ಖರ್ಗೆ ಮೈಬಣ್ಣದ ವಿವಾದ: ಜ್ಞಾನೇಂದ್ರ ಕ್ಷಮೆಗೆ ಕಾಂಗ್ರೆಸ್ ಪಟ್ಟು!
– ಅರಗ ಹೇಳಿಕೆ ಕುರಿತು ಟ್ವಿಟ್ ಮಾಡಿರುವ ಕಾಂಗ್ರೆಸ್
– ಜ್ಞಾನೇಂದ್ರ ಹೇಳಿದ್ದೇನು..?, ಕಾಂಗ್ರೆಸ್ ಹೇಳಿದ್ದೇನು?
NAMMUR EXPRESS NWES
ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಅವರು ಕ್ಷಮೆಯಾಚಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಒತ್ತಾಯಿಸಿದೆ. ಕಸ್ತೂರಿ ರಂಗನ್ ವರದಿ ಜಾರಿ ಕುರಿತು ಅರಣ್ಯ ಸಚಿವ ಈಶ್ವ ಖಂಡ್ರೆ ನೀಡಿದ ಹೇಳಿಕೆ ಖಂಡಿಸಿ ತೀರ್ಥಹಳ್ಳಿ ತಾಲ್ಲೂಕು ಕಚೇರಿ ಮುಂಭಾಗ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅರಗ ಜ್ಞಾನೇಂದ್ರ ಅವರು ಮಾತನಾಡಿದ್ದರು. ಇದೇ ವೇಳೆ ಸಚಿವ ಈಶ್ವರ್ ಖಂಡ್ರೆ ಮತ್ತು ಮಲ್ಲಿಕಾರ್ಜುನ ಖರ್ಗೆಗೆ ಅವಹೇಳನ ಮಾಡಿದ್ದರು.
ಅರಗ ಜ್ಞಾನೇಂದ್ರ ಹೇಳಿಕೆ ಕುರಿತು ಟ್ವಿಟ್ ಮಾಡಿರುವ ಕಾಂಗ್ರೆಸ್, ‘ಮಲ್ಲಿಕಾರ್ಜುನ ಖರ್ಗೆಯವರ ಮೈಬಣ್ಣದ ಬಗ್ಗೆ ಅವಹೇಳನ ಮಾಡಿದ ಅರಗ ಜ್ಞಾನೇಂದ್ರ ಅವರು ಬಿಜೆಪಿಯ ಕೀಳು ಮಟ್ಟದ ಮನಸ್ಥಿತಿಯನ್ನು ಪ್ರತಿನಿಧಿಸಿದ್ದಾರೆ. ಬಿಜೆಪಿಯವರಲ್ಲಿ ದಲಿತರ ಬಗ್ಗೆ ಇರುವ ಅಸಹನೆ, ಅಸಡ್ಡೆಯನ್ನು ವ್ಯಕ್ತಪಡಿಸಿದ್ದಾರೆ’ ಎಂದು ಕಿಡಿಕಾರಿದೆ.
ಮೈಬಣ್ಣದ ಬಗೆಗಿನ ಈ ಅವಹೇಳನ ಕೇವಲ ಖರ್ಗೆಯವರನ್ನು ಅವಮಾನಿಸಿದ್ದಲ್ಲ, ಖರ್ಗೆಯವರ ಹೆಸರಲ್ಲಿ ಇಡೀ ಮೂಲನಿವಾಸಿ ದಲಿತರಿಗೆ ಮಾಡಿದ ಅವಮಾನ. ಬಣ್ಣದ ಬಗೆಗಿನ ಶೋಷಣೆ, ಅವಮಾನವನ್ನು ತೊಡೆದುಹಾಕಲು ಜಾಗತಿಕ ಮಟ್ಟದಲ್ಲಿ ಚಳವಳಿಗಳು ನಡೆದಿವೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಮೈಬಣ್ಣದ ಬಗ್ಗೆ, ದೈಹಿಕ ರೂಪದ ಬಗ್ಗೆ ಅವಮಾನಿಸಿದರೆ ಮಹಾ ಅಪರಾಧಿಯಂತೆ ಕಾಣಲಾಗುತ್ತದೆ. ಆದರೆ, ಇಲ್ಲಿನ ಬಿಜೆಪಿಗರು ದಲಿತರನ್ನು, ದಲಿತರ ಮೈಬಣ್ಣವನ್ನು, ರೂಪವನ್ನು ಅವಮಾನಿಸುವುದು ಹೆಗ್ಗಳಿಕೆಯಾಗಿ ನೋಡುತ್ತದೆ’ ಎಂದು ಕಾಂಗ್ರೆಸ್ ಟೀಕಿಸಿದೆ. ಬಿಜೆಪಿಗೆ ದಲಿತರ ಬಗ್ಗೆ ಕಿಂಚಿತ್ತಾದರೂ ಗೌರವವಿದ್ದರೆ ಜ್ಞಾನೇಂದ್ರರನ್ನು ಉಚ್ಚಾಟನೆ ಮಾಡಬೇಕು, ಜ್ಞಾನೇಂದ್ರ ಅವರು ಖರ್ಗೆ ಹಾಗೂ ದಲಿತರ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಇದನ್ನೂ ಓದಿ : ಕಾಳುಮೆಣಸು ಬೆಳೆಗಾರರಿಗೆ ಬಂಪರ್!
HOW TO APPLY : NEET-UG COUNSELLING 2023