ಕರಾವಳಿ ಟಾಪ್ ನ್ಯೂಸ್
• ಪುತ್ತೂರು: ತಲವಾರು ಹಿಡಿದು ಓಡಾಡಿದವನ ಮೇಲೆ ಕೇಸ್!
• ಬ್ರಹ್ಮಾವರ: 10 ಮಂದಿ ಪೊಲೀಸರ ವಶಕ್ಕೆ
• ಉಡುಪಿ: ಮಕ್ಕಳ ಅಪಹರಣ ಸುಳ್ಳು ಸುದ್ದಿ
• ಬೆಳ್ತಂಗಡಿ: ಹಾವು ಕಚ್ಚಿ ವ್ಯಕ್ತಿ ಸಾವು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಪುತ್ತೂರು: ವ್ಯಕ್ತಿಯೊಬ್ಬ ತಲವಾರು ಹಿಡಿದು ಜನರನ್ನು ಭಯಗೊಳಿಸಿದ ಘಟನೆ ಪುತ್ತೂರಿನ ಮುಕ್ವೆ ಜಂಕ್ಷನ್ ನಲ್ಲಿ ನಡೆದಿದ್ದು, ಓರ್ವನ ವಿರುದ್ಧ ಕೇಸ್ ದಾಖಲಾಗಿದೆ. ಅಬ್ದುಲ್ ರಹಿಮ್ ಎನ್ನುವ ವ್ಯಕ್ತಿಯು ಸಂಜೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ರಾತ್ರಿಯ ವೇಳೆ ಮಸೀದಿಯ ಬಳಿ ಬಂದು ಸಿಯಾಬ್ ಎಲ್ಲಿ ಎಂದು ಕೇಳಿ ಗಲಾಟೆ ಆರಂಭಿಸಿದ್ದಾನೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಮಸೀದಿಯವರು ಅಬ್ದುಲ್ ರಹಿಮ್ ನನ್ನು ಅಲ್ಲಿಂದ ಕಳುಹಿಸಿದ್ದಾರೆ.ಹತ್ತು ನಿಮಿಷಗಳ ಬಳಿಕ ಮರಳಿ ಬಂದ ಅಬ್ದುಲ್ ರಹಿಮ್ ತಲವಾರು ಹಿಡಿದುಕೊಂಡು ಬೀಸುತ್ತಾ, ಜನರಲ್ಲಿ ಭಯವನ್ನು ಹುಟ್ಟಿಸಿದ್ದಾನೆ. ಜನದಟ್ಟಣೆ ಹೆಚ್ಚಾಗುತ್ತಿದ್ದಂತೆ ಅಬ್ದುಲ್ ರಹಿಮ್ ಅಲ್ಲಿಂದ ಆಟೋ ಹತ್ತಿ ಪರಾರಿಯಾಗಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ಸಿರಾಜುದ್ದೀನ್ ಎನ್ನುವವರು ನೀಡಿದ ದೂರಿನ ಆಧಾರದ ಮೇಲೆ ಅಬ್ದುಲ್ ರಹಿಮ್ ನ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಬ್ರಹ್ಮಾವರ: ಗರಗರ ಮಂಡಲ ಜುಗಾರಿ; ಹತ್ತು ಮಂದಿ ಪೊಲೀಸರ ವಶಕ್ಕೆ
ಬ್ರಹ್ಮಾವರ: ಗರಗರ ಮಂಡಲ ಜುಗಾರಿ ಆಟದಲ್ಲಿ ನಿರತರಾಗಿದ್ದ ಹತ್ತು ಮಂದಿಯನ್ನು ಬಂಧಿಸಿದ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಹರೀಶ್, ಗುರುರಾಜ್, ವೆಂಕಟೇಶ್ ಪೂಜಾರಿ,ಹರ್ಷ, ಸುರೇಶ್ ನಾಯ್ಕ, ರಾಜ ನಾಯ್ಕ, ಪೀಟರ್ ಡಿ ಮೆಲ್ಲೊ, ನಾಗೇಶ್, ನಾಗರಾಜ ಮತ್ತು ರಾಜೇಶ್ ಎನ್ನುವ ಹತ್ತು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಈ ಸಂದರ್ಭದಲ್ಲಿ 3 ದ್ವಿಚಕ್ರ ವಾಹನಗಳನ್ನು, 9 ಮೊಬೈಲ್ ಗಳನ್ನು, ಮತ್ತು ಆಟಕ್ಕೆ ಬಳಸಿದ ವಸ್ತುಗಳನ್ನು ಒಳಗೊಂಡಂತೆ ಸುಮಾರು 1.54.100 ರೂಪಾಯಿಯಷ್ಟು ಬೆಲೆ ಬಾಳುವ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಉಡುಪಿ: ಮಕ್ಕಳ ಅಪಹರಣ ಸುಳ್ಳು ಸುದ್ಧಿ ಹರಡುವಿಕೆಗೆ ಕಠಿಣ ಕ್ರಮ
ಉಡುಪಿ: ಸಾಮಾಜಿಕ ಜಾಲತಾಣಗಳಲ್ಲಿ ವರದಿಯೊಂದು ಹರಿದಾಡುತ್ತಿದ್ದು,”ಮಕ್ಕಳ ಅಪಹರಣಕಾರರು ವೇಷಮರೆಸಿಕೊಂಡು ಅಲೆಯೂರು,ಬೆಳ್ಳೆ ಮತ್ತು ಕುಂತಲ್ ನಗರ ಪ್ರದೇಶಗಳಲ್ಲಿ ಓಡಾಡುತ್ತಿದ್ದಾರೆ, ಬೆಳಿಗ್ಗೆ ಮತ್ತು ಸಂಜೆ ಮಕ್ಕಳು ಆಟೋದಲ್ಲಿ ಹೋಗುವಾಗ ಪೋಷಕರು ತಮ್ಮ ಮಕ್ಕಳೊಂದಿಗೆ ಇರಬೇಕು” ಎಂದು ತಿಳಿಸಿದೆ. ಆದರೆ ಇದು ಸಂಪೂರ್ಣ ಸುಳ್ಳು ಸುದ್ಧಿಯಾಗಿದೆ ಎನ್ನುವುದನ್ನು ಪೊಲೀಸ್ ವರಿಷ್ಠಾಧಿಕಾರಿಗಳಾದ ಶಂಕರ್ ಸ್ಪಷ್ಟಪಡಿಸಿದ್ದು, ಅಂತಹ ನಕಲಿ ಸಂದೇಶಗಳನ್ನು ಇತರರಿಗೆ ಫಾರ್ವರ್ಡ್ ಮಾಡಬೇಡಿ ಎಂದು ಎಚ್ಚರಿಸಿದ್ದಾರೆ. “ಯಾರಾದರೂ ಅಂತಹ ಸಂದೇಶಗಳನ್ನು ಹಂಚಿಕೊಳ್ಳುತ್ತಿರುವುದು ಕಂಡುಬಂದಲ್ಲಿ ತಕ್ಷಣ ಅಧಿಕಾರಿಗಳಿಗೆ ತಿಳಿಸಿ” ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಔಪಚಾರಿಕ ಪ್ರಕರಣವನ್ನು ದಾಖಲಿಸಲಾಗುವುದು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
•ಬೆಳ್ತಂಗಡಿ: ಹಾವು ಕಚ್ಚಿ ವ್ಯಕ್ತಿ ಸಾವು
ಬೆಳ್ತಂಗಡಿ: ಶಿಶಿಲ ಗ್ರಾಮದಲ್ಲಿ ಇತ್ತೀಚಿನ ದಿನಗಳಲ್ಲಿ ವಿಷಸರ್ಪಗಳ ಹಾವಳಿ ಅಧಿಕಗೊಂಡಿದ್ದು, ಕೆಲವೊಮ್ಮೆ ಮನೆಯ ಬಾಗಿಲವರೆಗೂ ಬಂದು ಹೋಗುವುದು ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿದೆ. ಕಳೆದ ತಿಂಗಳು ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಓರ್ವ ಮಹಿಳೆ ಮತ್ತು ಇಬ್ಬರು ಪುರುಷರಿಗೆ ಹಾವು ಕಚ್ಚಿತ್ತು. ಅದರಲ್ಲಿ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮತ್ತಿಬ್ಬರು ಪುರುಷರು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಇದರ ಬೆನ್ನಲ್ಲೇ ಮಾರ್ಚ್ 3ರಂದು ಕಾರೆಗುಡ್ಡೆ ನಿವಾಸಿ ಚೋಮ ಎನ್ನುವವರು ತೋಟದಲ್ಲಿನ ಬಾಳೆಗಿಡಕ್ಕೆ ಮಣ್ಣು ಹಾಕುತ್ತಿದ್ದ ಸಮಯದಲ್ಲಿ ನಾಗರಹಾವೊಂದು ಕಚ್ಚಿದ್ದು, ತಕ್ಷಣ ಅವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಚೋಮ ಅವರು ಕಳೆದೆರಡು ದಿನಗಳ ಹಿಂದೆ ಮೃತಪಟ್ಟಿರುವ ಸಂಗತಿ ತಿಳಿದುಬಂದಿದೆ. ಇದರಿಂದಾಗಿ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಪಡಿಸಿದ್ದಾರೆ.








