ಮಳೆ ಬಿಡುತ್ತಲೇ ಮರಳು ಮಾಫಿಯಾ ಎಂಟ್ರಿ!
– ಹಳ್ಳ, ನದಿ ಬಗೆಯಲು ಶುರು ಮಾಡಿದ ಮರಳು ಕಳ್ಳರು
– ಗಣಿ, ಕಂದಾಯ, ಪೊಲೀಸ್, ಅರಣ್ಯ ಇಲಾಖೆ ನಿದ್ರೆಯಲ್ಲಿ..
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿ, ಹೊಸನಗರ, ಕೊಪ್ಪ ತಾಲೂಕು ಸೇರಿ ಮಲೆನಾಡಲ್ಲಿ ಮರಳು ಮಾಫಿಯಾ ದಿನದಿಂದ ದಿನಕ್ಕೆ ಮಿತಿ ಮೀರುತ್ತಿದೆ. ಹಳ್ಳ, ನದಿ ಪಾತ್ರಗಳಲ್ಲಿ ಮರಳು ಬಗೆಯಲು ಪರಿಸರ ನಾಶ ಮಾಡಲಾಗುತ್ತಿದೆ. ಜಲಚರ, ಪ್ರಾಣಿ ಪಕ್ಷಿ ಸಂಕುಲ ಅವನತಿಯತ್ತ ಸಾಗುತ್ತಿದೆ.
ತುಂಗಾ, ಮಾಲತಿ, ಕುಶಾವತಿ ನದಿಗಳ ಒಡಲನ್ನು ಪ್ರತಿದಿನ ಅಗೆಯಲಾಗುತ್ತಿದೆ. ಅಲ್ಲದೆ ಹಳ್ಳಗಳನ್ನು ಈ ಮರಳು ಕಳ್ಳರು ಬಿಡುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ.
ಮಾಲತಿ ನದಿ ತೀರದ ಬಗ್ಗೋಡಿಗೆ, ಆಂದೀನಿ, ಕುಂದಾ, ಅರೆಹಳ್ಳಿ, ಮಳಲೂರು, ಹೆರಬೈಲು, ಜಾವಗಲ್, ಚಂಗಾರು, ತುಂಗಾ ನದಿ ತೀರದ ಹುಣಸವಳ್ಳಿ, ತೀರ್ಥಮತ್ತೂರು, ಬಸವಾನಿ, ಮಹಿಷಿ, ದಬ್ಬಣಗದ್ದೆ, ಹೊಳೆಕೊಪ್ಪ, ಕುಶಾವತಿ ನದಿ, ಗೋಪಿನಾಥ ಹಳ್ಳದ ತೀರದ ಆರಗ, ಹಿರೇಸರ, ತುಡಾನ್ ಕಲ್, ಶಿರುಪತಿ, ನೆರಟೂರು ಮುಂತಾದ ಭಾಗಗಳಿಂದ ಅಕ್ರಮವಾಗಿ ಮರಳನ್ನು ಸಂಗ್ರಹಿಸಲಾಗುತ್ತಿದೆ.
ಬೆಳಗಿನ ಜಾವ 3 ಗಂಟೆಯ ನಂತರ ಲಾರಿಗಳಲ್ಲಿ ಮರಳನ್ನು ಅಕ್ರಮವಾಗಿ ಸಾಗಿಸುತ್ತಿದ್ದರೂ ಅರಣ್ಯ ಇಲಾಖೆಗಾಗಲಿ, ಪೊಲೀಸ್ ಇಲಾಖೆಗಾಗಲಿ ರಾತ್ರಿ ಬೀಟ್ ಗಸ್ತು ಕಾರ್ಯಾಚರಣೆಯಲ್ಲಿರುವ ಪಡೆಗೆ ತಡೆಯಲು ಸಾಧ್ಯವಾಗಿಲ್ಲ ಎನ್ನುವುದು ತಿಳಿದುಬಂದಿದೆ.
ಇನ್ನು ಗಾಜನೂರು, ಮುಡುಬ, ಹಣಗೆರೆ ಅರಣ್ಯ ತಪಾಸಣಾ ಚೆಕ್ ಪೋಸ್ಟ್ ಗಳಲ್ಲಿ ಅಕ್ರಮ ಮರಳು ಸಾಗಣಿಗೆ ಮುಕ್ತ ಅವಕಾಶ ಲಭಿಸಿದಂತಾಗಿದೆ. ಇದರಿಂದ ಹೆಚ್ಚುವರಿ ಹಣವನ್ನು ದೋಚಲು ಸಾಧ್ಯವೆಂದು, ಅದನ್ನೇ ಬಂಡವಾಳವನ್ನಾಗಿಸಿಕೊಂಡ ಆಡಳಿತ ವರ್ಗವು ಮರಳು ಲೂಟಿಗೆ ಸಂಪೂರ್ಣ ಸಹಕಾರ ನೀಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಈ ಬಗ್ಗೆ ಖಡಕ್ ಕ್ರಮಕ್ಕೆ ಮುಂದಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆಗೆ ಚರ್ಚೆ ನಡೆಸಿ, ವಿಶೇಷ ತಂಡವೊಂದನ್ನು ರಚಿಸಿ, ಅಕ್ರಮ ಮರಳು ಸಾಗಣೆ ತಡೆಗೆ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ತೀರ್ಮಾನಿಸಲಾಗುತ್ತದೆ. ಆ ಮೂಲಕ ನದಿ ಪಾತ್ರದಲ್ಲಿ ಕಳುವಾಗಿರುವ ಮರಳು ಪ್ರಮಾಣವನ್ನು ಗುರುತಿಸಲು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದ್ದಾರೆ.








