ರಾಜ್ಯದಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ!
– ಚಿಕ್ಕಮಗಳೂರು ಜಿಲ್ಲೆಯಿಂದ ಕೊಡಗಿಗೆ ಹೋದವೇ ಆನೆಗಳು!
– ಕೊಡಗು ಜಿಲ್ಲೆಯಲ್ಲಿ ಮೂರನೇ ಬಲಿ ಪಡೆದ ಆನೆಗಳು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕೊಡಗು/ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡು ಆನೆಗಳ ಹಾವಳಿ ಹೆಚ್ಚಾಗಿದ್ದು, 20ಕ್ಕೂ ಹೆಚ್ಚು ಜನ ಜೀವ ಹಾನಿಯಾಗಿದೆ. ಈ ನಡುವೆ ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಅಟ್ಟಹಾಸ ಮುಂದುವರಿದಿದ್ದು, ವಿರಾಜಪೇಟೆಯ ಸಿದ್ದಾಪುರದಲ್ಲಿ ಕಾಫಿ ಬೆಳೆಗಾರನೋರ್ವ ದಾಳಿಗೆ ಬಲಿಯಾಗಿದ್ದಾರೆ. ಇದು ಕೆಲವೇ ದಿನಗಳಲ್ಲಿ ನಡೆದ ಮೂರನೇ ಸಾವಾಗಿದ್ದು, ಪಿಯುಸಿ ವಿದ್ಯಾರ್ಥಿನಿ ಪೂಜ್ಯ ಹಾಗೂ ಮಾಜಿ ಪಂಚಾಯತ್ ಸದಸ್ಯೆ ಜಲಜಾಕ್ಷಿ ಕೂಡ ಆನೆ ದಾಳಿಗೆ ಬಲಿಯಾಗಿದ್ದರು. ಸಾಲು ಸಾಲು ಸಾವುಗಳಿಂದ ಜನರು ತೀವ್ರ ಆತಂಕಗೊಂಡಿದ್ದು, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕಾಡಾನೆಗಳ ಅಟ್ಟಹಾಸ ಮುಂದುವರಿದಿದ್ದು, ನಂಜರಾಯಪಟ್ಟಣ ಗ್ರಾಮ ಪಂಚಾಯತ್ ಮಾಜಿ ಸದಸ್ಯೆಯ ಸಾವು ಮಾಸುವ ಮುನ್ನವೇ ಮತ್ತೊಂದು ಬಲಿಯಾಗಿದೆ. ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪ ಹೈಸ್ಕೂಲ್ ಪೈಸಾರಿಯಲ್ಲಿ ಕಾಫಿ ತೋಟಕ್ಕೆ ತೆರಳಿದ್ದ ಬೆಳೆಗಾರನ ಮೇಲೆ ಸಲಗ ಅಟ್ಯಾಕ್ ಮಾಡಿದ ಪರಿಣಾಮ ಗಣಪತಿ (49) ಮೃತಪಟ್ಟಿದ್ದಾರೆ. ಹಾಡಹಗಲೇ ಕಾಫಿ ತೋಟದಲ್ಲಿ ಕಾಡಾನೆ ಕಾಣಿಸಿಕೊಂಡ ಪರಿಣಾಮ ಸ್ಥಳಕ್ಕೆ ಪೊಲೀಸರು, ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








