Categories
ಕರಾವಳಿ ಕುಂದಾಪುರ ನಮ್ಮೂರ್ ಪ್ರಾಬ್ಲಮ್ ಪುತ್ತೂರು

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

•ಪುತ್ತೂರು: ಮೇಜು, ಕುರ್ಚಿ, ವಾಹನಗಳನ್ನು ಕಚ್ಚಿ ನಾಯಿ ಸಾವು

• ಕುಂದಾಪುರ: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಸಾವು

• ಬಂಟ್ವಾಳ: ಮನೆಗೆ ತಗುಲಿದ ಬೆಂಕಿ; ಲಕ್ಷಾಂತರ ರೂಪಾಯಿ ಹಾನಿ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

• ಪುತ್ತೂರು: ಮೇಜು, ಕುರ್ಚಿ, ವಾಹನಗಳನ್ನು ಕಚ್ಚಿ ನಾಯಿ ಸಾವು

ಪುತ್ತೂರು: ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ನಾಯಿ ಮತ್ತು ಹುಚ್ಚು ನಾಯಿಗಳ ಹಾವಳಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿಯೇ ಅವು ಎಲ್ಲೆಂದರಲ್ಲಿ ಸಾವನ್ನಪ್ಪುವ ಘಟನೆ ನಡೆಯುತ್ತಿರುವುದು ಸ್ಥಳೀಯರಿಗೆ ಮತ್ತಷ್ಟು ತಲೆ ನೋವಾಗಿ ಪರಿಣಮಿಸಿದೆ. ಬೀದಿ ನಾಯಿ ಮತ್ತು ಹುಚ್ಚು ನಾಯಿಗಳ ಕಡಿತದಿಂದ ಹಲವರು ಗಾಯಗೊಂಡ ವರದಿಗಳು ಸಾಕಷ್ಟು ಕೇಳಿಬರುತ್ತಿರುವ ಬೆನ್ನಲ್ಲೇ ಹೊಸ ಸಂಗತಿಯೊಂದು ಬೆಳಕಿಗೆ ಬಂದಿದೆ. ಕಳೆದೆರಡು ದಿನಗಳ ಹಿಂದೆ ನೆ.ಮೂಡ್ನೂರು ಗ್ರಾಮದ ಈಶ್ವರಮಂಗಲದಲ್ಲಿ ಹುಚ್ಚುನಾಯಿಯೊಂದು ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದಕ್ಕೆ ಕಚ್ಚಿ ಬಳಿಕ ಜೀಪಿಗೆ ಕಚ್ಚಿದೆ. ಅಲ್ಲಿಂದ ತೆರಳಿದ ನಾಯಿಯು ಅಂಗಡಿಯೊಂದರೊಳಗೆ ನುಗ್ಗಿ ಅಲ್ಲಿದ್ದ ಮೇಜು, ಕುರ್ಚಿ ಕಚ್ಚಿದ ನಂತರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಸನ್ನಿವೇಶವನ್ನು ಪ್ರತ್ಯಕ್ಷವಾಗಿ ಕಂಡ ಸ್ಥಳೀಯರು ಆಶ್ಚರ್ಯಕ್ಕೊಳಗಾಗಿದ್ದಾರೆ. ಜೊತೆಗೆ ಮನುಷ್ಯರಿಗೆ ಕಚ್ಚಿಲ್ಲವಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಮುಂದಿನ ಕ್ರಮ ಕೈಗೊಂಡರು ಎನ್ನುವ ಮಾಹಿತಿ ಲಭಿಸಿದೆ. ಇತ್ತೀಚಿನ ದಿನಗಳಲ್ಲಿ ಈಶ್ವರಮಂಗಲ, ಬಡಗನ್ನೂರು, ಪಡುವನ್ನೂರು ಗ್ರಾಮಗಳಲ್ಲಿ ಬೀದಿನಾಯಿ ಮತ್ತು ಹುಚ್ಚು ನಾಯಿಗಳ ಹಾವಳಿ ಹೆಚ್ಚಾಗಿದ್ದು, ಪಡುಮಲೆ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಹುಚ್ಚು ನಾಯಿಯೊಂದು ಹಲವರ ಮೇಲೆ ದಾಳಿ ನಡೆಸಿತ್ತು ಎನ್ನಲಾಗಿದೆ. ಪರಿಣಾಮವಾಗಿ ಗ್ರಾಮದ ಜನರು ಆತಂಕದಲ್ಲಿ ಬದುಕುತ್ತಿದ್ದು, ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳು ಭಯಪಡುತ್ತಲೇ ಹೋಗಿ ಬರಬೇಕಾದ ಪರಿಸ್ಥಿತಿ ಎದುರಾಗಿದೆ. ಸಾರ್ವಜನಿಕರು ಆದಷ್ಟು ಬೇಗ ಅಧಿಕಾರಿಗಳು ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹ ಪಡಿಸಿದ್ದಾರೆ.

• ಕುಂದಾಪುರ: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಸಾವು

ಕುಂದಾಪುರ: ತೆಂಗಿನ ಮರ ಮತ್ತು ಅಡಿಕೆ ಮರಗಳನ್ನು ಹತ್ತಿ ಕಾಯಿಗಳನ್ನು ಹಾಗೂ ಅಡಿಕೆಗಳನ್ನು ಕೊಯ್ಯುವ ಕೆಲಸ ಮಾಡುತ್ತಿದ್ದ ಕಾರಣದಿಂದಾಗಿ ಕಾಯಿ ಶೀನ ಎಂದೇ ಹೆಸರು ಪಡೆದಿದ್ದ ವ್ಯಕ್ತಿಯೊಬ್ಬರು, ಸೋಮವಾರದಂದು ಅಡಿಕೆ ಮರವನ್ನು ಹತ್ತಿ ಸಿಂಗಾರ ಹೂವನ್ನು ಕೊಯ್ಯುತ್ತಿದ್ದ ಸಂದರ್ಭದಲ್ಲಿ ಮರವು ತುಂಡಾಗಿ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಸಾಲಿಗ್ರಾಮದ ಹತ್ತಿರದ ಗುಂಡ್ಮಿಯಲ್ಲಿ ನಡೆದಿದೆ. ಪದ್ಮನಾಭ ಹೊಳ್ಳ ಎನ್ನುವವರ ಮನೆಯಲ್ಲಿ ಸಿಂಗಾರ ಹೂವು ಕೀಳುತ್ತಿದ್ದ ಸಮಯದಲ್ಲಿ ಈ ರೀತಿಯ ಸನ್ನಿವೇಶ ಎದುರಾಯಿತು ಎನ್ನಲಾಗಿದೆ. ಮರದಿಂದ ಕೆಳಗೆ ಬೀಳುವಾಗ ಸಮೀಪದಲ್ಲಿದ್ದ ನಾಗರಕಟ್ಟೆಯ ಮಾಡಿನ ಮೇಲೆ ಬಿದ್ದ ಪರಿಣಾಮವಾಗಿ ಶ್ರೀನಿವಾಸ್ ಪೂಜಾರಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಕೋಟದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ಸೇರುವ ಮೊದಲೇ ಅವರು ಸಾವನ್ನಪ್ಪಿದ್ದರು ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

•ಬಂಟ್ವಾಳ: ಮನೆಗೆ ತಗುಲಿದ ಬೆಂಕಿ; ಲಕ್ಷಾಂತರ ರೂಪಾಯಿ ಹಾನಿ

ಬಂಟ್ವಾಳ: ಗೂಡಿನಬಳಿಯ ಬಳಕದಲ್ಲಿ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಸೋಮವಾರದಂದು ನಡೆದಿದೆ. ಚಾರ್ಲಿ ಡಿಸೋಜಾ ಎನ್ನುವವರಿಗೆ ಸೇರಿದ ಮನೆಯಲ್ಲಿ ವಿಜಯ ಕುಲಾಲ್ ಎನ್ನುವವರು ಬಾಡಿಗೆಗೆ ಇದ್ದು, ಮಗಳು ರಕ್ಷಾ ಮತ್ತು ವಿಜಯ ಅವರು ಮನೆಯೊಳಗಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಅಲ್ಲದೆ ರಶ್ಮಿ ಅವರು ಟೈಲರಿಂಗ್ ಕೆಲಸ ಮಾಡುತ್ತಿದ್ದು, ತನ್ನದೇ ಆದ ಹೊಸ ಅಂಗಡಿಯನ್ನು ತೆರೆದಿದ್ದು, ಅಲ್ಲಿನ ಕೆಲವು ವಸ್ತುಗಳನ್ನೆಲ್ಲ ಮನೆಯಲ್ಲಿ ಇರಿಸಿದ್ದರು. ಬೆಂಕಿ ತಗುಲಿದ ಪರಿಣಾಮವಾಗಿ ವಸ್ತುಗಳೆಲ್ಲ ಸುಟ್ಟು ಹೋಗಿವೆ ಎನ್ನಲಾಗಿದೆ. ಬೆಂಕಿ ಹತ್ತಿ ಉರಿದ ಸಂದರ್ಭದಲ್ಲಿ ಸ್ಥಳೀಯರು ವಿಜಯ ಮತ್ತು ರಕ್ಷಾ ಅವರನ್ನು ಹೊರಗೆಳೆದು ತಂದಿದ್ದು, ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ತಕ್ಷಣ ಅವರನ್ನು ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎನ್ನುವ ಮಾಹಿತಿ ಲಭಿಸಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.