ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
ಐಪಿಎಲ್ -2025
* ಮುಂಬೈ ಮಣಿಸಿ ಅಗ್ರಸ್ಥಾನಕ್ಕೇರಿದ ಪಂಜಾಬ್
* ಆರ್ಸಿಬಿ ಹಾದಿ ಸುಲಭ, ಟಾಪ್ 2 ಗೆ ಇಂದು ಕ್ಲೆಮಾಕ್ಸ್ ಫೈಟ್
NAMMMUR EXPRESS SPORTS NEWS
ಜೈಪುರ:ಸವಾಯ್ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸುವ ಮೂಲಕ ಪಂಜಾಬ್ ಕಿಂಗ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಾದಿ ಮತ್ತಷ್ಟು ಸುಲಭವಾದಂತಾಗಿದೆ. ಏಕೆಂದರೆ ಇಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್ಸಿಬಿ ಗೆಲುವು ಸಾಧಿಸಿದರೆ ಅಂಕಪಟ್ಟಿಯಲ್ಲಿ ಟಾಪ್ 2ನಲ್ಲಿ ಸ್ಥಾನ ಪಡೆಯಲಿದೆ. ಈ ಮೂಲಕ ಟ್ರೋಫಿ ಗೆಲ್ಲುವ ಹಾದಿಯನ್ನ ಮತ್ತಷ್ಟು ಸುಲಭಗೊಳಿಸಲಿದೆ ಎಂಬುದು ಕ್ರಿಕೆಟ್ ತಜ್ಞರ ಲೆಕ್ಕಾಚಾರ.
ಟಾಸ್ ಗೆದ್ದ ಪಂಜಾಬ್ ನಾಯಕ ಶ್ರೇಯಸ್ ಅಯ್ಯರ್ ಫೀಲ್ಡಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗಳನ್ನ ಕಳೆದುಕೊಂಡು 184 ರನ್ ಗಳಿಸಿತು. ಈ ಗುರಿಯನ್ನ ಬೆನ್ನತ್ತಿದ ಪಂಜಾಬ್ ಪ್ರಿಯಾಂಶ್ ಆರ್ಯ ಮತ್ತು ಜೋಶ್ ಇಂಗ್ಲಿಸ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಸುಲಭವಾಗಿ ಗುರಿ ಮುಟ್ಟು ಮೂಲಕ ಗೆಲುವು ಸಾಧಿಸಿತು.
ಮುಂಬೈ ಪರ ಸೂರ್ಯಕುಮಾರ್ ಯಾದವ್ 39 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಇದ್ದ 57 ರನ್ ಗಳಿಸಿದರು. ಇನ್ನುಳಿದಂತೆ ರಯಾನ್ ರಿಕೆಲ್ಟನ್ (27), ಹಾರ್ದಿಕ್ ಪಾಂಡ್ಯ (26), ರೋಹಿತ್ ಶರ್ಮಾ (26), ನಮನ್ ಧೀರ್ (20) ಮತ್ತು ವಿಲ್ ಜ್ಯಾಕ್ಸ್ (17) ರನ್ ಗಳಿಸಿದರು. ಪಂಜಾಬ್ ಪರ ಬೌಲಿಂಗ್ನಲ್ಲಿ ಅರ್ಷದೀಪ್ ಸಿಂಗ್, ಮಾರ್ಕೊ ಜಾನ್ಸೆನ್ ಮತ್ತು ವಿಜಯಕುಮಾರ್ ವೈಶಾಕ್ ತಲಾ ಎರಡು ವಿಕೆಟ್ ಪಡೆದರೆ, ಹರ್ಪ್ರೀತ್ ಬ್ರಾರ್ ಒಂದು ವಿಕೆಟ್ ಕಬಳಿಸಿದರು.
ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ನಿಟ್ಟಿನಲ್ಲಿ ನಡೆದ ಸೆಣಸಾಟದಲ್ಲಿ ಪಂಜಾಬ್ ತಂಡವು ಮುಂಬೈ ವಿರುದ್ಧ ಸುಲಭ ಗೆಲುವು ಸಾಧಿಸಿದೆ. ಪಂಜಾಬ್ ಪರ ಪ್ರಿಯಾಂಶ್ ಆರ್ಯ 35 ಎಸೆತಗಳಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್ ಇದ್ದ 62 ರನ್ ಬಾರಿಸಿ ಮಿಂಚಿದರು. ಅದೇ ರೀತಿ ಜೋಶ್ ಇಂಗ್ಲಿಸ್ 42 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್ ಇದ್ದ 73 ರನ್ ಗಳಿಸಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.
* ಆರ್ಸಿಬಿ ಹಾದಿ ಸುಲಭ, ಟಾಪ್ 2 ಗೆ ಇಂದು ಕ್ಲೆಮಾಕ್ಸ್ ಫೈಟ್
ಲಖನೌ: ಅಗ್ರ ಎರಡು ಸ್ಥಾನಗಳ ಮೇಲೆ ಕಣ್ಣಿರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ತನ್ನ ಹಾಗೂ ಐಪಿಎಲ್ನ ಕಡೆಯ ಲೀಗ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸುತ್ತಿದೆ. ಅತ್ತ ಪ್ಲೇಆಫ್ ಸ್ಪರ್ಧೆಯಿಂದ ಹೊರಬಿದ್ದಿರುವ ಲಖನೌ ಗೆಲುವಿನೊಂದಿಗೆ ಪ್ರಸಕ್ತ ಐಪಿಎಲ್ ಅಭಿಯಾನ ಕೊನೆಗೊಳಿಸುವ ಇರಾದೆಯಲ್ಲಿದೆ.
ಪ್ರಸಕ್ತ ಐಪಿಎಲ್ನಲ್ಲಿ ಯಶಸ್ವಿ ತಂಡ ಎನಿಸಿಕೊಂಡ ಗುಜರಾತ್ ಟೈಟನ್ಸ್ ಸತತ 2 ಪಂದ್ಯಗಳಲ್ಲಿ ಸೋಲು ಕಂಡ ಹಿನ್ನೆಲೆಯಲ್ಲಿ ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಆರ್ಸಿಬಿಗೆ ಅಗ್ರ ಎರಡರಲ್ಲಿ ಸ್ಥಾನ ಪಡೆಯುವ ದಾರಿ ಸುಗಮವಾಗಿದೆ. ಹಾಗೊಂದು ವೇಳೆ ಅಗ್ರ 2ರಲ್ಲಿ ಸ್ಥಾನ ಪಡೆದಿದ್ದೇ ಆದಲ್ಲಿ 2016ರ ಬಳಿಕ ಆರ್ಸಿಬಿ ಮೊದಲ ಬಾರಿ ಈ ಸಾಧನೆಗೆ ಪಾತ್ರವಾಗಲಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಸೋತ ತಂಡ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಎಲಿಮಿನೇಟರ್ ಪಂದ್ಯದ ವಿಜೇತ ತಂಡವನ್ನು ಎದುರಿಸಬೇಕಾಗುತ್ತದೆ. ಇಲ್ಲಿಗೆದ್ದ ತಂಡ ಫೈನಲ್ ಪ್ರವೇಶಿಸಲಿದೆ. ಹೀಗಾಗಿ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕಾಣಿಸಿಕೊಳ್ಳುವ ತಂಡಗಳಿಗೆ ಫೈನಲ್ ಪ್ರವೇಶಿಸಲು 2 ಅವಕಾಶ ಲಭಿಸಲಿದೆ.
* ಲಖನೌ ವಿರುದ್ಧ ಸೋತರೆ ಎಲಿಮಿನೇಟರ್
ಸೋಮವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ 19 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ. 18 ಅಂಕ ಹೊಂದಿರುವ ಗುಜರಾತ್ ಟೈಟಾನ್ಸ್ 2ನೇ ಸ್ಥಾನಕ್ಕಿಳಿದಿದೆ.
ಒಂದು ವೇಳೆ ಲಖನೌ ತಂಡದ ವಿರುದ್ಧ ಆರ್ ಸಿಬಿ ಗೆದ್ದಲ್ಲಿ ಅಂಕಪಟ್ಟಿಯಲ್ಲಿ 2ನೇ ಸ್ಥಾನವಂತೂ ಖಚಿತ. ಪಂಜಾಬ್ ಮತ್ತು ಬೆಂಗಳೂರು ಎರಡೂ ತಂಡಗಳು 19 ಅಂಕ ಗಳಿಸುವ ಕಾರಣ ಆಗ ಮೊದಲೆರಡು ಸ್ಥಾನಗಳು ರನ್ ರೇಟ್ ಆಧಾರದಲ್ಲಿ ನಿರ್ಧಾರವಾಗಲಿದೆ. ಸದ್ಯ ಪಂಜಾಬ್ ಕಿಂಗ್ಸ್ ರನ್ ರೇಟ್ ಉತ್ತಮವಾಗಿದೆ. ಒಂದು ವೇಳೆ ಪಂದ್ಯ ಸೋತಲ್ಲಿ ಆಗ 3ನೇ ಸ್ಥಾನಿದಲ್ಲಿಯೇ ಇರಲಿದೆ. ಆಗ ಎಲಿಮಿನೇಟರ್ ನಲ್ಲಿ ಆಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆಗ ಆರ್ಸಿಬಿ ನಾಲ್ಕನೇ ಸ್ಥಾನಿ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಬೇಕಾಗುತ್ತದೆ. ಅದು ಮಾಡು ಇಲ್ಲವೇ ಮಡಿ ಪಂದ್ಯವಾಗಲಿದೆ.
ಭಾರತ- ಪಾಕಿಸ್ತಾನ ಸೇನಾ ಸಂಘರ್ಷದಿಂದಾಗಿ ಐಪಿಎಲ್ ಸ್ಥಗಿತಗೊಳ್ಳುವುದಕ್ಕೂ ಮುನ್ನ ರಜತ್ ಪಾಟೀದಾರ್ ಪಡೆ ಅತ್ಯುತ್ತಮ ಫಾರ್ಮ್ನಲ್ಲಿತ್ತು. ಒಂದು ವಾರದ ಬಳಿಕ ಐಪಿಎಲ್ ಪುನಾರಂಭಗೊಂಡಾಗ ಆರ್ಸಿಬಿ ತನ್ನ ಫಾರ್ಮ್ ಕಾಪಾಡಿಕೊಂಡಿದೆಯೇ ಇಲ್ಲವೇ ಎಂಬುದರ ಬಗ್ಗೆ ಕುತೂಹಲ ಮೂಡಿತ್ತು. ಅದಕ್ಕೆ ಉತ್ತರ ನೀಡಲಿದ್ದ ಆರ್ಸಿಬಿ- ಕೆಕೆಆರ್ ಪಂದ್ಯ ಮಳೆಯಿಂದ ರದ್ದುಗೊಂಡು ಅಂಕ ಹಂಚಿಕೊಂಡಿವೆ. ಬಳಿಕ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಹಿಂದಿನ ಪಂದ್ಯದಲ್ಲಿಆರ್ಸಿಬಿ 42 ರನ್ಗಳ ಸೋಲು ಕಂಡಿದೆ. ಇದು ತಂಡದ ಆತ್ಮವಿಶ್ವಾಸಕ್ಕೆ ಘಾಸಿ ಮಾಡಿರುವುದಂತೂ ನಿಜ. ಅದರ ಮಧ್ಯೆ ಆರ್ಸಿಬಿ ತನ್ನ ಆರಂಭಿಕ ಫಾರ್ಮನ್ನು ಕಾಪಾಡಿಕೊಂಡಿರುವ ಬಗ್ಗೆ ಗೊಂದಲಗಳು ಮುಂದುವರಿದಿರುವ ಬೆನ್ನಲ್ಲೇ ಇಂದಿನ ಪಂದ್ಯ ಕುತೂಹಲ ಮೂಡಿಸಿದೆ.








