ತೀರ್ಥಹಳ್ಳಿ ರಾಮೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಮಹಾರುದ್ರ ಹೋಮ
– ದೇವಸ್ಥಾನದ ಅಭಿವೃದ್ಧಿಗೆ ಬೇಕಿದೆ ಶಾಶ್ವತ ಸಮಿತಿ
– ತಹಸೀಲ್ದಾರ್ ನೇತೃತ್ವದಲ್ಲಿ ಸಮಿತಿ ರಚನೆಗೆ ಸಾರ್ವಜನಿಕರ ಒತ್ತಾಯ
NAMMUR EXPRESS NEWS
ತೀರ್ಥಹಳ್ಳಿ : ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರಾದ ಉಭಯ ಜಗದ್ಗುರುಗಳ ಪೂರ್ಣಾನುಗ್ರಹದಿಂದ ಶ್ರೀ ಶೋಭಕೃತ್ನಾಮ ಸಂವತ್ಸರದ ಶ್ರಾವಣ ಬಹುಳ ಏಕಾದಶಿ ದಿನಾಂಕ 10- 09-2023 ನೇ ಭಾನುವಾರ ಮತ್ತು ದ್ವಾದಶಿ ದಿನಾಂಕ 11- 09-2023 ನೇ ಸೋಮವಾರ ದಂದು ಶ್ರೀ ರಾಮೇಶ್ವರ ದೇವರ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥವಾಗಿ “ಮಹಾರುದ್ರ ಪುರಶ್ಚರಣ ಹೋಮ” ನಡೆಸಲು ಸಂಕಲ್ಪಿಸಲಾಗಿದೆ. ಭಕ್ತಾದಿಗಳು ಈ ದೇವತಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ತನು-ಮನ-ಧನದೊಂದಿಗೆ ಸಹಕರಿಸಿ, ಶ್ರೀ ಸ್ವಾಮಿಯ ತೀರ್ಥಪ್ರಸಾದವನ್ನು ಸ್ವೀಕರಿಸಿ, ಶ್ರೀ ರಾಮೇಶ್ವರ ದೇವರ ಕೃಪಾನುಗ್ರಹಕ್ಕೆ ಪಾತ್ರರಾಗಲು ಸಮಿತಿಯ ಸೊಪ್ಪುಗುಡ್ಡೆ ರಾಘವೇಂದ್ರ ಕೋರಿದ್ದಾರೆ.
ದೇವಸ್ಥಾನದಲ್ಲಿ ಕಾರ್ಯಕ್ರಮ ಏನಿರುತ್ತೆ? :
ದಿನಾಂಕ 10-09-2023 ನೇ ಭಾನುವಾರ ಶ್ರಾವಣ ಬಹುಳ ಏಕಾದಶಿ ಬೆಳಗ್ಗೆ ಗಂಟೆ 8-00 ಕ್ಕೆ “ಫಲನ್ಯಾಸ, ದೇವತಾ ಪ್ರಾರ್ಥನೆ” ತುಂಗಾ ನದಿಯಿಂದ “ಆಕ್ರೋದಕ ಅನಯನ” ಗಣಹೋಮ, “ಮಹಾರುದ್ರ ಪುರಶ್ಚರಣ” ಹೋಮ ಪ್ರಾರಂಭ, ಮಧ್ಯಾಹ್ನ ಗಂಟೆ 01- 30 ಕ್ಕೆ “ಮಹಾಮಂಗಳಾರತಿ” ದಿನಾಂಕ 11-09-2023 ನೇ ಸೋಮವಾರ ಶ್ರಾವಣ ಬಹುಳ ದ್ವಾದಶಿ ಬೆಳಗ್ಗೆ ಗಂಟೆ 08-00 ರಿಂದ “ಪುಣ್ಯಾಹ” “ಮಹಾರುದ್ರ ಪುರಶ್ಚರಣೆ ಹೋಮ” ಮಧ್ಯಾಹ್ನ ಗಂಟೆ 12-00 ಕ್ಕೆ ಪೂರ್ಣಾಹುತಿ, ಪ್ರಸಾದ ವಿನಿಯೋಗ” ನಂತರ ಸಾರ್ವಜನಿಕ “ಅನ್ನಸಂತರ್ಪಣೆ” ನೆಡೆಯಲಿದೆ. ರಾಮೇಶ್ವರ ದೇವಸ್ಥಾನದ ಅಭಿವೃದ್ಧಿಗಾಗಿ ಬೇಕಾಗಿದೆ ಶಾಶ್ವತ ಸಮಿತಿ
ತಹಸೀಲ್ದಾರ್ ಗಮನಿಸಲಿ :
ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನ ಈಗಾಗಲೇ ಪುನಃ ಪ್ರತಿಷ್ಠಾಪನೆ ಆಗಿ ಅಭಿವೃದ್ಧಿ ಆಗುತ್ತಿದೆ. ಅಭಿವೃದ್ಧಿ ಮಾಡುವ ಸಲುವಾಗಿ ಸ್ವಯಂ ಸೇವಕರಾಗಿ ಹಲವು ಮಂದಿ ಸಮಿತಿ ಎಂಬಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ದೇವಸ್ಥಾನದ ಅಭಿವೃದ್ಧಿ ಮಾಡಲು ಶಾಶ್ವತ ಸಮಿತಿಯ ಅಗತ್ಯವಿದ್ದು ಈ ಬಗ್ಗೆ ತಾಲೂಕು ತಹಸೀಲ್ದಾರ್ ಮತ್ತು ಶಾಸಕರು ಗಮನವಹಿಸಬೇಕಿದೆ. ರಾಮೇಶ್ವರ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು ದೇವಸ್ಥಾನದಿಂದ ವರ್ಷಕ್ಕೆ ಎಂಟರಿಂದ ಹತ್ತು ಲಕ್ಷ ಹಣವನ್ನು ಮುಜರಾಯಿ ಇಲಾಖೆಯವರು ಕಾಣಿಕೆ ಹುಂಡಿಯಿಂದ ತೆಗೆದುಕೊಂಡು ಹೋಗುತ್ತಾರೆ. ಆದರೆ ದೇವಸ್ಥಾನದ ಅಭಿವೃದ್ಧಿಗಾಗಿ ಸರ್ಕಾರದಿಂದ ಆದಾಯ ಬರುವುದಿಲ್ಲ. ಹಾಗೂ ದೇವಸ್ಥಾನವನ್ನು ನೋಡಿಕೊಳ್ಳಲು ಅಭಿವೃದ್ಧಿಯ ದೃಷ್ಠಿಯಿಂದ ಶಾಶ್ವತ ಸಮಿತಿಯೊಂದನ್ನು ತಹಸೀಲ್ದಾರ್ ನೇತೃತ್ವದಲ್ಲಿ ಮಾಡಬೇಕಿದೆ.
ಇತ್ತೀಚಿಗೆ ದೇವಸ್ಥಾನದಲ್ಲಿ ಹಲವು ಕಾರ್ಯಕ್ರಮಗಳು ನೆಡೆಯುತ್ತಿದ್ದು ಸರ್ಕಾರದಿಂದ ಯಾವುದೇ ಅನುದಾನ ಸಿಗುತ್ತಿಲ್ಲ. ದೇವಸ್ಥಾನದ ಹಣವನ್ನು ತೆಗೆದುಕೊಂಡು ಹೋಗುವ ಸರ್ಕಾರ ದೇವಸ್ಥಾನದ ಅಭಿವೃದ್ಧಿ ಕೂಡ ನೋಡಬೇಕಿದೆ. ಈ ಕಾರಣಕ್ಕೆ ಜಿಲ್ಲಾಧಿಕಾರಿಗಳು ತಹಸೀಲ್ದಾರ್ ನೇತೃತ್ವದಲ್ಲಿ ಸಮಿತಿ ರಚನೆಗೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.