ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ ಮಹಿಳೆ.!
– ನಂಬಿ ಮೋಸ ಹೋದ ತೀರ್ಥಹಳ್ಳಿ ದಂಪತಿ!
– ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಇಂದಿರಾನಗರದ ಚೈತ್ರ ಎಂಬುವವರಿಗೆ ಪದವಿ ವಿದ್ಯಾರ್ಹತೆಯ ಮೇರೆಗೆ ರೈಲ್ವೆ ಇಲಾಖೆಯಲ್ಲಿ ಎಚ್ಆರ್ ಕೆಲಸವನ್ನು ಕೊಡಿಸುವುದಾಗಿ ಲಕ್ಷ ಲಕ್ಷ ಹಣ ವಂಚಿಸಿರುವ ಘಟನೆ ನೆಡೆದಿದೆ. ವಂಚಕಿ ಶ್ವೇತಾ ಚೈತ್ರಳ ಬಳಿ ಮೊದಲ ಹಂತವಾಗಿ ಫೋನ್ ಪೇ ಮೂಲಕ 19,600 ರೂ. ಹಣವನ್ನು ಹಾಕಿಸಿಕೊಂಡಿದ್ದಾರೆ. ಕೆಲ ದಿನಗಳ ಬಳಿಕ ನಿಮಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಸಿಕ್ಕಿದೆ. ಈ ಕೆಲಸ ಬೇಕಾದರೆ ನೀವೂ 1,50,000 ರೂ ಹಣ ನೀಡಬೇಕು ಎಂದು ನಂಬಿಸಿದ್ದಾರೆ. ಶ್ವೇತಾಳ ನಯವಾದ ಮಾತುಗಳನ್ನು ನಂಬಿ ಒಂದೂವರೆ ಲಕ್ಷ ರೂಪಾಯಿಯನ್ನು ಆನ್ಲೈನ್ ಮೂಲಕ ಚೈತ್ರ ಕಳಿಸಿಕೊಟ್ಟಿದ್ದಾರೆ. ನಿಮ್ಮದು ಮೆಡಿಕಲ್, ಪೊಲೀಸ್ ವೆರಿಫಿಕೇಷನ್ ಆಗಿದೆ ಇದಕ್ಕೆ ನಾವು ಹಣಕೊಟ್ಟು ಮಾಡಿಸಿದ್ದೀವಿ ಎಂದಿದ್ದಾರೆ. ಇಷ್ಟಾದ ಮೇಲೆ ಬೆಂಗಳೂರಿನ ರೈಲ್ವೇ ಕಚೇರಿಯಲ್ಲಿ ಸಹಿ ಮಾಡುವುದಿದೆ, ನೀವೂ ಬರಬೇಕಾಗುತ್ತದೆ ಎಂದು ಕರೆಸಿಕೊಂಡಿದ್ದಾಳೆ.
ಆರೋಪಿ ಶ್ವೇತಾ ಅನುಮಾನಬಾರದಿರಲಿ ಎಂದು ಚೈತ್ರ ಹಾಗೂ ಅರ್ಜುನ್ ದಂಪತಿಗೆ ತಾನೇ ಶಿವಮೊಗ್ಗ ಟು ಬೆಂಗಳೂರಿಗೆ ರೈಲ್ವೆ ಟಿಕೇಟ್ ಬುಕ್ ಮಾಡಿ ಕರೆಸಿಕೊಂಡಿದ್ದಾಳೆ. ಚೈತ್ರ ಬೆಂಗಳೂರಿಗೆ ಹೋದಾಗ ಶ್ವೇತಾ ರೈಲ್ವೆ ಕಚೇರಿಯ ಹತ್ತಿರ ಕರೆದುಕೊಂಡು ಹೋಗಿದ್ದಾಳೆ. ಇವರನ್ನು ಹೊರಗೆ ಕೂರಿಸಿ ಆಫೀಸರ್ ಬಂದಿಲ್ಲ ಎಂದೇಳಿ, ಯಾವುದೋ ಪೇಪರ್ಗೆ ಸಹಿ ಮಾಡಿಸಿಕೊಂಡು, ನಾಳೆ ನಾನೇ ಸಬ್ಮಿಟ್ ಮಾಡುತ್ತೇನೆ ಎಂದು ಹೇಳಿದ್ದಾಳೆ.
ಬಳಿಕ ಮತ್ತೊಬ್ಬ ವಂಚಕ ಪ್ರಶಾಂತ್ ದೇಶಪಾಂಡೆ ಅವರನ್ನು ಪರಿಚಯಿಸಿ ಇವರೇ ನೋಡಿ ಜಾಬ್ ಮಾಡಿಸಿಕೊಡುವವರು ಎಂದು ಹೇಳಿ ತೋರಿಸಿದ್ದಾಳೆ. ಇವರೇ ನಿಮಗೆ ಕೆಲಸ ಕೊಡಿಸುವವರು ಅವರೊಂದಿಗೆ ಇನ್ನು ಮುಂದೆ ಮಾತನಾಡಿಕೊಳ್ಳಿ ಎಂದು ಜಾರಿಕೊಂಡಿದ್ದಾಳೆ. ಈ ವಿಚಾರದಲ್ಲಿ ಅರ್ಜುನ್ ಟಿ.ಪಿ. ಎಂಬುವವರಿಂದ ಮೂವರಿಗೆ ವಂಚನೆ ಮಾಡಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರುದಾರ ಅರ್ಜುನ್ಗೆ 4.02 ಲಕ್ಷ ರೂ., ಕೊಪ್ಪ ತಾಲೂಕಿನ ಆದರ್ಶಗೆ 6.50 ಲಕ್ಷ ರೂ. ಹಾಗೂ ಶಿವಮೊಗ್ಗದ ನವೀನ್ 3,42,500 ರೂ. ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ರಿಪ್ಪನ್ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.