ಕೃಷ್ಣ ಜನ್ಮಾಷ್ಟಮಿ; ಮಕ್ಕಳ ಅಲಂಕಾರದ ಉಡುಪುಗಳಿಗೆ ಭರ್ಜರಿ ಬೇಡಿಕೆ
– ನಾನಾ ಬಗೆಗಳಲ್ಲಿ ಅಂಗಡಿಗಳಿಗೆ ಎಂಟ್ರಿ ನೀಡುತ್ತಿದೆ ಕೃಷ್ಣನ ಉಡುಪು
– ಅತ್ಯಾಕರ್ಷಕ ಕಿರೀಟ-ಕೊಳಲು ಖರೀದಿಯಲ್ಲಿ ಮುಗಿಬಿದ್ದ ಜನತೆ
NAMMUR EXPRESS NEWS
ತೀರ್ಥಹಳ್ಳಿ: ಕೃಷ್ಣ ಜನ್ಮಾಷ್ಟಮಿ ಬಂತೆಂದರೆ ಸಾಕು ಪೋಷಕರು ತಮ್ಮ ಮಕ್ಕಳಗೆ ಕೃಷ್ಣನ ವೇಷ ಧರಿಸಿ ಸಂಭ್ರಮಿಸುತ್ತಾರೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ಕೃಷ್ಣ ಜನ್ಮಾಷ್ಟಮಿಗೆ ನಾನಾ ಕಡೆ ಫ್ಯಾನ್ಸಿ ಡ್ರೆಸ್ ಹಾಗೂ ಫೋಟೊಶೂಟ್ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಪೋಷಕರು ಚಿಣ್ಣರಿಗೆ ಕೃಷ್ಣನ ಅವತಾರ ಮಾಡುವುದು ಕಾಮನ್ ಆಗಿದೆ. ಫ್ಯಾನ್ಸಿ ಸ್ಟೋರ್ ಹಾಗೂ ಬ್ಯೂಟಿ ಪಾರ್ಲರ್ ಗಳಲ್ಲಂತೂ ರಾಧಾ,ಕೃಷ್ಣರ ವೇಷ ಭೂಷಣಗಳದ್ದೇ ಹಾವಳಿ. ಎಲ್ಲಿ ನೋಡಿದರೂ ಮುತ್ತಿನ ಸರ, ಶಲ್ಯ, ಕೃಷ್ಣನ ಬಟ್ಟೆ, ಕೊಳಲು, ಕಿರೀಟ ಸೇರಿದಂತೆ ನಾನಾ ಬಗೆಯ ವಸ್ತುಗಳು ಕಣ್ಮನ ಸೆಳೆಯುತ್ತಿದ್ದು ಇದಕ್ಕೆ ಪೂರಕ ಎಂಬಂತೆ, ಅಂಗಡಿಗಳಲ್ಲಿ ಕೃಷ್ಣನ ಉಡುಪು ಹಾಗೂ ಕೃಷ್ಣ ಧರಿಸುವ ಆಕ್ಸೆಸರೀಸ್ಗಳಿಗೆ ಬೇಡಿಕೆ ಹೆಚ್ಚಾಗಿದೆ.
ಪುಟ್ಟ ಮಕ್ಕಳನ್ನು ಕೃಷ್ಣನಂತೆ ಬಿಂಬಿಸುವ ಮಿನಿ ಧೋತಿ-ಶಲ್ಯ:
ದೋತಿ ಶಲ್ಯ ಧರಿಸಿದಾಗ ಪುಟ್ಟ ಮಕ್ಕಳನ್ನು ಮುದ್ದು ಕೃಷ್ಣನಂತೆ ಬಿಂಬಿಸುವ ಮಿನಿ ಸೈಝಿನ ಬಾರ್ಡರ್ ಧೋತಿ ಹಾಗೂ ಶಲ್ಯಗಳು ಈ ಕೃಷ್ಣ ಜನ್ಮಾಷ್ಟಮಿಗೆ ನಾನಾ ಬಗೆಯಲ್ಲಿ ಎಂಟ್ರಿ ನೀಡಿವೆ. ಚಿಕ್ಕ ಕಂದಮ್ಮಗಳಿಂದಿಡಿದು ದೊಡ್ಡ ಮಕ್ಕಳಿಗೂ ಇವು ಲಭ್ಯ.
ಕೃಷ್ಣನ ಡ್ರೆಸ್ಗೆ ಮ್ಯಾಚಿಂಗ್ ಆಕ್ಸೆಸರೀಸ್ಗಳು :
ಕೃಷ್ಣನ ಫ್ಯಾನ್ಸಿ ಡ್ರೆಸ್ಗೆ ಮ್ಯಾಚಿಂಗ್ ಮಾಡಬಹುದಾದ ಪುಟ್ಟ ಹಾರ, ನೆಕ್ಲೆಸ್,ಸೊಂಟದ ಪಟ್ಟಿ, ಕಿವಿಯೊಲೆ ಸೇರಿದಂತೆ ಬಾಲಕೃಷ್ಣನ ಅಲಂಕಾರಕ್ಕೆ ಬೇಕಾದಂತ ಸೆಟ್ ಗಳು ದೊರೆಯುತ್ತಿದ್ದು ಇವುಗಳಿಗೂ ಬೇಡಿಕೆ ಹೆಚ್ಚಿದೆ.
ಅತ್ಯಾಕರ್ಷಕ ಕಿರೀಟ-ಕೊಳಲು :
ಎಲ್ಲದಕ್ಕಿಂತ ಹೆಚ್ಚಾಗಿ ಬೇಡಿಕೆಯಲ್ಲಿರುವುದು ಪುಟ್ಟ ಕಿರೀಟಗಳು. ಇನ್ನು ನಾನಾ ವಿನ್ಯಾಸದ ಕೊಳಲುಗಳು ಆಗಮಿಸಿದ್ದು, ಜನತೆಯು ಮಕ್ಕಳಿಗೆ ಕೊಳಲು ಹಾಗೂ ಕಿರೀಟ ಖರೀದಿಸಲು ಮುಗಿಬಿದ್ದಿರುವಂತ ದೃಶ್ಯಗಳು ಕಂಡುಬರುತ್ತಿವೆ.