ಯುದ್ಧದ ಎಫೆಕ್ಟ್: ಸಿಲಿಂಡರ್ ಇನ್ನು ಸಿಗೋದು ಕಷ್ಟ?!
– ಸಿಲಿಂಡರ್ ಬುಕ್ಕಿಂಗ್ ನಲ್ಲಿ ಹೊಸ ನಿಯಮ: ಏನೇನು?
– ಯುದ್ಧದ ಸನ್ನಿವೇಶ ತಣ್ಣಗಾಗುವವರೆಗೆ ಸಿಲಿಂಡರ್ ವ್ಯತ್ಯಯ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನವದೆಹಲಿ: ಯುದ್ಧದ ಎಫೆಕ್ಟ್ ಇದೀಗ ಭಾರತಕ್ಕೂ ಬಿದ್ದಿದೆ. ಅಡುಗೆ ಅನಿಲದ ಪೂರೈಕೆಯಲ್ಲಿ ತೀವ್ರತರವಾದ ಕೊರತೆಯುಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸಿಲಿಂಡರ್ ಬುಕ್ಕಿಂಗ್ ವಿಚಾರದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಯುದ್ಧ ಹಿನ್ನೆಲೆ ಗ್ಯಾಸ್ ಪೂರೈಕೆಯಲ್ಲಿನ ವ್ಯತ್ಯಾಸ ಮತ್ತು ಗ್ರಾಹಕರಲ್ಲಿ ಮನೆ ಮಾಡಿರುವ ಆತಂಕವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.
ಮತ್ತೊಂದು ಕಡೆಯಿಂದ ದೇಶದ ಹಲವಾರು ಗ್ರಾಹಕರು ಸಿಲಿಂಡರ್ ಖಾಲಿಯಾಗುವ ಮೊದಲೇ, ಅಂದರೆ ಎರಡು ತಿಂಗಳಿಗೊಮ್ಮೆ ಬುಕ್ ಮಾಡುತ್ತಿದ್ದವರು ಇದೀಗ 15 ದಿನಗಳಲ್ಲೇ ಪುನಃ ಬುಕ್ಕಿಂಗ್ ಮಾಡುತ್ತಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಮತ್ತಷ್ಟು ಸಿಲಿಂಡರ್ ವಿಚಾರದಲ್ಲಿ ಕೃತಕ ಅಭಾವ ತಲೆದೋರುತ್ತಿದೆ ಎನ್ನಲಾಗಿದೆ.
ಭಾರತದಲ್ಲಿಯೂ ಆತಂಕ: ಬುಕ್ಕಿಂಗ್ ನಿಯಮ ಬದಲು!
ಸರ್ಕಾರವು ಭಾರತದಲ್ಲಿ ಅನಿಲದ ದಾಸ್ತಾನು ಸಮರ್ಪಕವಾಗಿದೆ ಎನ್ನುವ ಆಶ್ವಾಸನೆಯನ್ನು ನೀಡುತ್ತಿದ್ದರೂ, ಇನ್ನೊಂದೆಡೆ ಬುಕ್ಕಿಂಗ್ ಅವಧಿಯನ್ನು ಇದ್ದಕ್ಕಿದ್ದಂತೆ ಹೆಚ್ಚಳಗೊಳಿಸಿರುವುದು ಜನಸಾಮಾನ್ಯರಲ್ಲಿ ಚಿಂತೆಯನ್ನುಂಟು ಮಾಡಿದೆ. ಅದರಲ್ಲೂ ಮಧ್ಯಮ ಮತ್ತು ದೊಡ್ಡ ಕುಟುಂಬದಲ್ಲಿ 25 ದಿನಗಳ ಸಿಲಿಂಡರ್ ಮಿತಿಯು ಹೆಚ್ಚಿನ ಸಮಸ್ಯೆಯನ್ನುಂಟು ಮಾಡುತ್ತದೆ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿದೆ. ಇದಷ್ಟೇ ಅಲ್ಲದೆ ಸಿಲಿಂಡರ್ ಬೆಲೆ ಮತ್ತು ಪೂರೈಕೆಗೆ ಸಂಬಂಧಿಸಿದ ಸೀಮಿತ ಚೌಕಟ್ಟು ಹೊಟೇಲ್ ಮತ್ತು ರೆಸ್ಟೋರೆಂಟ್ ಉದ್ಯಮಗಳ ಮೇಲೆ ತೀವ್ರತರವಾದ ಪರಿಣಾಮವನ್ನು ಬೀರಿದೆ.
ಎಲ್ಲಾ ಸಮಸ್ಯೆಗಳನ್ನು ನಿವಾರಿಸಿ, ಎಲ್ಲವನ್ನು ಸುಗಮಗೊಳಿಸಲು ತೈಲ ಕಂಪನಿಗಳ ಉತ್ಪನ್ನ ಅಧಿಕಾರಿಗಳು ಸಮಿತಿಯೊಂದನ್ನು ವಿಶೇಷವಾಗಿ ರಚಿಸಿದ್ದು , ಸಮಿತಿಯು ಕೈಗಾರಿಕೆಗಳು ಮತ್ತು ಹೊಟೇಲ್ ಗಳ ಬೇಡಿಕೆಗಳನ್ನು ಪರಿಶೀಲಿಸಿದೆ ಎನ್ನುವ ಮಾಹಿತಿ ಲಭಿಸಿದೆ. ಸಧ್ಯದ ಸಂದರ್ಭದಲ್ಲಿ ಗೃಹಬಳಕೆದಾರರಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಸಚಿವಾಲಯವು ಸ್ಪಷ್ಟಪಡಿಸಿದೆ. ಇದರೊಂದಿಗೆ ಯುದ್ಧದ ಸನ್ನಿವೇಶ ತಣ್ಣಗಾಗುವವರೆಗೆ ಸಿಲಿಂಡರ್ ಪೂರೈಕೆಯಲ್ಲಿನ ಅನಿಶ್ಚಿತತೆ ಮುಂದುವರಿಯುವುದು ಅನಿವಾರ್ಯವಾಗಿದ್ದು, ದೇಶದ ಪ್ರಜೆಗಳು ಪರಿಸ್ಥಿತಿಯನ್ನು ಅರಿತುಕೊಂಡು ಬಳಕೆಯಲ್ಲಿ ಮಿತಿಯನ್ನಿಟ್ಟುಕೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ.








