ನಮ್ಮೂರ್ ಎಕ್ಸಪ್ರೆಸ್ ಸ್ಪೋರ್ಟ್ಸ್ ನ್ಯೂಸ್
ಐಪಿಎಲ್ -2025
* ಲಕ್ನೋದಲ್ಲಿ ವಿರುದ್ಧ ಡೆಲ್ಲಿಗೆ ಭರ್ಜರಿ ಜಯ
* ಮಿಂಚಿದ ರಾಹುಲ್,ಪೊರೆಲ್ , ಅಂಕ ಪಟ್ಟಿಯಲ್ಲಿ 2ನೇ ಸ್ಥಾನ ಭದ್ರ
NAMMMUR EXPRESS SPORTS NEWS
ಲಕ್ನೋ: ಏಕಾನಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ. ಕೆ.ಎಲ್ ರಾಹುಲ್ ಅಜೇಯ ಅರ್ಧಶತಕ ಗಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ಗೆ ಸುಲಭ ಗೆಲುವು ತಂದುಕೊಟ್ಟರು.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಉತ್ತಮ ಆರಂಭ ಪಡೆದರೂ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು. ಐಡೆನ್ ಮಾಕ್ರಂ 33 ಎಸೆತಗಳಲ್ಲಿ 52 ರನ್ ಗಳಿಸುವ ಮೂಲಕ ಉತ್ತಮ ಫಾರ್ಮ್ ಮುಂದುವರೆಸಿದರು. ಮಿಚೆಲ್ ಮಾರ್ಷ್ 45 ರನ್ ಗಳಿಸಿದರು. ಈ ಜೋಡಿ ಮೊದಲ ವಿಕೆಟ್ಗೆ 87 ರನ್ ಕಲೆಹಾಕಿತು.
ನಂತರ ಬಂದ ಬ್ಯಾಟರ್ಗಳಿಂದ ಉತ್ತಮ ಪ್ರದರ್ಶನ ಬರಲಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ಗಳು ಸತತವಾಗಿ ವಿಕೆಟ್ ಪಡೆಯುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕಟ್ಟಿಹಾಕಿದರು. ಕೊನೆಯ ಓವರ್ ಗಳಲ್ಲಿ ಆಯುಶ್ ಬದೋನಿ 21 ಎಸೆತಗಳಲ್ಲಿ 36 ರನ್ ಗಳಿಸುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ 159 ರನ್ ಗಳಿಸಲು ಕೊಡುಗೆ ನೀಡಿದರು.
ಅಚ್ಚರಿ ಎನ್ನುವಂತೆ ರಿಷಬ್ ಪಂತ್ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದರು. ಎರಡು ಎಸೆತ ಎದುರಿಸಿದ ಅವರು ರನ್ ಗಳಿಸದೆ ಔಟಾದರು. ಲಕ್ನೋ ಸೂಪರ್ ಜೈಂಟ್ಸ್ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿತು. ಮುಕೇಶ್ ಕುಮಾರ್ 4 ಓವರ್ಗಳಲ್ಲಿ 33 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಮಿಚೆಲ್ ಸ್ಟಾರ್ಕ್ ಮತ್ತು ದುಷ್ಮಂತ್ ಚಮೀರಾ ತಲಾ 1 ವಿಕೆಟ್ ಪಡೆದರು.
* ಉತ್ತಮ ಇನ್ನಿಂಗ್ಸ್ ಕಟ್ಟಿದ ಅಭಿಷೇಕ್ ಪೊರೆಲ್, ಕೆ.ಎಲ್ ರಾಹುಲ್
160 ರನ್ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಸಾಧಾರಣ ಆರಂಭ ಪಡೆಯಿತು. ಕರುಣ್ ನಾಯರ್ 9 ಎಸೆತಗಳಲ್ಲಿ 15 ರನ್ ಗಳಿಸಿ ಬೇಗನೆ ಫೆವಿಲಿಯನ್ ಸೇರಿದರು. ಬಳಿಕ ಬಂದ ಕೆ.ಎಲ್ ರಾಹುಲ್ ಅಭಿಷೇಕ್ ಪೊರೆಲ್ ಜೊತೆ ಎರಡನೇ ವಿಕೆಟ್ಗೆ 69 ರನ್ ಕಲೆಹಾಕುವ ಮೂಲಕ ತಂಡದ ಗೆಲುವನ್ನು ಸುಲಭವಾಗಿಸಿದರು.
ಅಭಿಷೇಕ್ ಪೊರೆಲ್ 36 ಎಸೆತಗಳಲ್ಲಿ 51 ರನ್ ಗಳಿಸಿ ಮಿಂಚಿದರು. ಕೆಎಲ್ ರಾಹುಲ್ ಕೂಡ ತಾಳ್ಮೆಯಿಂದ ಬ್ಯಾಟಿಂಗ್ ಮಾಡುವ ಮೂಲಕ 42 ಎಸೆತಗಳಲ್ಲಿ 3 ಬೌಂಡರಿ 3 ಸಿಕ್ಸರ್ ಸಹಿತ ಅಜೇಯ 57 ರನ್ ಗಳಿಸಿ ಡೆಲ್ಲಿಗೆ ದಯ ತಂದುಕೊಟ್ಟರು. ನಾಯಕ ಅಕ್ಷರ್ ಪಟೇಲ್ 20 ಎಸೆತಗಳಲ್ಲಿ 1 ಬೌಂಡರಿ 4 ಸಿಕ್ಸರ್ ಸಹಿತ ಅಜೇಯ 34 ರನ್ ಗಳಿಸಿ ಮಿಂಚಿದರು.
ಡೆಲ್ಲಿ ಕ್ಯಾಪಿಟಲ್ಸ್ ಆಡಿರುವ 8 ಪಂದ್ಯಗಳಲ್ಲಿ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು 12 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೇ ಉಳಿಯಲಿದ್ದು ಪ್ಲೇಆಫ್ ಹಾದಿಯನ್ನು ಸುಲಭವಾಗಿಸಿಕೊಂಡಿದೆ.








