲಿದ ಕಬ್ಬಿಣ!
• ನರಸಿಂಹರಾಜಪುರ : ದಂಪತಿ ಹತ್ಯೆ: ಹಂತಕನಿಗೆ ಮರಣದಂಡನೆ
• ಚಿಕ್ಕಮಗಳೂರು: ಮದುವೆಯಾದ 2 ತಿಂಗಳೊಳಗೆ ಪತಿ ಕೊಂದ ಪತ್ನಿ!
• ಕೊಪ್ಪ: ಕಾಡಿಗೆ ಬೆಂಕಿ: ಅಗ್ನಿ ಶಾಮಕ ದಳದ ಕಾರ್ಯಾಚರಣೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಚಿಕ್ಕಮಗಳೂರು: ಅಂಗನವಾಡಿ ಕೇಂದ್ರದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ, ಮಗುವಿನ ಮರ್ಮಾಂಗಕ್ಕೆ ಕಬ್ಬಿಣದ ತಂತಿ ತಗುಲಿ, ಗಂಭೀರವಾಗಿ ಗಾಯಗೊಂಡಿರುವ ಘಟನೆ ಗೌರಿಕಾಲುವೆ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ. ಮಗು ಅಂಗನವಾಡಿಯಲ್ಲಿ ತನ್ನ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಮರಕ್ಕೆ ಅಳವಡಿಸಿದ್ದ ಕಬ್ಬಿಣದ ಜಾಲರಿಯ ತಂತಿ ತಗುಲಿ ಈ ರೀತಿಯ ದುರ್ಘಟನೆ ಸಂಭವಿಸಿದೆ. ಇದನ್ನು ಗಮನಿಸಿದ ಶಿಕ್ಷಕಿಯು ಮಗುವಿನ ಪೋಷಕರಿಗೆ ಯಾವುದೇ ಮಾಹಿತಿ ನೀಡದೆ ಮತ್ತೊಂದು ಮಗುವಿನ ಪೋಷಕರೊಂದಿಗೆ ಮನೆಗೆ ಕಳುಹಿಸಿದ್ದಾರೆ.
ಮನೆಗೆ ಆಗಮಿಸಿದ ಮಗು ಒಂದೇ ಸಮನೆ ಅಳುತ್ತಿರುವುದನ್ನು ಕಂಡು ಗಾಬರಿಗೊಂಡ ಮಗುವಿನ ಪೋಷಕರು, ಮಗುವನ್ನು ಸಂಪೂರ್ಣವಾಗಿ ಪರೀಕ್ಷಿಸಿದಾಗ ನಿಜಾಂಶ ಬೆಳಕಿಗೆ ಬಂದಿದೆ. ತಕ್ಷಣ ಪೋಷಕರು ಮಗುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಮಗುವನ್ನು ಪರೀಕ್ಷಿಸಿ ಮರ್ಮಾಂಗಕ್ಕೆ ಗಂಭೀರವಾಗಿ ಗಾಯವಾಗಿರುವುದನ್ನು ದೃಢಪಡಿಸಿದ್ದಾರೆ. ಬಳಿಕ ಆರು ಹೊಲಿಗೆಗಳನ್ನು ಹಾಕಿ ಅಪಾಯದಿಂದ ಪಾರುಗೊಳಿಸಿದ್ದಾರೆ. ಇದರಿಂದ ಕೋಪೋದ್ರಿಕ್ತರಾದ ಮಗುವಿನ ಪೋಷಕರು, ಅಂಗನವಾಡಿ ಶಿಕ್ಷಕಿಯ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ನರಸಿಂಹರಾಜಪುರ : ದಂಪತಿ ಹತ್ಯೆ; ಆರೋಪಿಗೆ ಮರಣದಂಡನೆ
ನರಸಿಂಹರಾಜಪುರ: ಕಳೆದ ಕೆಲವು ವರ್ಷಗಳ ದಂಪತಿ ಹತ್ಯೆಗೆ ಸಂಬಂಧಿಸಿದಂತೆ ತೀರ್ಪು ಪ್ರಕಟಗೊಂಡಿದೆ. ಧರ್ಮಯ್ಯ ಎನ್ನುವವರ ಪತ್ನಿ ಭಾರತಿ ಜೊತೆಗೆ ಗೋವಿಂದಪ್ಪ ಎನ್ನುವವರು ಅಕ್ರಮ ಸಂಬಂಧವನ್ನು ಹೊಂದಿದ್ದು, ವಿಚಾರ ತಿಳಿಯುತ್ತಿದ್ದಂತೆ ಭಾರತಿಯ ಅಣ್ಣತಮ್ಮಂದಿರು ಆಕೆಗೆ ಬುದ್ಧಿವಾದ ಹೇಳಿ, ಗೋವಿಂದಪ್ಪನ ಜೊತೆಗಿನ ಅಕ್ರಮ ಸಂಬಂಧದಿಂದ ದೂರವಿರುವಂತೆ ಮಾಡಿದ್ದರು. ತನ್ನ ಅಕ್ರಮ ಸಂಬಂಧಕ್ಕೆ ಭಾರತಿಯ ಗಂಡ ಧರ್ಮಯ್ಯ ಅಡ್ಡಿಯಾಗಿದ್ದಾನೆ ಎಂದು ಆಕ್ರೋಶಗೊಂಡಿದ್ದ ಗೋವಿಂದಪ್ಪ, 2019ರ ಆಗಸ್ಟ್ 30ರಂದು ಧರ್ಮಯ್ಯ ಅವರ ಮನೆಯ ಹಿಂಬಾಗಿಲಿನಿಂದ ನುಗ್ಗಿ, ಧರ್ಮಯ್ಯ ಮತ್ತು ಭಾರತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದನು.
ಈ ಹಿನ್ನೆಲೆಯಲ್ಲಿ ಗೋವಿಂದಪ್ಪನ ವಿರುದ್ಧ ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯ ಬಳಿಕ ಸಿಪಿಐ ಮಂಜು ಅವರು ಗೋವಿಂದಪ್ಪನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಗೋವಿಂದಪ್ಪ ಕೃತ್ಯ ಎಸಗಿರುವುದು ಸಾಬೀತಾಗಿರುವುದರಿಂದ, ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಅವರು ಗೋವಿಂದಪ್ಪನಿಗೆ 20.000 ರೂಪಾಯಿ ದಂಡದ ಜೊತೆಗೆ, ಮರಣದಂಡನೆಯನ್ನು ವಿಧಿಸುವಂತೆ ತೀರ್ಪನ್ನು ನೀಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ಮದುವೆಯಾದ 2 ತಿಂಗಳೊಳಗೆ ಪತಿಗೆ ಮುಹೂರ್ತ ಇಟ್ಟ ಪತ್ನಿ!
ಚಿಕ್ಕಮಗಳೂರು: ಆಂಟಿ ಹಿಂದೆ ಬಿದ್ದ ಯುವಕನ ಮಸಲತ್ತಿಗೆ ಗುಜುರಿ ವ್ಯಾಪಾರಿ ಬಲಿ ಆಗಿದ್ದಾನೆ. ಫರ್ಜಾನ (31), ಧನರಾಜ್ (24) ವೆಂಕಟೇಶ್ (24) ಹಾಗೂ ದರ್ಶನ್ (24) ಬಂಧಿತ ಆರೋಪಿಗಳು. ಮನ್ಸೂರ್ ಪಾಷ (31) ಎಂಬಾತನನ್ನು ಮಾ.4ರಂದು ಕೊಲೆ ಮಾಡಲಾಗಿತ್ತು. ತಿಪಟೂರು ಗ್ರಾಮಾಂತರದ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದ ತೋಟವೊಂದರಲ್ಲಿ ಕೊಲೆ ಮಾಡಲಾಗಿತ್ತು. ಜನವರಿಯಲ್ಲಿ ಕುಟುಂಬ ನಿಶ್ಚಯದಂತೆ ಫರ್ಜಾನ ವಿವಾಹವಾಗಿದ್ದ ಮನ್ಸೂರ್ ತಿಪಟೂರು ಪಟ್ಟಣದಲ್ಲಿ ವಾಸವಾಗಿದ್ದ. ಮಾರ್ಚ್ 4ರಂದು ಗುಜರಿ ಸಾಮಾನು ತರಲೆಂದು ಹೊದಾಗ ನಾಪತ್ತೆಯಾಗಿದ್ದ.
ಆ ಬಳಿಕ ಕುಟುಂಬಸ್ಥರಿಂದ ಆತನಿಗಾಗಿ ಹುಡುಕಾಟ ನಡೆದಿತ್ತು. ಬಳಿಕ ಚಿಕ್ಕಗೊಟ್ಟಗಿಹಳ್ಳಿಯಲ್ಲಿ ಶವ ಪತ್ತೆಯಾಗಿತ್ತು. ಬಳಿಕ ಘಟನೆ ಸಂಬಂಧ ತಿಪಟೂರು ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದ ಪೊಲೀಸರು ನಡೆಸಿದ ತನಿಖೆ ವೇಳೆ ಚಿಕ್ಕಮಗಳೂರಿನ ಯುವಕರ ಗ್ಯಾಂಗ್ ನಿಂದ ಕೃತ್ಯ ಎಂಬುದು ಪತ್ತೆಯಾಗಿದೆ. ಟೆಕ್ನಿಕಲ್ ಮಾಹಿತಿ ಆಧರಿಸಿ ವೆಂಕಟೇಶ್,ದರ್ಶನ್ ಹಾಗೂ ಧನರಾಜ್ ಬಂಧನ ಮಾಡಲಾಗಿದೆ. ಆರೋಪಿ ಧನರಾಜ್ ಫರ್ಜಾನ್ ಜತೆ ಪ್ರೀತಿ ಮಾಡುತ್ತಿದ್ದ. ಪ್ರೇಮದಲ್ಲಿ ಚಿಕ್ಕಮಗಳೂರಿನಲ್ಲಿ ಓಡಾಡಿದ್ದ ಜೋಡಿ..ನಂತರ ಒಮ್ಮೆ ತಿಪಟೂರಿನ ರೈಲು ನಿಲ್ದಾಣದ ಬಳಿ ಇದ್ದಾಗ ಸಿಕ್ಕಿ ಬಿದಿದ್ದರು.ಜನವರಿಯಲ್ಲಿ ನಡೆದ ಗಲಾಟೆ ಬಳಿಕ ತರಾತುರಿಲ್ಲಿ ಮನ್ಸೂರ್ ಜೊತೆ ಫರ್ಜಾನ ಮದುವೆಯಾಗಿತ್ತು.
ಕೊಪ್ಪ ಪಟ್ಟಣದಲ್ಲಿ ಬೆಂಕಿ: ಹೆಚ್ಚಿದ ಬೆಂಕಿ ಅನಾಹುತ!
ಕೊಪ್ಪತಾಲೂಕಿನ ಬಾಳಗಡಿಯಲ್ಲಿ ಕೆ ಇ ಬಿ ಕಛೇರಿಯ ಪಕ್ಕದ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಶಾಮಕ ದಳದ ಅಧಿಕಾರಿಗಳು ಬೆಂಕಿ ನಂದಿಸಿದರು.








