ಸಿದ್ದರಾಮಯ್ಯ ಸರ್ಕಾರಕ್ಕೆ ವರ್ಷದ ಸಂಭ್ರಮ
– ಸವಾಲುಗಳ ಮಧ್ಯೆ ಗ್ಯಾರಂಟಿ ಅನುಷ್ಠಾನ
– 135 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಪಡೆದಿದ್ದ ಕಾಂಗ್ರೆಸ್
NAMMUR EXPRESS NEWS
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮೇ 20ಕ್ಕೆ ವರ್ಷ ಪೂರೈಸಲಿದೆ. ಹೆಚ್ಚುವರಿ ಆರ್ಥಿಕ ಸಂಪನ್ಮೂಲಗಳ ಸಂಗ್ರಹದ ಸವಾಲಿನ ಮಧ್ಯೆಯೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ‘ಕೈ’ಸರ್ಕಾರ, ಅದರ ಪ್ರಭಾವವನ್ನು ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಕಾಣಲು ಕಾತರದಿಂದ ಕಾಯುತ್ತಿದೆ. 2023ರ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಪಡೆದಿದ್ದ ಕಾಂಗ್ರೆಸ್ ಪಕ್ಷ, ಮೇ 20ರಂದು ಸರ್ಕಾರ ರಚಿಸಿತ್ತು. ಸಿದ್ದರಾಮಯ್ಯ ಎರಡನೇ ಅವಧಿಗೆ ರಾಜ್ಯದ ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರ ಎಂಟು ಸಚಿವರೂ ಅದೇ ದಿನ ಸಂಪುಟ ಸೇರಿದ್ದರು. ಮೇ 27ರಂದು ಸಂಪುಟದ ವಿಸ್ತರಣೆಯೊಂದಿಗೆ ಎಲ್ಲ ಸ್ಥಾನಗಳನ್ನೂ ಭರ್ತಿ ಮಾಡಲಾಗಿತ್ತು. ಇದೀಗ ವರ್ಷದ ಸಂಭ್ರಮ ಕಂಡು ಬರುತ್ತಿದೆ. ಎಲ್ಲೆಡೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಕಾಣುತ್ತಿದೆ.
ಗ್ಯಾರಂಟಿ ಯೋಜನೆ ದಾಖಲೆ
ಪ್ರತಿ ಕುಟುಂಬಕ್ಕೆ 200 ಯೂನಿಟ್ವರೆಗೆ ಉಚಿತ ವಿದ್ಯುತ್ ಪೂರೈಸುವ ‘ಗೃಹ ಜ್ಯೋತಿ’, ಕುಟುಂಬದ ಯಜಮಾನಿಗೆ ತಿಂಗಳಿಗೆ ₹2,000 ನೆರವು ನೀಡುವ ‘ಗೃಹ ಲಕ್ಷ್ಮಿ’, ಅಂತ್ಯೋದಯ ಮತ್ತು ಆದ್ಯತಾ ವಲಯದ ಕುಟುಂಬಗಳ (ಪಿಎಚ್ಎಚ್) ಪಡಿತರ ಚೀಟಿ ಹೊಂದಿದ ಕುಟುಂಬಗಳ ಪ್ರತಿ ಸದಸ್ಯರಿಗೆ ತಿಂಗಳಿಗೆ 10 ಕೆ.ಜಿ. ಆಹಾರ ಧಾನ್ಯವನ್ನು ಉಚಿತವಾಗಿ ವಿತರಿಸುವ ‘ಅನ್ನ ಭಾಗ್ಯ’, ರಾಜ್ಯ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳ ಬಸ್ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಶಕ್ತಿ’ ಮತ್ತು ನಿರುದ್ಯೋಗಿ ಪದವೀಧರರು ಹಾಗೂ ಡಿಪ್ಲೊಮಾ ಪದವೀಧರರಿಗೆ ಮಾಸಾಶನ ನೀಡುವ “ಯುವನಿಧಿ’ ಗ್ಯಾರಂಟಿ ಗಳನ್ನು ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು.
ಪ್ರಮಾಣವಚನದ ಬಳಿಕ ನಡೆಸಿದ ಮೊದಲ ಸಂಪುಟ ಸಭೆಯಲ್ಲೇ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಒಪ್ಪಿಗೆ ನೀಡಲಾಗಿತ್ತು. ಹಂತ ಹಂತವಾಗಿ ಈ ಯೋಜನೆಗಳು ಅನುಷ್ಠಾನಕ್ಕೆ ಬಂದವು. ಯುವನಿಧಿ ಇನ್ನೂ ಅನುಷ್ಠಾನದ ಹಂತದಲ್ಲಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕ್ಕಾಗಿ ₹52,000 ಕೋಟಿ ಸಂಪನ್ಮೂಲ ಸಂಗ್ರಹಿಸಬೇಕಾದ ಒತ್ತಡವೂ ಸರ್ಕಾರದ ಮೇಲಿತ್ತು. ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟ ಸರ್ಕಾರ, ಅಭಿವೃದ್ಧಿ ವೆಚ್ಚಗಳಿಗೆ ಕತ್ತರಿ ಹಾಕಿ ಗ್ಯಾರಂಟಿ ಗಳತ್ತ ಅನುದಾನದ ಹರಿವು ತಿರುಗಿಸಿತ್ತು. ಲೋಕಸಭಾ ಚುನಾವಣೆಯ ಬಳಿಕ ಮುಂದೇನು ಎಂಬ ಕುತೂಹಲ ರಾಜ್ಯದಲ್ಲಿದೆ.