Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್
– ಮಂಗಳೂರು : ಅಪರಿಚಿತ ಕಾರಿನಲ್ಲಿ ಒಂದು ಕೋಟಿ ಪತ್ತೆ!
– ಕಡಬ: ಆಡು ಕದ್ದು, ಆ್ಯಂಬುಲೆನ್ಸ್‌ನಲ್ಲಿ ಸಾಗಾಟ, ಕೊಲೆ!
– ಬೆಳ್ತಂಗಡಿ: ಚಾರ್ಮಾಡಿ ಘಾಟಿನಲ್ಲಿ ಅಪಘಾತ, ನಾಲ್ವರಿಗೆ ಗಂಭೀರ ಗಾಯ

NAMMUR EXPRESS NEWS
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 63ರಲ್ಲಿ ರಾಮನಗುಳಿ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಒಂದು ಕೋಟಿ ರೂ. ಪತ್ತೆಯಾಗಿದೆ. ಯಲ್ಲಾಪುರ ಅಂಕೋಲಾ ನಡುವಿನ ಹೆದ್ದಾರಿಯಲ್ಲಿ ರಾಮನಗುಳಿ ಗ್ರಾಮ ಇದ್ದು, ಇಲ್ಲಿ ಸಂಜೆ ನಿರ್ಜನ ಪ್ರದೇಶದಲ್ಲಿ ಯಾರು ಕಾರು ನಿಲ್ಲಿಸಿ ಹೋದರು ಎಂಬುದು ಬೆಳಕಿಗೆ ಬರಬೇಕಿದೆ.‌ ಕಾರಿಗೆ ಹಾಕಿದ ನಂಬರ್ ಪ್ಲೇಟ್ ಫೇಕ್ ಎಂದು ಗೊತ್ತಾಗಿದೆ. ಅಂಕೋಲಾ ದಿಂದ ಬಂದ ಪೊಲೀಸರು ಕಾರನ್ನು ವಶಕ್ಕೆ ಪಡೆದು ಅದರಲ್ಲಿನ ಒಂದು ಕೋಟಿ ವಶಪಡಿಸಿಕೊಂಡಿದ್ದಾರೆ. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಕಾರು ಮಂಗಳೂರು ಮೂಲದವರದ್ದು ಎಂದು ಇದೀಗ ತನಿಖೆಯಿಂದ ಬೆಳಕಿಗೆ ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

* ಕಡಬ: ಆಡು ಕದ್ದು, ಆ್ಯಂಬುಲೆನ್ಸ್‌ನಲ್ಲಿ ಸಾಗಾಟ, ಕೊಲೆ!

ಕಡಬ: ಗುಡ್ಡದಲ್ಲಿ ಮೇಯಲು ಬಿಟ್ಟಿದ್ದ ಆಡುಗಳನ್ನು ಕಳವುಗೈದು ಆ್ಯಂಬುಲೆನ್ಸ್‌ನಲ್ಲಿ ಸಾಗಾಟಕ್ಕೆ ಯತ್ನಿಸುತ್ತಿದ್ದ ವೇಳೆ ಆರೋಪಿಗಳು ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಘಟನೆ ಐತ್ತೂರು ಗ್ರಾಮದ ಕೊಡೆಂಕೀರಿ ಎಂಬಲ್ಲಿ ನಡೆದಿರುವುದು ವರದಿಯಾಗಿದೆ. ಗುಡ್ಡದಲ್ಲಿ ಮೇಯಲು ಬಿಟ್ಟಿದ್ದ ಕೊಡೆಂಕೀರಿ ನಿವಾಸಿ ಜಾರ್ಜ್ ಕುಟ್ಟಿ ಎಂಬವರಿಗೆ ಸೇರಿದ ಎರಡು ಆಡುಗಳನ್ನು ಬೈಕ್‌ನಲ್ಲಿ ಬಂದ ನಾಲ್ವರು ಕಳ್ಳರು ಹಿಡಿದು ಕೊಂದಿದ್ದಾರೆ. ಬಳಿಕ ಅವುಗಳನ್ನು ಕಡಬದ ಆ್ಯಂಬುಲೆನ್ಸ್‌ನಲ್ಲಿ ಸಾಗಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆನ್ನಲಾಗಿದೆ. ಈ ವೇಳೆ ಸ್ಥಳೀಯ ಮಹಿಳೆಯೊಬ್ಬರು ಗಮನಿಸಿ ಬೊಬ್ಬೆ ಹೊಡೆದಿದ್ದಾರೆ. ಈ ವೇಳೆ ಬೈಕನ್ನು ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಬೈಕ್‌ನ ಜಾಡು ಹಿಡಿದ ಸ್ಥಳೀಯರು ಆರೋಪಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಿಸಿದಾಗ ಆಡನ್ನು ಕಳವುಗೈಯಲು ಯತ್ನಿಸಿರುವುದು ಬಯಲಾಗಿದೆ. ಕೃತ್ಯಕ್ಕೆ ಬಳಸಿದ ಆ್ಯಂಬುಲೆನ್ಸ್‌ನಲ್ಲಿ ಹಿಂದಿನಿಂದಲೂ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

* ಬೆಳ್ತಂಗಡಿ: ಚಾರ್ಮಾಡಿ ಘಾಟಿನಲ್ಲಿ ಅಪಘಾತ, ನಾಲ್ವರಿಗೆ ಗಂಭೀರ ಗಾಯ

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಮೂರನೇ ತಿರುವಿನಲ್ಲಿ ತಡ ರಾತ್ರಿ ಲಾರಿ ಮತ್ತು ಕಾರು ಡಿಕ್ಕಿ ಯಾಗಿ ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ಮೂಡಿಗೆರೆಯಿಂದ ಉಜಿರೆ ಕಡೆ ಬರುತ್ತಿದ್ದ ಕಾರು ಹಾಗೂ ಕೊಟ್ಟಿಗೆಹಾರ ಕಡೆ ತೆರಳುತ್ತಿದ್ದ ಲಾರಿ ಡಿಕ್ಕಿಯಾಗಿದ್ದು, ಕಾರಿನಲ್ಲಿ ಉಜಿರೆ ಕಡೆ ಪ್ರಯಾಣಿಸುತ್ತಿದ್ದ ಹಂಪೆಯ ವೇದಮ್ಮ (55) ಜ್ಞಾನಮ್ಮ(70), ಮಂಜುಳಾ (50) ಮತ್ತು ರೇಣುಕಾ (26) ಗಂಭೀರವಾಗಿ ಗಾಯಗೊಂಡಿದ್ದು, ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರಿನಲ್ಲಿದ್ದ ಚಾಲಕ ಮತ್ತು ಇಬ್ಬರು ಮಕ್ಕಳು ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.