ಕಲ್ಲುಗುಡ್ಡೆ ಹಾಗೂ ಭೀಮಮೆಟ್ಟಿದ ಕಲ್ಲು ಗ್ರಾಮದ ಜನರ ರಸ್ತೆ ಸಮಸ್ಯೆ
* ಆಶ್ವಾಸನೆಯಾಗೇ ಉಳಿದ ಎರಡು ಗ್ರಾಮಗಳ ಸಂಪರ್ಕ ರಸ್ತೆ
* ರಸ್ತೆಯಾವುದು, ಚರಂಡಿ ಯಾವುದು? ವಿದ್ಯಾರ್ಥಿಗಳು,ಸಾರ್ವಜನಿಕರ ಪರದಾಟ
ನಮ್ಮೂರ್ ಪ್ರಾಬ್ಲಮ್
ಕೊಪ್ಪ/ಅತ್ತಿಕೊಡಿಗೆ: ಕೊಪ್ಪ ತಾಲೂಕಿನ ಅತ್ತಿಕೊಡಿಗೆ ಗ್ರಾ ಪಂ ವ್ಯಾಪ್ತಿಯ ಕಲ್ಲುಗುಡ್ಡೆ ಗ್ರಾಮದಲ್ಲಿ ರಸ್ತೆಗಳ ಪರಿಸ್ಥಿತಿಯನ್ನು ಕೇಳುವವರೇ ಇಲ್ಲವಾಗಿದೆ. ಕಲ್ಲುಗುಡ್ಡೆ ಗ್ರಾಮಕ್ಕೆ ಸಂಬಂಧಪಟ್ಟ ಒಳ ರಸ್ತೆಗಳಾದ ಬಿಟ್ಟಿಕೊಡಿಗೆ ಹಾಗೂ ಭೀಮಮೆಟ್ಟಿದಕಲ್ಲು ರಸ್ತೆಗೂ ಹಾಗೂ ಪಕ್ಕದ ಚರಂಡಿಗಳು ಯಾವುದೇ ವ್ಯತ್ಯಾಸ ಇಲ್ಲದಂತಾಗಿದೆ. ಸುಮಾರು 30 ಕ್ಕೂ ಅಧಿಕ ಮನೆಗಳಿರುವ ಗ್ರಾಮಗಳಿಂದ ನಿತ್ಯ ಶಾಲಾ ಕಾಲೇಜು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಓಡಾಡಬೇಕಾಗಿದ್ದು ಶಾಲಾ ವಾಹನಗಳಿಗೆ ಮತ್ತು ಸ್ಥಳೀಯರಿಗೆ ಮಳೆಗಾಲದಲ್ಲಿ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಕೆಸರುಮಯವಾಗಿದೆ ರಸ್ತೆ ಯಾವುದು ಚರಂಡಿಗೂ ಯಾವುದು ಎಂದು ತಿಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮೆಣಸಿನಹಾಡ್ಯ ಕ್ರಾಸ್ನಿಂದ ಬಿಳಾಲುಕೊಪ್ಪ ಸಂಪರ್ಕಿಸುವ ಕಲ್ಲುಗಡ್ಡೆ ಮುಖ್ಯರಸ್ತೆಗೆ ಸುಮಾರು 1.50 ಕೋಟಿ ವೆಚ್ಚದಲ್ಲಿ ಸುಮಾರು 2.5 ಕಿ.ಮೀ ರಸ್ತೆ ಡಾಂಬರೀಕರಣ ಮಾಡಲಾಗಿತ್ತು ಆದರೆ ಕಾಮಗಾರಿಯಾದ ಕೆಲವೇ ದಿನಗಳಲ್ಲಿ ರಸ್ತೆಗೆ ಹಾಕಿದ್ದ ಡಾಂಬರ್,ಜೆಲ್ಲಿ ಕಿತ್ತು ಬಂದಿದೆ. ಅಭಿವೃದ್ಧಿಯೇ ಮೂಲ ಮಂತ್ರ ಹಾಗೂ ನಾನು ಗೆದ್ದರೆ ಶೃಂಗೇರಿಯನ್ನು ಸಿಂಗಾಪುರ ಮಾಡುತ್ತೇನೆ ಎಂದ ಶೃಂಗೇರಿ ಕ್ಷೇತ್ರದ ಶಾಸಕರು ತಾನು ಗೆದ್ದ ಬಳಿಕ ಈ ರಸ್ತೆಗೆ ಕಾಂಕ್ರೀಟ್ ಹಾಕಿಸಿಕೊಡುವುದಾಗಿ ಆಶ್ವಾಸನೆ ನೀಡಿದ್ದರು ಅದು ಇಂದಿಗೂ ಆಶ್ವಾಸನೆಯಾಗೇ ಉಳಿದಿದ್ದು ,ಶಾಸಕ ಟಿ.ಡಿ ರಾಜೇಗೌಡರಿಗೆ ಇದೇನಾ ನಿಮ್ಮ ಸಿಂಗಾಪುರ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ. ಸರ್ಕಾರಕ್ಕೆ, ಕ್ಷೇತ್ರದ ಶಾಸಕರಿಗೆ ಕೇವಲ ಮಲೆನಾಡಿನ ಕೃಷಿಕರ ಒತ್ತುವರಿ ಜಮೀನಿನ ಕುರಿತಾಗಿ ಯೋಚನೆಗಳು ಇವೆಯೇ ಹೊರತು ತೆರವುಗೊಳಿಸುವ ಆಲೋಚನೆಯಿದೆಯೇ ಹೊರತು ಅಭಿವೃದ್ಧಿಯ ಕುರಿತಾಗಿಲ್ಲ ಎಂದು ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ.








