ಇಂದಾವರ ರಸ್ತೆ ಕಥೆ ಕೇಳೋರಿಲ್ಲ!
– ತೀರ್ಥಹಳ್ಳಿ ಪಟ್ಟಣದ ಪಕ್ಕದ ರಸ್ತೆ ದುರಸ್ತಿಗಾಗಿ ಗ್ರಾಮಸ್ಥರ ಪಟ್ಟು
– ರಸ್ತೆ ಬೇಕು ರಸ್ತೆ: ಶಾಸಕರು, ಸರ್ಕಾರಕ್ಕೆ ಜನರ ಅಗ್ರಹ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ತೀರ್ಥಹಳ್ಳಿಯಿಂದ ಕೇವಲ 1.5 ಕಿಲೋಮೀಟರ್ ನಷ್ಟು ಅಂತರದಲ್ಲಿರುವ ಇಂದಾವರ ಪ್ರದೇಶದ ರಸ್ತೆಯು ತೀವ್ರ ಹದಗೆಟ್ಟಿದ್ದು, ಇಲ್ಲಿ ಸಂಚರಿಸುವ ವಾಹನಗಳು ಮತ್ತು ಇಲ್ಲಿಂದ ಪಟ್ಟಣಕ್ಕೆ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ತೀರ್ಥಹಳ್ಳಿಯ ಮುಖ್ಯರಸ್ತೆಯಿಂದ ಬೆಟ್ಟಮಕ್ಕಿ ಮಾರ್ಗವಾಗಿ ಸಂಚರಿಸುವ ಬೈಪಾಸ್ ರಸ್ತೆ ಕೂಡ ಆಗಿದೆ. ಅಲ್ಲದೆ ತೀರ್ಥಹಳ್ಳಿಯ ಪಟ್ಟಣದ ರಸ್ತೆಗಳು ಬ್ಲಾಕ್ ಆಗಿದ್ದ ಸಂದರ್ಭದಲ್ಲಿ ಇದೇ ಮಾರ್ಗವಾಗಿ ಹಲವಾರು ವಾಹನಗಳು ಸಂಚರಿಸಿದ್ದವು ಎನ್ನಲಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಇಲ್ಲಿನ ಶಾಸಕರು ಒಂದು ಕೋಟಿ ಅನುದಾನವನ್ನು ಮಂಜೂರು ಮಾಡಿಸಿದ್ದು, ಇದರಿಂದ ಕೇವಲ ಬದ್ನೇಹಿತ್ಲು ಬಳಿ ಕಾಂಕ್ರೀಟ್ ರಸ್ತೆ, ಒಂದು ಕಿರು ಸೇತುವೆ ಮತ್ತು ಕೊರೋಡಿ ಬಳಿ ಒಂದು ಮೋರಿಯ ನಿರ್ಮಾಣ ಕಾರ್ಯ ಮಾತ್ರ ನಡೆದಿದೆ. ಅಲ್ಲದೆ ಸುಮಾರು 20 ವರ್ಷಗಳ ಹಿಂದೆ ನ್ಯಾಷನಲ್ ಕಸ್ಟ್ರಕ್ಷನ್ ರವರು ಇಂದಾವರ ಮುಖ್ಯರಸ್ತೆಯನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಾಣ ಮಾಡಿರುವುದರ ಪರಿಣಾಮವಾಗಿ ಕೆಲವು ಕಡೆಗಳಲ್ಲಿ ಇನ್ನೂ ಸುಸ್ಥಿತಿಯಲ್ಲಿರುವುದು ಆಶಾದಾಯಕವಾಗಿದೆ.
ಹಲವು ಕಡೆಗಳಲ್ಲಿ ತುಂಬಾ ಗುಂಡಿಗಳು ಬಿದ್ದಿರುವುದರಿಂದ ಸ್ಥಳೀಯರು ಓಡಾಡಲು ಕಷ್ಟ ಪಡುವಂತಾಗಿದೆ. ಅಲ್ಲದೆ ಈಗಾಗಲೇ ಮಳೆ ಸಂಭವಿಸಿದ್ದು, ಇನ್ನೆರಡು ತಿಂಗಳು ಕಳೆದರೆ ಸಂಪೂರ್ಣವಾಗಿ ಮಳೆಗಾಲ ಪ್ರಾರಂಭಗೊಳ್ಳುವುದರಿಂದ ಅಷ್ಟರೊಳಗೆ ಶಾಸಕರು, ಸ್ಥಳೀಯ ಪ್ರತಿನಿಧಿಗಳು ರಸ್ತೆಯನ್ನು ದುರಸ್ತಿಗೊಳಿಸಿ ಸಹಕರಿಸಬೇಕೆಂದು ಇಂದಾವರ ಹಾಗೂ ಸುತ್ತಮುತ್ತಲ ಗ್ರಾಮಸ್ಥರ ಪರವಾಗಿ ಇಂದಾವರದ ವಿನಯ್ ಅವರು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.








