ಕೊಪ್ಪದಲ್ಲಿ ಮೃತ ಯುವಕನ ಅಂಗಾಗ ದಾನ!
– ನ.ರಾ.ಪುರ ತಾಲೂಕಿನ ಬೆಳ್ಳೂರಿನ ಮಂಜುನಾಥ್ ಕುಟುಂಬದ ಮಾನವೀಯತೆ
– ಅಪಘಾತದಿಂದ ಮೃತನಾಗಿದ್ದ ಆಟೋ ಚಾಲಕನ ಅಂಗಗಳು ಇನ್ನು ಜೀವಂತ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕೊಪ್ಪ: ರಸ್ತೆ ಅಪಘಾತದಲ್ಲಿ ಗಾಯಗೊಂಡು ಮೆದುಳು ನಿಷ್ಕ್ರಿಯವಾಗಿದ್ದ ನ.ರಾ.ಪುರ ತಾಲೂಕಿನ ಬೆಳ್ಳೂರಿನ ಮಂಜುನಾಥ್(37) ಅವರ ಅಂಗಾಂಗ ದಾನ ಮಾಡಲಾಗಿದೆ. ಈ ಮೂಲಕ ಕುಟುಂಬ ಸಾವಲ್ಲೂ ಮಾನವೀಯತೆ ಮೆರೆದಿದೆ.
ಫೆ.2ರಂದು ಕುದುರೆಗುಂಡಿ ಸಮೀಪ ಆಟೋರಿಕ್ಷ ಪಲ್ಟಿಯಾಗಿ ತಲೆಗೆ ಗಂಭೀರ ಗಾಯಗೊಂಡಿದ್ದ ಚಾಲಕ ಮಂಜುನಾಥ್ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಮೆದುಳು ನಿಷ್ಕ್ರಿಯವಾಗಿದ್ದ ಕಾರಣ ಅಲ್ಲಿಂದ ಕರೆತಂದು ಕುಟುಂಬಸ್ಥರು ಕೊಪ್ಪದ ಪ್ರಶಮನಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮಂಜುನಾಥ್ ಬದುಕಲಿಲ್ಲ. ಕುಟುಂಬಸ್ಥರು ಮೃತರ ಅಂಗಾಂಗ ದಾನಕ್ಕೆ ತೀರ್ಮಾನಿಸಿ ಸಾರ್ಥಕತೆ ಮೆರೆದಿದ್ದಾರೆ. ಕೊಪ್ಪದ ಪ್ರಶಮನಿ ಆಸ್ಪತ್ರೆಯಲ್ಲಿ ಮೃತರ ಪಿತ್ತಜನಕಾಂಗ ,ಮೂತ್ರಪಿಂಡ, ಕಣ್ಣುಗಳ ದಾನ ಪಕ್ರಿಯೆ ನಡೆಯಿತು ಮಣಿಪಾಲ್ ಆಸ್ಪತ್ರೆಯ ವೈದ್ಯರು ಮಂಗಳೂರಿನ ಎಜೆ ಆಸ್ಪತ್ರೆಯ ವೈದ್ಯರು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಕೊಪ್ಪದಿಂದ ಜೀರೋ ಟ್ರಾಪಿಕ್ಕಿನಲ್ಲಿ ಅಂಗಾಂಗಗಳನ್ನು ಮಂಗಳೂರಿಗೆ ಸಾಗಿಸಲಾಯಿತು.
ಸಾವಿನಲ್ಲೂ ಸಾರ್ಥಕತೆ ಮೆರೆದ ಹೃದಯವಂತ ಕುಟುಂಬ!
ಪತಿಯ ಅಗಲಿಕೆಯ ವೇದನೆಯಿಂದ ತುಂಬಿದ್ದ ಅಪೂರ್ವ ಅವರ ಹೃದಯ ಅಂತಹ ಧಾರುಣ ಸಂದರ್ಭದಲ್ಲೂ ಮಾನವೀಯತೆಯೆಡೆಗೆ ಮಿಡಿದಿದ್ದು ಅವರ ಒಳ್ಳೆಯತನಕ್ಕೆ ಸಾಕ್ಷಿಯಾಗಿದೆ. ಮನಸ್ಸನ್ನು ಗಟ್ಟಿ ಮಾಡಿಕೊಂಡ ಅಪೂರ್ವ ಅವರು ತಮ್ಮ ಪತಿ, ಬೇರೆ ಜನರ ನಡುವೆ ಜೀವಿಸಿ, ಸಾವಿನಂಚಿನಲ್ಲಿರುವ ವ್ಯಕ್ತಿಗಳು ಪುನರ್ಜನ್ಮ ಪಡೆದು, ಹೊಸ ಬದುಕನ್ನು ಕಟ್ಟಿಕೊಳ್ಳಲಿ ಎನ್ನುವ ಉದ್ದೇಶದಿಂದ ಮಂಜುನಾಥ್ ಅವರ ಹೃದಯ, ಕಿಡ್ನಿ ಮತ್ತು ಲಿವರ್ ಸೇರಿದಂತೆ ಅಂಗಾಂಗಗಳನ್ನು ದಾನ ಮಾಡುವ ಮಹತ್ವದ ನಿರ್ಧಾರವನ್ನು ಕೈಗೊಂಡರು. ಪತಿಯ ಅಗಲಿಕೆಯ ನೋವು, ಇಬ್ಬರು ಮಕ್ಕಳಿಗೆ ಕಾಡಬಹುದಾದ ಅನಾಥ ಪ್ರಜ್ಞೆ, ಬಡ ಕುಟುಂಬದ ಮುಂದಿನ ಭವಿಷ್ಯದ ಚಿಂತೆ ಎಲ್ಲಾ ಅಂಶಗಳ ನಡುವೆ ಬೇರೆಯವರ ಬದುಕಿಗಾಗಿ ಅಪೂರ್ವ ಅವರು ಕೈಗೊಂಡಿರುವ ಈ ನಿರ್ಧಾರ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ನೀಡುವುದಷ್ಟೇ ಅಲ್ಲದೆ ಪ್ರತಿಯೊಬ್ಬರಿಗೂ ಸ್ಫೂರ್ತಿಯನ್ನು ನೀಡುವಂತಹ ಸಂಗತಿಯಾಗಿದೆ.








