ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
ಐಪಿಎಲ್ -2025
* ಸೋಲಿನ ಸರಪಳಿಯಲ್ಲಿ ಸಿಲುಕಿ ರೈಸ್ ಆಗದ ಸನ್
* ಸಿರಾಜ್ 100 ವಿಕೆಟ್ ಸಾಧನೆ
NAMMUR EXPRESS NEWS
ಹೈದರಾಬಾದ್: ಸೋಲಿನ ಸುಳಿಯಲ್ಲಿ ಸಿಲುಕಿರುವ ಸನ್ರೈಸರ್ಸ್ ಹೈದರಾಬಾದ್ ಅದರಿಂದ ಆಚೆ ಬರುವ ಲಕ್ಷಣ ಕಂಡುಬರುತ್ತಿಲ್ಲ. ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿಯಾಗಿದ್ದ ಹೈದರಾಬಾದ್, ತನ್ನ ಬ್ಯಾಟಿಂಗ್ ವೈಫಲ್ಯದಿಂದ ಸತತ 4ನೇ ಪಂದ್ಯದಲ್ಲಿ ಸೋಲು ಕಂಡಿದೆ. ಭಾನುವಾರ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಟೈಟಾನ್ಸ್ 7 ವಿಕೆಟ್ ಭರ್ಜರಿ ಜಯಗಳಿಸಿತು. ಇದರೊಂದಿಗೆ ಟೈಟಾನ್ಸ್ 4 ಪಂದ್ಯಗಳಲ್ಲಿ 3ನೇ ಜಯ ದಾಖಲಿಸಿದೆ.
ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 8 ವಿಕೆಟ್ ಕಳೆದುಕೊಂಡು ಗಳಿಸಿದ್ದು ಕೇವಲ 152 ರನ್. ನಿತೀಶ್ ರೆಡ್ಡಿ 34 ಎಸೆತಗಳಲ್ಲಿ 31 ರನ್, ಕ್ಲಾಸನ್ 27, ಕಮಿನ್ ಔಟಾಗದೆ 22, ಅಭಿಷೇಕ್ 18, ಇಶಾನ್ ಕಿಶನ್ 17 ರನ್ಗಳಿಸಿ ತಂಡದ ಸ್ಕೋರ್ 150ರ ಗಡಿ ದಾಟಿತು.
ಮಾರಕ ದಾಳಿ ನಡೆಸಿದ ಸಿರಾಜ್ 4 ಓವರ್ನಲ್ಲಿ 17 ರನ್ಗೆ 4 ವಿಕೆಟ್ ಉರುಳಿಸಿದರು.
ಹೈದ್ರಾಬಾದ್ ನೀಡಿದ ಸ್ಪರ್ಧಾತ್ಮಕ ಗುರಿಯನ್ನು ಗುಜರಾತ್ 16.4 ಓವರ್ನಲ್ಲಿ ತಲುಪಿ ಜಯಗಳಿಸಿತು. 16 ರನ್ಗೆ ಮೊದಲ 2 ವಿಕೆಟ್ ಕಳೆದುಕೊಂಡರೂ ತಂಡ ಕುಗ್ಗಲಿಲ್ಲ. ನಾಯಕ ಶುಭೌಮನ್ ಗಿಲ್ ಔಟಾಗದೆ 61, ವಾಷಿಂಗ್ಟನ್ ಸುಂದರ್ 49, ರುಫರ್ಫೋರ್ಡ್ ಔಟಾಗದೆ 35 (16 ಎಸೆತ) ರನ್ ಗಳಿಸಿದರು.
* ಸಿರಾಜ್ 100 ವಿಕೆಟ್ ಸಾಧನೆ
ಸಿರಾಜ್ ಐಪಿಎಲ್ನಲ್ಲಿ 100 ವಿಕೆಟ್ ಪೂರ್ಣಗೊಳಿಸಿದರು. ಅವರು 97 ಪಂದ್ಯಗಳಲ್ಲಿ ಒಟ್ಟು 102 ವಿಕೆಟ್ ಉರುಳಿಸಿದ್ದಾರೆ. ಹೈದ್ರಾಬಾದ್ ಪರ 10, ಆರ್ಸಿಬಿ ಪರ 83, ಗುಜರಾತ್ ಪರ 9 ವಿಕೆಟ್ ಪಡೆದಿದ್ದಾರೆ.
* ಇಂದು ಆರ್ಸಿಬಿ ಗೆ ಮುಂಬೈ ಚಾಲೆಂಜ್
ಮುಂಬೈ: ಸತತ 2 ಗೆಲುವಿನೊಂದಿಗೆ ಈ ಬಾರಿ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿದ್ದರೂ ಬಳಿಕ ತನ್ನದೇ ತವರಿನಲ್ಲಿ ಎದುರಾದ ಸೋಲು ಆರ್ಸಿಬಿಯನ್ನು ಕುಗ್ಗಿಸಿದೆ. ಆದರೆ ತಂಡ ಕಮ್ ಬ್ಯಾಕ್ಗೆ ಹೆಸರುವಾಸಿ. ಸೋಮವಾರ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ನ ಎದುರಿಸಲಿರುವ ಆರ್ಸಿಬಿ, ಗೆಲುವಿನ ಹಳಿಗೆ ಮರಳಲು ಕಾಯುತ್ತಿದೆ.
ಕೋಲ್ಕತಾ ಹಾಗೂ ಚೆನ್ನೈ ವಿರುದ್ಧ ಗೆದ್ದಿದ್ದ ಆರ್ಸಿಬಿ ಕಳೆದ ವಾರ ಬೆಂಗಳೂರಿನಲ್ಲಿ ಗುಜರಾತ್ ವಿರುದ್ಧ ಸೋತಿತ್ತು. ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಲು ಕಾಯುತ್ತಿರುವ ತಂಡಕ್ಕೆ ಮುಂಬೈಯನ್ನೂ ಸೋಲಿಸುವ ನಿರೀಕ್ಷೆಯಿದೆ.








