ಹಾಸನಾಂಬೆ ದರ್ಶನಕ್ಕೆ ಕ್ಷಣಗಣನೆ ಆರಂಭ..!!
– ಅ.9ಕ್ಕೆ ಗರ್ಭಗುಡಿ ಓಪನ್ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
– ಈ ಭಾರೀ ಗೋಲ್ಡ್ ಪಾಸ್ ಜಾರಿ, ವಿಐಪಿ ಪಾಸ್ ರದ್ದು
NAMMUR EXPRESS NEWS
ಹಾಸನ: ಹಾಸನದಲ್ಲಿ ವರ್ಷಕ್ಕೊಮ್ಮೆ ನಡೆಯುವ ಶ್ರೀ ಹಾಸನಾಂಬ ದೇವಿಯ ದರ್ಶನೋತ್ಸವಕ್ಕೆ ದಿನ ಗಣನೆ ಆರಂಭವಾಗಿದೆ. ಮುಂದಿನ ವಾರದಿಂದ ಹಾಸನಾಂಬ ದೇವಿ ಗರ್ಭಗುಡಿ ತೆರೆಯಲಿದ್ದು ಭಕ್ತರಿಗೆ ದರ್ಶನ ಸಿಗಲಿದೆ. ಈಗಾಗಲೇ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಶಕ್ತಿ ಸ್ವರೂಪಿಣಿಯಾದ ಹಾಸನಾಂಬ ದೇವಿಯ ದರ್ಶನ ಭಾಗ್ಯವನ್ನು ಕರುಣಿಸುವ ಈ ವಿಶೇಷ ಉತ್ಸವಕ್ಕಾಗಿ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಅಕ್ಟೋಬರ್ 9, 2025ರ ಗುರುವಾರ ಮಧ್ಯಾಹ್ನ 12 ಗಂಟೆ ನಂತರ ಅರಸು ವಂಶಸ್ಥರು ಬನ್ನಿ ಕಡಿದ ಬಳಿಕ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಾಗುತ್ತದೆ. ಗರ್ಭಗುಡಿ ಸ್ವಚ್ಚತಾ ಕಾರ್ಯದ ಬಳಿಕ ಮಾರನೇ ದಿನ ಬೆಳಗ್ಗೆ 5 ಗಂಟೆಯಿಂದ ಭಕ್ತರಿಗೆ ದರ್ಶನ ಭಾಗ್ಯ ಲಭಿಸುತ್ತದೆ. ಸಾರ್ವಜನಿಕರಿಗೆ ಅಕ್ಟೋಬರ್ 10 ರಿಂದ 22 ರವರೆಗೆ ದರ್ಶನಕ್ಕೆ ಅವಕಾಶವಿದ್ದು, ಮೊದಲ ದಿನ (ಅಕ್ಟೋಬರ್ 9) ಮತ್ತು ಕೊನೆಯ ದಿನ (ಅಕ್ಟೋಬರ್ 23) ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುವುದಿಲ್ಲ,
ಜಿಲ್ಲಾಡಳಿತ ಸರ್ವಸನ್ನದ್ದ
ಜಾತ್ರೆಯ ಯಶಸ್ಸಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಮತ್ತು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದ್ದು, ದೇವಸ್ಥಾನಕ್ಕೆ ಬಣ್ಣ ಬಳಿಯುವ ಕೆಲಸ ಪೂರ್ಣಗೊಂಡಿದೆ. ಆಹ್ವಾನ ಪತ್ರಿಕೆ ಹಂಚಿಕೆ, ಸ್ವಾಗತ ಕಮಾನು ನಿರ್ಮಾಣ. ನಗರದಾದ್ಯಂತ ಲೈಟಿಂಗ್ ಹಾಗೂ ಎಲ್ಇಡಿ ಅಳವಡಿಕೆ ಕಾರ್ಯ ಭರದಿಂದ ಸಾಗಿದೆ. ಭಕ್ತರ ಸುಗಮ ದರ್ಶನಕ್ಕಾಗಿ ಬ್ಯಾರಿಕೇಡ್, ಸರತಿ ಸಾಲು ವ್ಯವಸ್ಥೆ, ಜರ್ಮನ್ ಟೆಂಟ್ಗಳ ಸ್ಥಾಪನೆ, ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ, ವಿದ್ಯುತ್ ದೀಪಾಲಂಕಾರ ಮತ್ತು ಇತರ ಅಗತ್ಯ ಕಾರ್ಯಗಳನ್ನು ಪೂರ್ಣಗೊಳಿಸಲಾಗಿದೆ. ದೇವಾಲಯದ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಲು ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತಿದೆ. ಜನಸಂದಣಿಯ ನಿರ್ವಹಣೆಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತೆಗೆ, ತಾತ್ಕಾಲಿಕ ಶೌಚಾಲಯಗಳು, ಕುಡಿಯುವ ನೀರಿನ ವ್ಯವಸ್ಥೆ, ವೈದ್ಯಕೀಯ
ಸೌಲಭ್ಯಗಳು ಮತ್ತು ತುರ್ತು ಸೇವೆಗಳನ್ನು ಒದಗಿಸಲಾಗುತ್ತಿದೆ. ದೇವಾಲಯದ ಸುತ್ತಲಿನ ರಸ್ತೆಗಳಲ್ಲಿ ದಟ್ಟಣೆ ತಡೆಗಟ್ಟಲು ವಿಶೇಷ ಸಂಚಾರ ವ್ಯವಸ್ಥೆಯನ್ನು ರೂಪಿಸಲಾಗಿದೆ. ದೂರದ ಊರುಗಳಿಂದ ಬರುವ ಭಕ್ತರ ಅನುಕೂಲಕ್ಕಾಗಿ ಹಾಸನ ರೈಲ್ವೆ ಜಂಕ್ಷನ್ ಮತ್ತು ಬಸ್ ನಿಲ್ದಾಣದಿಂದ ದೇವಾಲಯಕ್ಕೆ ಸಂಪರ್ಕಿಸಲು ವಿಶೇಷ ಸಾರಿಗೆ ವ್ಯವಸ್ಥೆ ಒದಗಿಸಲಾಗುತ್ತಿದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ವಿಭಾಗಗಳ ಸಮನ್ವಯದಿಂದ ಕಾರ್ಯ ನಿರ್ವಹಿಸಲಾಗುತ್ತಿದೆ.
– ಗೋಲ್ಡ್ ಪಾಸ್ ಜಾರಿ, ವಿಐಪಿ ಪಾಸ್ ರದ್ದು
ಕಳೆದ ಬಾರಿ 20 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದು, ಈ ಬಾರಿ ಇನ್ನಷ್ಟು ಜನ ಸೇರುವ ನಿರೀಕ್ಷೆ ಇದೆ. ನೂಕುನುಗ್ಗಲು ತಪ್ಪಿಸಲು ಈ ಬಾರಿ ವಿಐಪಿ ಪಾಸ್ಗಳನ್ನು ಸಂಪೂರ್ಣವಾಗಿ ರದ್ದುಪಡಿಸಿ, ಮೊದಲ ಬಾರಿಗೆ ಗೋಲ್ಡ್ ಪಾಸ್ ಜಾರಿ ಮಾಡಲಾಗಿದೆ. ವಿಶೇಷ ದರ್ಶನಕ್ಕಾಗಿ 300 ರೂ. ಮತ್ತು 1000ರೂ.ಗಳ ಪಾಸ್ ವ್ಯವಸ್ಥೆ ಮಾಡಲಾಗಿದ್ದು ಇದರಲ್ಲಿ ಒಬ್ಬರಿಗೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. ದಿನಕ್ಕೆ ಎರಡು ಗಂಟೆ ಮಾತ್ರ ವಿಶೇಷ ದರ್ಶನಕ್ಕೆ ಅವಕಾಶವಿದ್ದು, ವೃದ್ಧರು ಮತ್ತು ವಿಕಲಚೇತನರಿಗಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.







