ನಮ್ಮೂರ್ ಎಕ್ಸ್ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
ಐಪಿಎಲ್ -2025
* ಚಾಲೆಂಜಿಂಗ್ ಗುರಿಯನ್ನು ಬೆನ್ನಟ್ಟಿ ರಾಯಲ್ ಗೆಲವು ಸಾಧಿಸಿದ ಆರ್ಸಿಬಿ
* ಜಿತೇಶ್ – ಮಯಾಂಕ್ ಸಾಹಸಕ್ಕೆ ಬೆಚ್ಚಿದ ಲಖನೌ
NAMMMUR EXPRESS SPORTS NEWS
ಲಖನೌ: ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇತಿಹಾಸ ನಿರ್ಮಿಸಿತು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 228 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ ಅದ್ಭುತ ಗೆಲುವು ಸಾಧಿಸಿದ್ದಲ್ಲದೆ, ಲೀಗ್ ಹಂತವನ್ನು ಅಗ್ರ-2 ರಲ್ಲಿ ಮುಗಿಸುವ ಮೂಲಕ ತಮ್ಮ ಪ್ಲೇಆಫ್ ಸ್ಥಾನವನ್ನು ಬಲಪಡಿಸಿಕೊಂಡಿದೆ. ಆರ್ಸಿಬಿ ತನ್ನ ಐಪಿಎಲ್ ಇತಿಹಾಸದಲ್ಲಿ ಅತಿ ದೊಡ್ಡ ರನ್ ಚೇಸ್ ಮಾಡಿದ ದಾಖಲೆಯನ್ನು ಬರೆಯಿತು. ಈ ಗೆಲುವಿನಿಂದ ಆರ್ಸಿಬಿ ತಂಡವು ಕ್ವಾಲಿಫೈಯರ್-1 ರಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲು ಅರ್ಹತೆ ಪಡೆದುಕೊಂಡಿದೆ.
ವಿರಾಟ್ ಕೊಹ್ಲಿ(54) ಅರ್ಧ ಶತಕದ ಜತೆ ಜಿತೇಶ್ ಶರ್ಮ(85*) ಮತ್ತು ಮಯಾಂಕ್ ಅಗರ್ವಾಲ್ (41) ಅವರ 107 ರನ್ಗಳ ಸಮಯೋಚಿತ ಜತೆಯಾಟದ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ 6 ವಿಕೆಟ್ಗಳಿಂದ ಲಖನೌ ಸೂಪರ್ಜೈಂಟ್ಸ್ ತಂಡವನ್ನು ಮಣಿಸಿ, ಒಟ್ಟು 19 ಅಂಕಗಳನ್ನು ಕಲೆಹಾಕಿದ ಆರ್ಸಿಬಿ, ಅಂಕಪಟ್ಟಿಯಲ್ಲಿ 2ನೇ ತಂಡವಾಗಿ ಲೀಗ್ ಹಂತವನ್ನು ಪೂರ್ಣಗೊಳಿಸಿತು.2016ರ ನಂತರ ಮೊದಲ ಸಲ ಅಗ್ರ ಎರಡರಲ್ಲಿ ಸ್ಥಾನ ಪಡೆದ ಆರ್ಸಿಬಿ ಮೇ 29ರಂದು ಮುಲ್ಲನ್ಪುರದಲ್ಲಿ ನಡೆಯಲಿರುವ ಕ್ವಾಲಿಫೈಯರ್ಸ್ 1ರಲ್ಲಿ ಫೈನಲ್ ಪ್ರವೇಶಕ್ಕಾಗಿ ಪಂಜಾಬ್ ಕಿಂಗ್ಸ್ ತಂಡದ ಸವಾಲು ಎದುರಿಸಲಿದೆ. ಸೋತ ತಂಡ ಕ್ವಾಲಿಫೈಯರ್ಸ್ 2ರಲ್ಲಿ ಗೆದ್ದು ಫೈನಲ್ ಪ್ರವೇಶಿಸುವ ಅವಕಾಶವನ್ನು ಹೊಂದಿದೆ.
ಆರ್ಸಿಬಿ 228 ರನ್ಗಳ ಗುರಿಯನ್ನು 8 ಎಸೆತಗಳು ಬಾಕಿ ಇರುವಂತೆಯೇ ತಲುಪಿತು.
ಆರಂಭಿಕರಾದ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಪ್ರಥಮ ಎಸೆತದಿಂದಲೇ ವೇಗದ ಆಟಕ್ಕೆ ಒತ್ತು ನೀಡಿ ಪವರ್ ಪ್ಲೇ ನ ಮೊದಲ ನಾಲ್ಕು ಓವರ್ ಗಳಲ್ಲೇ ತಂಡದ ಮೊತ್ತವನ್ನು 50ರ ಗಡಿ ದಾಟಿಸುತ್ತಾರೆ. 6ನೇ ಓವರ್ ನ 4ನೇ ಎಸೆತದಲ್ಲಿ ಫಿಲ್ ಸಾಲ್ಟ್ ಅವರ ವಿಕೆಟ್ ಪಡೆಯುವಲ್ಲಿ ಲೋಕಲ್ ಬಾಯ್ ಆಕಾಶ್ ಸಿಂಗ್ ಯಶಸ್ವಿಯಾಗುತ್ತಾರೆ. ತಂಡದ ಮೊತ್ತ 61 ಆದ ಸಂದರ್ಭದಲ್ಲಿ 30 ರನ್ ಗಳಿಸಿದ್ದ ಅವರು ವಿಘ್ನೇಶ್ ರಾಠಿ ಅವರಿಗೆ ಕ್ಯಾಚಿತ್ತರು.
ಬಳಿಕ ಕ್ರೀಸಿಗೆ ಬಂದ ಇಂಪ್ಯಾಕ್ಟ ಪ್ಲೇಯರ್ ರಜತ್ ಪಾಟೀದಾರ್ ಬಂದೊಡನೆ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ ವಿರಾಟ್ ಕೊಹ್ಲಿಗೆ ಸಾಥ್ ನೀಡುವ ಸೂಚನೆ ನೀಡಿದ್ದರು. ಆದರೆ 8ನೇ ಓವರ್ ನಲ್ಲಿ 7 ಎಸೆತಗಳಿಂದ 14 ರನ್ ಗಳಿಸಿದ್ದ ಅವರನ್ನು ಓರೂರ್ಕ್ ಅವರು ಅಬ್ದುಲ್ ಸಮದ್ಗೆ ಕ್ಯಾಚ್ ಕೊಡಿಸುವಲ್ಲಿ ಯಶಸ್ವಿಯಾದರು. ಇದರ ಮುಂದಿನ ಎಸೆತದಲ್ಲೇ ಲಿವಿಂಗ್ ಸ್ಟೋನ್ ವಿಕೆಟ್ ಸಹ ಪತನಗೊಂಡಿತು. ಮತ್ತೊಂದೆಡೆ ತುದಿಯಲ್ಲಿ ವಿರಾಟ್ ಕೊಹ್ಲಿ ಅವರು ತಮ್ಮ ಜವಾಬ್ದಾರಿಯುತ ಆಟವಾಡಿದರು. 27 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದ ಅವರು ತಂಡವನ್ನು ದಡಸೇರಿಸುವ ಉತ್ಸಾಹದಲ್ಲಿದ್ದರು. ಆದರೆ 12 ನೇ ಓವರ್ನಲ್ಲಿ ತಂಡದ ಮೊತ್ತ 123 ರನ್ ಆಗಿದ್ದಾಗ 30 ಎಸೆತಗಳಲ್ಲಿ 54 ರನ್ ಗಳಿಸಿದ್ದ ಅವರು ಆವೇಶ್ ಖಾನ್ ಬೌಲಿಂಗ್ ನಲ್ಲಿ ಆಯುಷ್ ಬದೋನಿಗೆ ಕ್ಯಾಚ್ ನೀಡಿದರು. ಅವರ ಬ್ಯಾಟಿನಿಂದ 10 ಬೌಂಡರಿಗಳು ಹರಿದು ಬಂದವು.
* ಮಾಯಾಂಕ್ – ಜಿತೇಶ್ ಶತಕದ ಜೊತೆಯಾಟ
ಕನ್ನಡಿಗ ಮಾಯಾಂಕ್ ಅಗರ್ವಾಲ್ ಅವರನ್ನು ಸೇರಿಕೊಂಡ ನಾಯಕ ಜಿತೇಶ್ ಶರ್ಮಾ ಕೇವಲ 21 ಎಸೆತಗಳಲ್ಲಿ 50 ರನ್ ಚಚ್ಚಿ ಆರ್ಸಿಬಿ ಪಾಳಯದಲ್ಲಿ ಮತ್ತೆ ಜೀವ ತುಂಬಿದರು. ಈ ಹಂತದಲ್ಲಿ ಪಂದ್ಯ ಸಂಪೂರ್ಣವಾಗಿ ಆರ್ಸಿಬಿ ಕಡೆಗೆ ವಾಲಿತು. ಆದರೆ ಜಿತೇಶ್ ಶರ್ಮಾ ಅವರು 49 ರನ್ ಗಳಿಸಿದ್ದಾಗ ವಿಫ್ನೇಶ್ ರಾಠಿ ಅವರು ಆಯುಷ್ ಬದೋನಿಗೆ ಕ್ಯಾಚ್ ಕೊಡಿಸುವಲ್ಲಿ ಯಶಸ್ವಿಯಾದರು. ಆದರೆ ಅದು ನೋಬಾಲ್ ಆಗಿದ್ದರಿಂದ ಜಿತೇಶ್ ಶರ್ಮಾ ಅವರಿಗೆ ಅದೃಷ್ಟ ಖುಲಾಯಿಸಿತು. ಮುಂದಿನ ಎಸೆತದಲ್ಲೇ ಅವರು ಸಿಕ್ಸರ್ ಬಾರಿಸಿ ಅರ್ಧಶತಕವನ್ನೂ ಪೂರೈಸಿಕೊಂಡರು.ಅಲ್ಲಿಂದ ಹಿಂತಿರುಗಿ ನೋಡದ ಜಿತೇಶ್ ಶರ್ಮಾ ಅವರು ಮಾಯಾಂಕ್ ಅವರೊಂದಿಗೆ ತಂಡವನ್ನು ಜಯದ ದಡ ತಲುಪಿಸಿದರು. ಇವರಿಬ್ಬರು ಮುರಿಯದ 5ನೇ ವಿಕೆಟ್ ಗೆ 107 ರನ್ ಗಳ ಜೊತೆಯಾಟವಾಡಿದರು. ಇದರಲ್ಲಿ ಜಿತೇಶ್ ಶರ್ಮಾ ಅವರು ಕೇವಲ 33 ಎಸೆತಗಳಲ್ಲಿ 85 ರನ್ ಗಳಿಸಿದರು. ಅದರಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್ ಗಳಿದ್ದವು. ಇನ್ನು ಮಾಯಾಂಕ್ ಅಗರ್ವಾಲ್ ಅವರು 23 ಎಸೆತಗಳಲ್ಲಿ 41 ರನ್ ಬಾರಿಸಿದರು,ಇದರಲ್ಲಿ 5 ಬೌಂಡರಿಗಳಿದ್ದವು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಲಖನೌ ತಂಡ ಬೆಂಗಳೂರು ತಂಡದಲ್ಲಿ ಪ್ರಮುಖ ಬೌಲರ್ಗಳಿಲ್ಲದ ಅವಕಾಶವನ್ನು ಉಪಯೋಗ ಮಾಡಿಕೊಂಡಿತು. ನಾಯಕ ರಿಷಭ್ ಪಂತ್ ಅವರ ಜತೆಗೆ ಮಿಚೆಲ್ ಮಾರ್ಷ್ ಅವರ ಅರ್ಧ ಶತಕದ ಬಲದಿಂದ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 227 ರನ್ ಪೇರಿಸಿತು. ಮಾರ್ಷ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಬ್ರಿಟ್ಝ್ ಆರಂಭದಿಂದಲೇ ಅಬ್ಬರಿದರು. ಆದರೆ ಕೇವಲ 14 ರನ್ಗಳಿಗೆ ಸೀಮಿತರಾದರು. ಆದರೆ ಬಳಿಕ ಮಾರ್ಷ್ ಮತ್ತು ನಾಯಕ ರಿಷಭ್ ಪಂತ್ ಗೆಲುವಿನೊಂದಿಗೆ ಅಭಿಯಾನ ಮುಗಿಸುವ ಗುರಿ ಹೊಂದಿದ್ದ ಲಖನೌ ತಂಡದ ಕಾರ್ಯತಂತ್ರಕ್ಕೆ ಅನುಗುಣವಾಗಿ ಬ್ಯಾಟಿಂಗ್ ಪ್ರದರ್ಶಿಸಿದರು. ಇವರಿಬ್ಬರ ಆರ್ಭಟಕ್ಕೆ ಆರ್ಸಿಬಿ ಬೌಲರ್ಗಳು ಕಂಗಾಲಾಗಿದ್ದರು.
* ಹೊಸ ದಾಖಲೆ ಬರೆದ ಆರ್ಸಿಬಿ
ಆರ್ಸಿಬಿ ತಂಡವು ಈ ಬಾರಿ ಐಪಿಎಲ್ನಲ್ಲಿ ಹೊಸ ದಾಖಲೆ ಬರೆದಿದೆ. ತವರಿನಿಂದ ಹೊರಗೆ ಆಡಿದ ಎಲ್ಲಾ ಏಳು ಪಂದ್ಯಗಳನ್ನು ಗೆದ್ದಿದೆ. ತವರು ಮತ್ತು ಹೊರಗಿನ ಮೈದಾನಗಳಲ್ಲಿ ಆಡಿದಾಗ, ಯಾವುದೇ ತಂಡವು ಈ ಹಿಂದೆ ಎಲ್ಲಾ ಪಂದ್ಯಗಳನ್ನು ಗೆದ್ದಿರಲಿಲ್ಲ. ಆದರೆ 2025ರ ಐಪಿಎಲ್ನಲ್ಲಿ ಆರ್ಸಿಬಿ ಈ ಸಾಧನೆ ಮಾಡಿದೆ. 2012ರಲ್ಲಿ ಕೆಕೆಆರ್ ಮತ್ತು ಮುಂಬಯಿ ಇಂಡಿಯನ್ಸ್ ತಂಡಗಳು ಸಹ ಲೀಗ್ ಹಂತದಲ್ಲಿ ಏಳು ಪಂದ್ಯಗಳನ್ನು ಗೆದ್ದಿದ್ದವು. ಆದರೆ, ಅದು 16 ಪಂದ್ಯಗಳ ಸೀಸನ್ ಆಗಿತ್ತು. ಆಗ ಎಂಟು ಪಂದ್ಯಗಳು ನಡೆದಿದ್ದವು. ಮುಂಬಯಿ ಮತ್ತು ಕೆಕೆಆರ್ ತಂಡಗಳು ಒಂದೊಂದು ಪಂದ್ಯವನ್ನು ಸೋತಿದ್ದವು.








