ಅವ್ಯವಸ್ಥೆಯ ಆಗರವಾದ ಎನ್.ಆರ್ ಪುರ ತಾಲೂಕು
* ನಗರದೆಲ್ಲಡೆ ಕಸದ ರಾಶಿ,ಸಂತೆ ಮಾರ್ಕೆಟ್ ತುಂಬಾ ಕಸ
* ಸೋರುತಿದೆ ತಾಲೂಕು ಕಛೇರಿ,ರಸ್ತೆ ತುಂಬೆಲ್ಲ ಹೊಂಡ ಗುಂಡಿ
NAMMMUR EXPRESS NEWS
ಎನ್.ಆರ್ ಪುರ: ಪಟ್ಟವು ಈಗ ಅವ್ಯವಸ್ಥೆಯ ಆಗರವಾಗಿದ್ದು,ನಗರದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿಗಳು ಬಿದ್ದಿವೆ. ಪಟ್ಟದ ಮುಖ್ಯ ಸಂತೆ ಮಾರುಕಟ್ಟೆ ಜಾಗವಂತು ಕಸದ ರಾಶಿಯಲ್ಲೇ ಮುಳುಗಿದೆ. ವಾರದ ಸಂತೆ ಬಳಿಕ ಸರಿಯಾಗಿ ಕಸ ವಿಲೇವಾರಿ ಮಾಡದೇ ಅಲ್ಲಿ ಸೊಳ್ಳೆಗಳ ಸಾಮ್ರಾಜ್ಯ ನಿರ್ಮಾಣಗೊಂಡಿದ್ದು,ಇದರಿಂದ ಡೆಂಗ್ಯು ಪ್ರಕರಣಗಳು ಹೆಚ್ಚುತ್ತಿದ್ದರೂ ಪಟ್ಟಣ ಪಂಚಾಯ್ತಿ ಸರಿಯಾದ ಸಮಯದಲ್ಲಿ ಕ್ಲೀನ್ ಮಾಡದೆ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಪಟ್ಟಣ ರಸ್ತೆಯ ಬದಿಗಳಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಕಾಣಸಿಗುತ್ತೆ,ರಸ್ತೆಯ ಅಕ್ಕಪಕ್ಕದ ಸಣ್ಣಗಿಡಗಳನ್ನು ಸವರಿಹಾಕಿ ಅಲ್ಲೇ ರಾಶಿ ಮಾಡಿ ಇಡಲಾಗಿದ್ದು ಅದನ್ನು ಅಲ್ಲಿಂದ ವಿಲೇವಾರಿ ಮಾಡಿಲ್ಲ. ಅದು ಚರಂಡಿ ಬದಿಯಲ್ಲೇ ಇದ್ದು ಉಳಿದ ಕಸದೊಂದಿಗೆ ಕೊಳೆಯುತ್ತಾ ಸೊಳ್ಳೆಗಳಿಗೆ ಉತ್ತಮ ಜಾಗವಾಗಿದೆ.
ಈ ಬಗ್ಗೆ ಪಟ್ಟಣ ಪಂಚಾಯ್ತಿ ಅಧ್ಯಕ್ಷರ ಮೇಲೆ ಸ್ಥಳೀಯರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದು,ವಾರದ ಸಂತೆ ದಿನಗಳಲ್ಲಿ ತಮಗೆ ಬೇಕಾದವರಿಗೆ ಅಂಗಡಿ ಹಾಕಿಕೊಳ್ಳಲು ಸ್ಥಳಾವಕಾಶ ಮಾಡಿ,ವಾಹನ ಪಾರ್ಕಿಂಗ್ಗೆ ಸ್ಥಳವಿಲ್ಲದಂತೆ ಮಾಡುತ್ತಿದ್ದು, ನಂತರ ಕಸದ ನಿರ್ವಹಣೆ ಮಾಡದೇ ಇರುವುದು ಈ ಬಗ್ಗೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ.
ತಾಲೂಕಿನ ತಾಲೂಕು ಕಛೇರಿ ಸಮಸ್ಯೆ ಮುಗಿಯದ ಗೋಳಾಗಿದೆ ಸಮಸ್ಯೆ ಬಗೆಹರಿಸಿಕೊಳ್ಳಲು ಸಾರ್ವಜನಿಕರು ಹೋದರೆ ಅವರೇ ಸಮಸ್ಯೆ ಅನುಭವಿಸುವಂತಾ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲ ಬಂತೆಂದರೆ ಕಛೇರಿಯ ಮೇಲ್ಛಾವಣಿ ಸೋರಲು ಶುರುವಾಗುತ್ತದೆ. ಇನ್ನೂ ತಾಲೂಕಿನ ಸರ್ಕಾರಿ ಆಸ್ಪತ್ರೆಯ ಕಥೆಯೂ ಇದೆ ಇಲ್ಲೂ ಕೂಡ ಮಳೆಗಾಲದಲ್ಲಿ ಮೇಲ್ಛಾವಣಿ ಸೋರುವುದು ಇದರಿಂದ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಇನ್ನೊಂದೆಡೆ ತಾಲೂಕಿನಲ್ಲಿ ಆನೆ ಕಾಟ ತೀವ್ರವಾಗಿದೆ.ಆನೆ ನಡೆದದ್ದೇ ದಾರಿ ಎಂಬಂತೆ ಆನೆಗಳು ಬಂದು ರೈತರ ಜಮೀನಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡಿ ಹೋಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿಯಾಗಿದೆ.
ತಾಲೂಕಿನ ರಸ್ತೆ ಸ್ಥಿತಿಯಂತು ಕೇಳೋದೆ ಬೇಡ ರಸ್ತೆ ತುಂಬೆಲ್ಲಾ ದೊಡ್ಡ ದೊಡ್ಡ ಗುಂಡಿಗಳಾಗಿದ್ದು ಪ್ರಯಾಣಿಕರು,ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡ ಬೇಕಿದೆ.ಮಳೆಗಾಲ ವಿಪರೀತ ಮಳೆಯಿದ್ದು ಮಳೆಯಿಂದ ರಸ್ತೆ ಗುಂಡಿಗಳೆಲ್ಲ ನೀರಿನಿಂದ ಭರ್ತಿಯಾಗಿರುತ್ತವೆ. ಇದನ್ನ ತಿಳಿಯದ ವಾಹನ ಸವಾರರು ಗುಂಡಿಗೆ ಗಾಡಿ ಇಳಿಸಿ ನಿಯಂತ್ರಣ ಸಿಗದೆ ಅಪಘಾತಗಳಾಗಿ ಜೀವಹಾನಿ ಸಂಭವಿಸುತ್ತಿದೆ.ಕಳೆದ ವಾರ ತಾಲೂಕಿನ ಮಡಬೂರು ಬಳಿ ಗುಂಡಿ ತಪ್ಪಿಸಲುಹೋಗಿ ಕಾರೊಂದು ನಡೆದುಕೊಂಡು ಹೋಗುತ್ತಿದ್ದ ಸ್ಥಳೀಯರೊಬ್ಬರಿಗೆ ಗುದ್ದಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆಗುಂಡಿಗೆ ಬಾಳೆಗಿಡ ನೆಟ್ಟು ಪ್ರತಿಭಟಿಸಿದ್ದರು. ಕೇವಲ ಇದೊಂದು ಜಾಗದಲ್ಲಿ ಮಾತ್ರವಲ್ಲ ಬದಲಾಗಿ ತಾಲೂಕಿನಾದ್ಯಂತ ಇದೇ ಪರಿಸ್ಥಿತಿಯಾಗಿದ್ದು ರಸ್ತೆಗಳು ಗುಂಡಿಮಯವಾಗಿದೆ.ಶಿವಮೊಗ್ಗಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು ನಿತ್ಯ ನೂರಾರು ವಾಹನ ಸಾವಿರಾರು ಪ್ರಯಾಣಿಕರು ಓಡಾಡುತ್ತಾರೆ ಹೀಗಿರುವಾಗ ಶಾಸಕರು ರಸ್ತೆಯನ್ನು ಸುಸ್ಥಿತಿಯಲ್ಲಿಟ್ಟು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಶಾಸಕರ ಕಾರ್ಯವೈಖರಿಯಿಂದ ಬೇಸತ್ತ ಜನ ಅನುದಾನ ತರುವಲ್ಲಿ ವಿಫಲರಾದ ಶಾಸಕರಿಗೆ ಹಾಗೂ ಅನುದಾನ ನೀಡದ ರಾಜ್ಯಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.








