ಕರಾವಳಿ ಟಾಪ್ ನ್ಯೂಸ್
ಪಡುಬಿದ್ರೆ ಎರ್ಮಾಳಲ್ಲಿ ವಿಮಾನ ನಿಲ್ದಾಣ ಆಗುತ್ತಾ?
– ಕೇಂದ್ರ ವಿಮಾನ ಯಾನ ಸಚಿವರಿಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಪತ್ರ
– ರಾಜ್ಯ ಸರ್ಕಾರ ಸೂಕ್ತ ನೆರವು ನೀಡಿದರೆ ವಿಮಾನ ನಿಲ್ದಾಣ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಉಡುಪಿ: ಪಡುಬಿದ್ರೆ ಎರ್ಮಾಳು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕೇಂದ್ರ ವಿಮಾನಯಾನ ಸಚಿವರಿಗೆ ಪತ್ರ ಬರೆದಿದ್ದಾರೆ.
ರಾಜ್ಯ ಸರ್ಕಾರ ಸೂಕ್ತ ನೆರವು ನೀಡಿದರೆ ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯ, ಪಡುಬಿದ್ರೆ ಬಳಿಯ ಎರ್ಮಾಳಿನ ವಿಮಾನ ನಿಲ್ದಾಣ ಯೋಜನೆಯನ್ನು ಕೈಗೆತ್ತಿಕೊಳ್ಳಬಹುದಾಗಿದೆ ಎಂದು ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಅವರಿಗೆ ನೀಡಿದ್ದ ಮನವಿಗೆ ಸ್ಪಂದಿಸಿ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರ ಕೋರಿಕೆಯ ಮೇರೆಗೆ ಎರ್ಮಾಳಿನಲ್ಲಿ ನೂತನ ವಿಮಾನ ನಿಲ್ದಾಣಕ್ಕೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದೆ. ಈ ಬಗ್ಗೆ ಸಚಿವರು ನನಗೆ ಬರೆದ ಪತ್ರದಲ್ಲಿ ಉಡಾನ್ ಯೋಜನೆಯಾದ ವಿಮಾನ ನಿಲ್ದಾಣ ಅಭಿವೃದ್ಧಿ ಮತ್ತು ಸುಧಾರಣೆಗಾಗಿ ಕೇಂದ್ರದ ಸಹಕಾರ ನೀಡಲು ಸಮ್ಮತಿ ಇದ್ದು ಸೂಕ್ತವಾದ ಸ್ಥಳವನ್ನು ಗುರುತಿಸಿ, ಯೋಜನೆಯ ಕಾರ್ಯ ಸಾಧ್ಯತೆಯ ಅಧ್ಯಯನ ನಡೆಸಿ, ಕೇಂದ್ರ ಸರಕಾರಕ್ಕೆ ಪ್ರಸ್ತಾಪನೆ ಸಲ್ಲಿಸುವಂತೆ ಸಲಹೆ ನೀಡಿದ್ದಾರೆ.
ಭಾರತ ಸರಕಾರದ ಗ್ರೀನ್ ಫೀಲ್ಡ್ ನೀತಿಯಂತೆ ಕೇಂದ್ರ ಸರಕಾರ ನೆರವು ನೀಡಲಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಬರೆದ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
• ಉಡುಪಿ: ವ್ಯಕ್ತಿ ಲಾಡ್ಜ್ ಅಲ್ಲೇ ಸಾವು
ಉಡುಪಿ: ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹೋಗಿ ಬರುವುದಾಗಿ ಮನೆಯವರಿಗೆ ತಿಳಿಸಿದ ವ್ಯಕ್ತಿಯೊಬ್ಬರು, ವಸತಿಗೃಹವೊಂದರಲ್ಲಿ ಉಳಿದುಕೊಂಡ ಸಂದರ್ಭದಲ್ಲಿ ಸಾವನ್ನಪ್ಪಿರುವ ಘಟನೆ, ಉಡುಪಿಯ ಹಳೆ ಬಸ್ ನಿಲ್ದಾಣದ ಬಳಿ ಇರುವ ವಸತಿಗೃಹವೊಂದರ ಕೊಠಡಿಯಲ್ಲಿ ನಡೆದಿದೆ. ಕೊಠಡಿಯಿಂದ ಸುಮಾರು ಗಂಟೆಗಳ ಕಾಲ ಹೊರಬಾರದಿರುವುದನ್ನು ಗಮನಿಸಿದ ವಸತಿಗೃಹದ ಸಿಬ್ಬಂದಿಯೊಬ್ಬರಿಗೆ ಅನುಮಾನ ಬಂದ ಹಿನ್ನೆಲೆಯಲ್ಲಿ, ಅವರು ಪರಿಶೀಲಿಸಲು ತೆರಳಿದಾಗ ವ್ಯಕ್ತಿಯು ಕುರ್ಚಿಯಲ್ಲಿ ಕುಳಿತ ಭಂಗಿಯಲ್ಲಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನು ದಾವಣಗೆರೆ ಮೂಲದ ಮಹಾಂತೇಶ ಎಂ.ಜಿ ಎಂದು ಗುರುತಿಸಲಾಗಿದೆ. ಮಾಹಿತಿ ಲಭಿಸುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಉಡುಪಿ ನಗರ ಪೊಲೀಸ್ ಠಾಣೆಯ ಎಸ್ಐ ನಾರಾಯಣ, ಎಎಸ್ಐ ಹರೀಶ್ ಮತ್ತು ಹೆಡ್ ಕಾನ್ಸ್ಟೇಬಲ್ ಆಶಾಲತಾ ಅವರು ಮಹಾಂತೇಶ್ ಅವರ ಪತ್ನಿ ಮತ್ತು ಅಣ್ಣನ ಸಮ್ಮುಖದಲ್ಲಿ ಮಹಜರು ನಡೆಸಿದರು ಎನ್ನುವ ಸಂಗತಿ ತಿಳಿದುಬಂದಿದೆ. ಸಾವಿಗೆ ಸಂಬಂಧಿಸಿದಂತೆ ಯಾವುದೇ ನಿಖರವಾದ ಮಾಹಿತಿ ಲಭಿಸಿಲ್ಲ. ಅನಾರೋಗ್ಯವೇ ಸಾವಿಗೆ ಕಾರಣವಾಗಿರಬಹುದು ಎನ್ನಲಾಗಿದೆ.
• ಪುತ್ತೂರು: ಕೆಂಪುಕಲ್ಲು ಸಾಗಾಟ: ನಾಲ್ವರು ಅರೆಸ್ಟ್!
ಪುತ್ತೂರು: ನಕಲಿ ದಾಖಲೆ ಸೃಷ್ಟಿಸಿ ಕೆಂಪುಕಲ್ಲುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಗುಣಪಾಲ ಮತ್ತು ಸಿಬ್ಬಂದಿಗಳು ನಾಲ್ವರು ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ. ಗಸ್ತು ತಿರುಗುತ್ತಿದ್ದ ಸಮಯದಲ್ಲಿ ಈಶ್ವರಮಂಗಲ ಕಡೆಯಿಂದ ಈಚರ್ ಲಾರಿಯೊಂದು ವೇಗವಾಗಿ ಮತ್ತು ನಿರ್ಲಕ್ಷ್ಯತನದಿಂದ ಬರುತ್ತಿದ್ದುದನ್ನು ಗಮನಿಸಿದ ಪೊಲೀಸರು, ಲಾರಿಯನ್ನು ಪುಲಿತ್ತಡಿ ಎನ್ನುವಲ್ಲಿ ಅಡ್ಡಗಟ್ಟಿದ್ದು ವಾಹನವನ್ನು ಪರಿಶೀಲಿಸಿದಾಗ ಒಳಗಡೆ ಕೆಂಪುಕಲ್ಲುಗಳನ್ನು ತುಂಬಿಸಲಾಗಿದ್ದು, ವಾಹನಕ್ಕೆ ಮತ್ತು ಕೆಂಪುಕಲ್ಲು ಸಾಗಾಟಕ್ಕೆ ಸಂಬಂಧಿಸಿದಂತೆ ಯಾವುದೇ ಪರವಾನಿಗೆಯನ್ನು ಪಡೆಯದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಲಾರಿ ಚಾಲಕ ಕಿಶನ್ ಸೇರಿದಂತೆ ಇತರ ಆರೋಪಿಗಳಾದ ಅನಿಕೇತನ್ ಅಲಿಯಾಸ್ ಅನಿಲ್, ಜಯಪ್ರಕಾಶ್ ಮತ್ತು ಅಜಿತ್ ಕುಮಾರ್ ಎನ್ನುವವರನ್ನು ಸೆರೆಹಿಡಿದಿದ್ದಾರೆ. ನ್ಯಾಯಾಲಯವು ಜಮೀನಿನ ಆಧಾರದ ಮೇಲೆ ಆರೋಪಿಗಳನ್ನು ಬಿಡುಗಡೆಗೊಳಿಸಿದೆ.








