ಟಾಪ್ 3 ನ್ಯೂಸ್
– ಶೃಂಗೇರಿ ಜಗದ್ಗುರುಗಳ ಆಶೀರ್ವಾದ ಪಡೆದ ಅಮಿತ್ ಶಾ
– ಫೆಬ್ರವರಿ 1ರಿಂದ ಹೊಸದಾಗಿ ವಾಹನ ಖರೀದಿ ಮಾಡುವವರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್
– ಬಿಪಿಎಲ್ ಕಾರ್ಡ್ ನವರಿಗೆ ಹೃದಯ, ಶ್ವಾಸಕೋಶ, ಮೂಳೆ ಕಸಿಯೂ ಲಭ್ಯ
NAMMUR EXPRESS NEWS
ಪ್ರಯಾಗ್ರಾಜ್: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಶೃಂಗೇರಿ ಮಠದ ಪರಮಪೂಜ್ಯ ಜಗದ್ಗುರುಳಾದ ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮೀಜಿ ಅವರು ಭಾಗವಹಿಸಿ ಪುಣ್ಯ ಸ್ನಾನ ಮಾಡಿದರು. ಧರ್ಮ ವಿಜಯ ಯಾತ್ರೆ ಕೈಗೊಂಡಿರುವ ಸಂದರ್ಭದಲ್ಲಿ ಜಗದ್ಗುರುಗಳು ಮಹಾಕುಂಭದ ಅಂಗವಾಗಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ವರಿಷ್ಠ ಅಮಿತ್ ಶಾ ಹಾಗೂ ಅವರ ಪತ್ನಿ ಸೋನಾಲ್ ಶಾ ಅವರು ಆಶೀರ್ವಾದ ಪಡೆದರು.
– ಫೆಬ್ರವರಿ 1ರಿಂದ ಹೊಸದಾಗಿ ವಾಹನ ಖರೀದಿ ಮಾಡುವವರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್
ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಯು ಫೆ.1ರಿಂದ ಹೊಸ ಕಾರು ಹಾಗೂ ಬೈಕ್ ಖರೀದಿಸುವವರಿಗೆ ಹೆಚ್ಚುವರಿ ಸೆಸ್ ವಿಧಿಸಲು ನಿರ್ಧರಿಸಿದ್ದು, ಅಧಿಕೃತ ಆದೇಶವನ್ನು ಹೊರಡಿಸಿದೆ. ಸಾರಿಗೆ ಇಲಾಖೆ ಈ ಕುರಿತು ಅಧಿಕೃತ ಆದೇಶವನ್ನು ಹೊರಡಿಸಿದ್ದು, ಹೊಸ ಕಾರುಗಳನ್ನು ಖರೀದಿಸುವವರಿಗಾಗಿ 1000 ರುಪಾಯಿ ಹಾಗೂ ಬೈಕ್ ಖರೀದಿಸುವವರಿಗಾಗಿ 500 ರು. ಹೆಚ್ಚು ಸೆಸ್ ಪಾವತಿಸಬೇಕಾಗುತ್ತದೆ. ಈ ಹೆಚ್ಚುವರಿ ಸೆಸ್ ಮೋಟಾರು ಸಾರಿಗೆ ಕಾರ್ಮಿಕರ ಸಾಮಾಜಿಕ ಭದ್ರತೆ ಹಾಗೂ ಕ್ಷೇಮಾಭಿವೃದ್ಧಿ ನಿಧಿಗಾಗಿ ಸಾರಿಗೇತರ ವಾಹನಗಳ ನೋಂದಣಿ ಸಮಯದಲ್ಲಿ ದ್ವಿಚಕ್ರ ವಾಹನಗಳಿಗೆ 500ರು. ಹಾಗೂ ಮೋಟಾರ್ ಕಾರಗಳಿಗೆ 1000 ರು. ಹೆಚ್ಚುವರಿಯಾಗಿ ಸಂಗ್ರಹಿಸಲಾಗುತ್ತದೆ. ಯೆಲ್ಲೋ ಬೋರ್ಡ್ ವಾಹನಗಳನ್ನು ಖರೀದಿ ಮಾಡುವವರ ಬಳಿ ಸೆಸ್ ಸಂಗ್ರಹ ಮಾಡುವಂತಿಲ್ಲ ಎಂದು ರಾಜ್ಯ ಸಾರಿಗೆ ಇಲಾಖೆ ತನ್ನ ಅಧಿಕೃತ ಆದೇಶದಲ್ಲಿ ಉಲ್ಲೇಖಿಸಿದೆ.
– ಬಿಪಿಎಲ್ ಕಾರ್ಡ್ ನವರಿಗೆ ಹೃದಯ, ಶ್ವಾಸಕೋಶ, ಮೂಳೆ ಕಸಿಯೂ ಲಭ್ಯ
ಬೆಂಗಳೂರು: ಜೀವ ಸಾರ್ಥಕತೆ ಅಂಗಾಂಗ ಕಸಿ ಯೋಜನೆಯಡಿ ಶ್ವಾಸಕೋಶ, ಹೃದಯ ಮತ್ತು ಮೂಳೆ ಮಜ್ಜೆ ಕಸಿಯನ್ನೂ ಸೇರಿಸಿ ಅಂಗಾಂಗ ಕಸಿ ಯೋಜನೆಯನ್ನು ವಿಸ್ತರಿಸಲು ಆರೋಗ್ಯ ಇಲಾಖೆ ಬುಧವಾರ ಆದೇಶ ಹೊರಡಿಸಿದೆ. ಜನವರಿ 16ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ 2018 ರಿಂದ ಬಡತನ ರೇಖೆಗಿಂತ ಕೆಳಗಿರುವ ನಾಗರಿಕರಿಗಾಗಿ (ಆದ್ಯತಾ ವಲಯ) ಜಾರಿಯಲ್ಲಿರುವ ಅಂಗಾಂಗ ಕಸಿ ಯೋಜನೆಗೆ ಶ್ವಾಸಕೋಶ, ಹೃದಯ ಮತ್ತು ಮೂಳೆ ಮಜ್ಜೆ ಕಸಿ ಸೇರಿಸಲು ನಿರ್ಧಾರ ಮಾಡಲಾಗಿತ್ತು. ಇದರಡಿಯಲ್ಲಿಯೇ ಯೋಜನೆಯನ್ನು ವಿಸ್ತರಣೆ ಮಾಡಿ ಅಂಗಾಂಗ ಕಸಿ, ಇಮ್ಯುನೋಸಪ್ರೆಶನ್ ಔಷಧಿಗಳ ಖರೀದಿಯನ್ನು ಅತಿ ವಿರಳ ಮತ್ತು ದುಬಾರಿ ವೆಚ್ಚದ ಚಿಕಿತ್ಸಾ ವಿಧಾನಗಳ ಯೋಜನೆಯಲ್ಲಿ ವ್ಯಾಖ್ಯಾನಿಸಲಾದ ಷರತ್ತುಗಳ ಅನ್ವಯ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.