ವಿಶ್ವದ ಸುಂದರ ತಾಣ ಆಗುಂಬೆ ಕೊಳಕು, ಕಸ!
– ಎಲ್ಲಿ ನೋಡಿದರೂ ಕಸ, ಎಲ್ಲಿ ನೋಡಿದರೂ ಹಾಳು ಬಿದ್ದ ಕಟ್ಟಡಗಳು
– ಜಿಲ್ಲಾಡಳಿತ, ತಾಲೂಕು ಆಡಳಿತ, ಪ್ರವಾಸೋದ್ಯಮ ಇಲಾಖೆಗೆ ಕಣ್ಣಿಲ್ಲವೇ…?!
NAMMUR EXPRESS NEWS
ತೀರ್ಥಹಳ್ಳಿ: ಆಗುಂಬೆ ಎಂದಾಕ್ಷಣ ಒಮ್ಮೆ ಮೈ ರೋಮಾಂಚನಗೊಳ್ಳುತ್ತದೆ. ವಿಶ್ವದ ಪ್ರಸಿದ್ಧ ಸೌಂದರ್ಯ ತಾಣಗಳಲ್ಲಿ ಆಗುಂಬೆಯು ಒಂದು. ಇಲ್ಲಿನ ವೈವಿಧ್ಯಮಯ ಪರಿಸರ, ನಿಸರ್ಗ, ಸೂರ್ಯಾಸ್ತಮಾನ, ಸೂರ್ಯನ ಉದಯ, ಕಾಡು ಮೇಡು, ಇಲ್ಲಿನ ಮಳೆ ಎಲ್ಲರಿಗೂ ಇಷ್ಟವಾಗುವಂತದ್ದು. ಆದರೆ ಇಲ್ಲಿನ ಪರಿಸರ ಇತ್ತೀಚೆಗೆ ಕೊಳಕಾಗಿರುವುದು ಸ್ಥಳೀಯ ಗ್ರಾಮ ಪಂಚಾಯಿತಿ ನಿರ್ಲಕ್ಷ ಹಾಗೂ ತಾಲೂಕು ಆಡಳಿತ, ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷಕ್ಕೆ ಜನ ಛೀಮಾರಿ ಹಾಕುತ್ತಿದ್ದಾರೆ. ಕರಾವಳಿ ಹಾಗೂ ಮಲೆನಾಡನ್ನು ಸಂಪರ್ಕಿಸುವ ಆಗುಂಬೆ ರಾಜ್ಯ ಹಾಗೂ ದೇಶದಲ್ಲೇ ಪ್ರಸಿದ್ಧಿ, ಇಲ್ಲಿ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಜೊತೆಗೆ ಕರಾವಳಿಗೆ ಬರುವ ಪ್ರಯಾಣಿಕರು ಕೂಡ ವಾಹನಗಳು ಹಾಗೂ ಬಸ್ಗಳಲ್ಲಿ ಸಾಗುತ್ತಾರೆ. ಆದರೆ ಇಲ್ಲಿಯ ವಾತಾವರಣ ಅಸಹ್ಯ ಹುಟ್ಟಿಸುವಂತಿದೆ.
ಹಾಳು ಬಿದ್ದ ಕಟ್ಟಡಗಳ ಸ್ವಾಗತ!
ಆಗುಂಬೆ ಪಟ್ಟಣಕ್ಕೆ ಎಂಟ್ರಿ ಆಗುತ್ತಿದ್ದಂತೆ ಬಿದ್ದ ಕಟ್ಟಡಗಳು, ಮುರಿದು ಬಿದ್ದ ಪೊಲೀಸ್ ಠಾಣೆ, ಜೊತೆಗೆ ಕಪ್ಪುಮಸುಕಾಗಿರುವ ಬೋರ್ಡ್ ಗಳು ಕಾಣಸಿಗುತ್ತವೆ. ಆದರೆ ಇದನ್ನು ಸ್ವಚ್ಛಪಡಿಸುವಲ್ಲಿ ಒಂದು ಸುಂದರವಾದ ತಾಣವನ್ನು ಮಾಡುವಲ್ಲಿ ಸ್ಥಳೀಯ ಆಗುಂಬೆ ಗ್ರಾಮ ಪಂಚಾಯಿತಿ, ತೀರ್ಥಹಳ್ಳಿ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸಂಪೂರ್ಣ ವಿಫಲವಾಗಿದೆ. ಈ ಬಗ್ಗೆ ಕಳೆದ 5 ವರ್ಷಗಳಿಂದಲೂ ನಮ್ಮೂರ್ ಎಕ್ಸ್ ಪ್ರೆಸ್ ಹಲವು ಬಾರಿ ವಿಶೇಷ ವರದಿ ಮಾಡಿದೆ. ಆದರೆ ಇದು ಅಧಿಕಾರಿಗಳ ನಿರ್ಲಕ್ಷ ಜನಪ್ರತಿನಿಧಿಗಳ ಜಡ್ಡುತನಕ್ಕೆ ಸಾಕ್ಷಿಯಾಗಿದೆ.
ಕ್ಲೀನ್ ಆಗುಂಬೆ ಆಗುವುದು ಯಾವಾಗ?
ಆಗುಂಬೆ ತೀರ್ಥಹಳ್ಳಿಯ ಪ್ರಸಿದ್ಧ ಪ್ರವಾಸೋದ್ಯಮ ಕ್ಷೇತ್ರ ಇಲ್ಲಿ ಪ್ರತಿ ತಿಂಗಳು ಲಕ್ಷಾಂತರ ರೂ ವಹಿವಾಟು ನಡೆಯುತ್ತದೆ. ಜೊತೆಗೆ ತೀರ್ಥಹಳ್ಳಿಯ ಹೆಮ್ಮೆ ಕೂಡ ಆದರೆ ಇದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವಲ್ಲಿ ಆಡಳಿತ ವಿಫಲವಾಗಿರುವುದು ಅನೇಕರ ಕೋಪಕ್ಕೆ ಗುರಿಯಾಗಿದೆ. ಇಲ್ಲಿಯ ಪ್ರವಾಸಿಗರು ಹಾಗೂ ಕೆಲ ಸ್ಥಳೀಯರು ಈ ಬಗ್ಗೆ ನಮ್ಮೂರ ಎಕ್ಸ್ಪ್ರೆಸ್ ಗೆ ದೂರು ನೀಡಿದ್ದು ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು. ಅಲ್ಲದೆ ಅನೇಕ ಸೇವಾ ಸಂಸ್ಥೆಗಳು, ಸಂಘಟನೆಗಳು, ಸಂಘ-ಸಂಸ್ಥೆಗಳು ಈ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಿದರೂ ತಾಲೂಕು ಆಡಳಿತ, ಸ್ಥಳೀಯ ಆಡಳಿತದ ನಿರ್ಲಕ್ಷ ಮತ್ತೆ-ಮತ್ತೆ ಇಲ್ಲಿ ಕಾಣುತ್ತದೆ.
ಹಳೆ ಪೊಲೀಸ್ ಠಾಣೆ ಆಗುಂಬೆಗೆ ಕಳಂಕ!
ಆಗುಂಬೆಯಲ್ಲಿರುವ ಹಳೆ ಪೊಲೀಸ್ ಠಾಣೆ ರಸ್ತೆಗೆ ಎದುರಾಗಿದೆ. ಯಾವುದೇ ಪ್ರಯಾಣಿಕ ಪ್ರವಾಸಿಗ ಬಂದರೆ ಅದೇ ಕಟ್ಟಡ ಎದುರಾಗುತ್ತದೆ, ಅಲ್ಲಿರುವ ಹಂಚಿನ ಕಟ್ಟಡ ಬಿದ್ದು ಹಳೆಯ ಜಾಗದಂತೆ ಭಾಸವಾಗುತ್ತಿದೆ. ಇದರಿಂದಾಗಿ ಆಗುಂಬೆ ಸೌಂದರ್ಯಕ್ಕೆ ಕುಂದುಂಟಾಗಿದೆ, ಹೀಗಾಗಿ ತಕ್ಷಣ ಇಲ್ಲಿಯ ಪೊಲೀಸ್ ಠಾಣೆಯನ್ನು ಸ್ಥಳಾಂತರಿಸಿ ಇಲ್ಲವೇ ಹಳೆ ವಸ್ತುಗಳು, ಆಗುಂಬೆ ಪರಿಸರವನ್ನು ಪರಿಚಯಿಸುವ ಕಲಾ ಕೇಂದ್ರವನ್ನಾಗಿ ಮಾಡಬೇಕೆನ್ನುವುದು ಕಲಾ ರಸಿಕರ ಒತ್ತಾಯವಾಗಿದೆ. ತಕ್ಷಣ ಈ ಬಗ್ಗೆ ಆಡಳಿತಗಳು ಸರಿಪಡಿಸಬೇಕು ಶಾಸಕರು ಈ ಬಗ್ಗೆ ಗಮನಿಸಬೇಕು ಎಂಬ ಒತ್ತಾಯ ಪ್ರವಾಸಿಗರಿಂದ ಹಾಗೂ ಪರಿಸರ ಪ್ರೇಮಿಗಳಿಂದ ಕೇಳಿ ಬಂದಿದೆ.