ಡಿಜಿಟಲ್ ಪ್ರಪಂಚ
ಮನುಷ್ಯ ರೋಬೋಟ್ ಆಗ್ತಿದ್ದಾನೆ ಹುಷಾರ್..!
– ಸಾಮಾಜಿಕ ಜಾಲತಾಣವೆಂಬ ಜಾಲದೊಳಗೆ ಸಿಕ್ಕಿಬಿದ್ದ ಜನ!
– ಯುವ ಜನತೆ ಭವಿಷ್ಯಕ್ಕೆ ಒಳಿತೋ ಕೆಡಕೋ..?
ವಿಶೇಷ ಲೇಖನ: ಸುರಕ್ಷಾ ಮಾನಪ್ಪ ತೋರಳಿ
ಸಾಮಾಜಿಕ ಜಾಲತಾಣದ ಒಳಹೊಕ್ಕು ಜೀವನದ ದಾರಿ ಬದಲಾಗಿದೆ. ನಮ್ಮನ್ನ ನಾವು ಅರಿಯುವುದರಲ್ಲಿ ಎಡವುತ್ತಿದ್ದೇವೆ. ಗೂಗಲ್ ಗುಂಗಿನಲ್ಲಿ ನಿಘಂಟುಗಳ ಗುರುತೇ ಮರೆಯಾಗಿದೆ. ಅತೀ ಸರಳ ದಾರಿ ಹುಡುಕಿ ಹೊರಡುವ ಪರಿಯಲ್ಲಿ ಅತ್ಯದ್ಬುತಗಳ ಅರಿವೇ ಅಳಿಸಿ ಹೋಗಿದೆ. ಬಾಂಧವ್ಯ ಮರೆಯಾಗಿದೆ. ಸಂಪ್ರದಾಯ ಕಳೆದು ಹೋಗಿದೆ.
ನಿಜವಾದ ಬದುಕಿನ ದುಃಖ ಸಂತೋಷ ಜಗಳ ಅಸೂಯೆ ಎಲ್ಲವನ್ನ ಹಿಂದಿನ ಪೀಳಿಗೆಗಳಷ್ಟೇ ಕಂಡಿದೆ. ಈಗ ಎಲ್ಲಾ ಭಾವನೆಗಳು ಕೇವಲ ಸ್ಟೇಟಸ್ ಸ್ಟೋರಿ ಗಳ ಮೂಲಕವೇ ಹೊರಬೀಳುತ್ತೆ..!. ಹಾಗಾದ್ರೆ ನಾವು ಎತ್ತ ಸಾಗುತ್ತಿದ್ದೇವೆ..!?.
ಜೊತೆಗೂಡಿ ಆಡಿದ ಮಾತು, ಒಟ್ಟಾಗಿ ಸೇರಿ ಮಾಡಿದ ಕೆಲಸ. ಇವೆಲ್ಲವೂ ಹೊತ್ತು ಸಾಗಿದ್ದೇ ವಿಸ್ಮಯ.! ಕೂಡು ಕುಟುಂಬ ಎಂದರೆ ಮರೆಯಾಗಿದೆ. ಕೇವಲ ಹಬ್ಬ ಹರಿದಿನಕ್ಕಷ್ಟೇ ಜೊತೆಗೂಡುವ ಸಂಬಂಧಗಳು ಕೇವಲ ಒಂದು ದಿನದ ಸಂತಸವಾದರೆ ಹಿಂದೆ ಜೊತೆಯಾಗಿ ಕಾಲ ಕಳೆಯುತ್ತಿದವರ ಬದುಕು ನಿಜಕ್ಕೂ ಎಷ್ಟು ಸುಂದರ ಎಂದೆನಿಸುತ್ತೆ. ಹಿಂದೆ ಕಡಿಮೆ ಖರ್ಚು ಅತೀ ಸಂತಸವಾದ ಬದುಕಾದರೆ, ಇಂದು ಅತೀ ಹೆಚ್ಚು ಖರ್ಚು ಮಾಡುವುದು ಸಂತಸದ ಬದುಕು ಎಂದು ಬಿಂಬಿಸುತ್ತಿದೆ ಇಂದಿನ ಡಿಜಿಟಲ್ ಪ್ರಪಂಚ..!
ನಮ್ಮವರು ತಮ್ಮವರು ಎಂಬುದು ಕೇವಲ ಮಾತುಗಳಲ್ಲಷ್ಟೇ ಕಾಣಬಹುದು. ಇಂದಿನ ಯುಗವನ್ನ ಗಮನಿಸಿದರೆ ಖಂಡಿತ ಇನ್ನೂ ಹೆಚ್ಚಿನ ಅಚ್ಚರಿ ಮುಂದೆ ಕಾಣುತ್ತೇವೆ. ಆದರೆ ಅದು ಕೇವಲ ಅಚ್ಚರಿ ಅಷ್ಟೇ.. ಓಡುವ ಈ ಯುಗದಲ್ಲಿ ಸುಸ್ತಾಗಿ ಕುಳಿತಂತಿದೆ ನಮ್ಮ ಪೀಳಿಗೆ.
ಸಾಮಾಜಿಕ ಜಾಲತಾಣವು ಒಳ್ಳೆ ಸಂದೇಶವನ್ನು ಸಹ ನೀಡಿದೆ ಆದರೆ ನಾವು ಬಳಸಿಕೊಂಡಂತೆ.! ಅತಿಯಾದರೆ ಅಮೃತವು ವಿಷ ಎಂಬಂತೆ ಇಂದಿನ ದಿನಗಳಲ್ಲಿ ಜನರು ಅತಿಯಾಗಿ ಅವಲಂಬಿತರಾಗಿ ತಮ್ಮನ್ನು ತಾವೇ ಹಿಂದುಳಿಸಿಕೊಂಡಂತಾಗಿದೆ. ಕ್ರಿಯಾಶೀಲತೆ ಅಂದರೆ ಮೊಬೈಲ್ ಅನ್ನುವಷ್ಟು ಕೆಟ್ಟ ಹಂತಕ್ಕೆ ನಮ್ಮ ಯುವ ಜನತೆ ತಲುಪಿದ್ದಾರೆ.
ಅಷ್ಟೇ ಅಲ್ಲದೆ ತಮಗೇ ಅರಿವಿಲ್ಲದೆ ಅನೇಕರು ಮಾನಸಿಕ ಒತ್ತಡ, ಖಿನ್ನತೆ , ಏಕಾಂತ ಭಾವನೆಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಯಾರದೋ ದಿನಚರಿ ನೋಡುವ ಭರದಲ್ಲಿ ತಮ್ಮ ಗುರಿಯನ್ನೇ ಮರೆತಿದ್ದಾರೆ. ಯಾರನ್ನೋ ಹೋಲಿಕೆ ಮಾಡಿಕೊಂಡು ಇರುವ ಜೀವನ ಕಳೆದುಕೊಳ್ಳುತ್ತಿದ್ದಾರೆ. ಯಾವುದೇ ಸಂಬಂಧಗಳಿಗೆ ಬೆಲೆ ಇಲ್ಲದಂತಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಬಂದಿದ್ದೆಲ್ಲ ನಿಜ ಅನ್ನುವ ದುಸ್ಥಿತಿ ಎದುರಾಗಿದೆ.
ಗುಡಿಯಲ್ಲಿರಬೇಕಿದ್ದ ಭಕ್ತಿ ಸ್ಟೋರಿ ಸ್ಟೇಟಸ್ ಮೂಲಕ ಹೊರಹೊಮ್ಮುತ್ತಿದೆ. ನಿಶ್ಯಬ್ಧ ನೆಮ್ಮದಿಯಿಂದ ಕೂಡಿದ ದೇವಸ್ಥಾನದ ಮೂಲೆ ಮೂಲೆಯು ಪೋಟೋ ಕ್ಲಿಕ್ಕಿಸುವ ಸದ್ದನ್ನಷ್ಟೇ ಗೋಚರಿಸುತ್ತಿದೆ.
ನಿಜವಾದ ಮಾನವೀಯತೆ ಮರೆಯಾಗಿ ರೀಲ್ಸ್ ಮಾಡಲು ಶೋಕಿ ಮಾಡುವುದು ಹೆಚ್ಚಾಗಿದೆ.
ದಾನ ಧರ್ಮ ಎಂಬುದು ಪ್ರಚಾರ ಪ್ರಸಾರ ಎಂಬಂತಾಗಿದೆ. ಹಿಂದೆ ಹಿರಿಯರಿಂದ ಶಾಸ್ತ್ರ ಸಂಪ್ರದಾಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದ ನಾವು ಈಗ ಪ್ರತಿಯೊಂದಕ್ಕೂ ಗೂಗಲ್ ಮೊರೆ ಹೋಗುವುದನ್ನು ಕಂಡರೆ ನಿಜಕ್ಕೂ ಅಚ್ಚರಿ..
ಹೊಸ ಹೊಸ ತಂತ್ರಜ್ಞಾನದ ಅಳವಡಿಕೆಯಿಂದ ಬಹುಶಃ ಮುಂದಿನ ದಿನಗಳಲ್ಲಿ ಜನರು ಸ್ವಂತಿಕೆ ಎಂಬುದೇ ಮರೆತು ಬದುಕುವ ಪರಿಸ್ಥಿತಿಯೂ ಬರಬಹುದು. ಯೋಚನಾಶೀಲ ಅಥವಾ ಬುದ್ಧಿಶಕ್ತಿಯಲ್ಲೂ ಹಿಂದಿನ ಪೀಳಿಗೆಗಿಂತ ಅಪಾರಮಟ್ಟದ ಹಿಂದುಳಿಯುವಿಕೆಯನ್ನು ಸಹ ಗಮನಿಸಬಹುದು. ಮನುಷ್ಯ ರೋಬೋಟ್ ಆಗ್ತಿದ್ದಾನೆ ಹುಷಾರ್..!








