ಟಾಪ್ 3 ನ್ಯೂಸ್
– ವಿವಾಹೇತರ ಸಂಬಂಧ ಬೆಸೆಯುವಲ್ಲಿ ಬೆಂಗಳೂರು ನಂ.1
– ಮಧ್ಯವಯಸ್ಕ ಮಹಿಳೆಯರಿಂದ ಹೆಚ್ಚು ಬಳಕೆ
– ರಾಜ್ಯದಲ್ಲಿ ತೀವ್ರ ಚಳಿ ನಡುವೆ ಮತ್ತೆ ಮಳೆ
– ಫೆ.1 ರಿಂದ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ
– 4 ತಿಂಗಳಿಂದ ಅನ್ನಭಾಗ್ಯ ಯೋಜನೆಯ 5 ಕೆಜಿ ಅಕ್ಕಿ ಹಣ ಜಮೆಯಾಗಿಲ್ಲ
NAMMUR EXPRESS NEWS
ವಿವಾಹೇತರ ಪ್ರೇಮ, ದೈಹಿಕ ಸಂಬಂಧಗಳು ವೈವಾಹಿಕ ಜೀವನ ಹಾಳು ಮಾಡುತ್ತಿರುವ ಹೊತ್ತಿನಲ್ಲೇ, ವಿವಾಹೇತರ ಸಂಬಂಧ ಬೆಸೆಯುವ ‘ಗ್ಲೀಡನ್’ ಆ್ಯಪ್ನಲ್ಲಿ 30 ಲಕ್ಷಕ್ಕೂ ಹೆಚ್ಚು ಭಾರತೀಯರು ನೊಂದಾಯಿಸಿಕೊಂಡಿದ್ದಾರೆ. ಈ ಪೈಕಿ ಬೆಂಗಳೂರು ಶೇ.20ರಷ್ಟು ಬಳಕೆದಾರರೊಂದಿಗೆ ನಂ.1 ಸ್ಥಾನದಲ್ಲಿದೆ ಎಂದು ವರದಿಯೊಂದು ಹೇಳಿದೆ. ಗ್ಲೀಡನ್ ಬಿಡುಗಡೆ ಮಾಡಿರುವ ವರದಿ ಅನ್ವಯ, 2024ರಲ್ಲಿ ಶೇ.270ರಷ್ಟು ಜನ ಹೊಸದಾಗಿ ಆ್ಯಪ್ನಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ. ಈ ಪೈಕಿ ಶೇ.128 ಹೊಸ ಮಹಿಳೆಯರು. ಒಟ್ಟು ಬಳಕೆದಾರರ ಪೈಕಿ ಶೇ.40ರಷ್ಟು 30 ರಿಂದ 45 ವಯಸ್ಸಿನ ವಿವಾಹಿತ ಸ್ತ್ರೀಯರೇ ಇದ್ದಾರೆ. ಮುಂಬೈನಲ್ಲಿ ಶೇ.19, ಕೋಲ್ಕತಾದಲ್ಲಿ ಶೇ.18, ದೆಹಲಿಯಲ್ಲಿ ಶೇ.15ರಷ್ಟು ಗ್ಲೀಡನ್ ಬಳಕೆದಾರರಿದ್ದಾರೆ. ಈ ಬೆಳವಣಿಗೆಯನ್ನು ಗ್ಲೀಡನ್ನ ಭಾರತದ ವ್ಯವಸ್ಥಾಪಕ ಸಿಬಿಲ್ ಶಿಡ್ಡೆಲ್, ಸಾಮಾಜಿಕ ವ್ಯವಸ್ಥೆಯಲ್ಲಾಗುತ್ತಿರುವ ಬದಲಾವಣೆ ಎಂದು ಬಣ್ಣಿಸಿದ್ದಾರೆ. ಅತ್ತ ಗ್ಲೀಡನ್ ಮುಂದಿನ ದಿನಗಳಲ್ಲಿ 5 ದಶಲಕ್ಷ ಬಳಕೆದಾರರನ್ನು ಹೊಂದುವ ಗುರಿ ಇಟ್ಟುಕೊಂಡಿದೆ
ರಾಜ್ಯದಲ್ಲಿ ತೀವ್ರ ಚಳಿ ನಡುವೆ ಮತ್ತೆ ಮಳೆ
– ಫೆ.1 ರಿಂದ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ
ಬೆಂಗಳೂರು: ಫೆ.1 ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮತ್ತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಫೆ.1 ರಿಂದ 2 ದಿನಗಳ ಕಾಲ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಹಾಸನ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಗದಗ, ಧಾರವಾಡ, ಬಾಗಲಕೋಟೆ , ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಳೆಯಾಗಲಿದೆ. ರಾಜ್ಯದಲ್ಲಿ ತೀವ್ರ ಚಳಿ ಉಂಟಾಗಿದ್ದು, ಇದರ ನಡುವೆ ಹವಾಮಾನ ಇಲಾಖೆ ಭಾರಿ ಮಳೆ ಮುನ್ಸೂಚನೆ ನೀಡಿದೆ.
– 4 ತಿಂಗಳಿಂದ ಅನ್ನಭಾಗ್ಯ ಯೋಜನೆಯ 5 ಕೆಜಿ ಅಕ್ಕಿ ಹಣ ಜಮೆಯಾಗಿಲ್ಲ
ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಅನ್ನಭಾಗ್ಯ’ದಡಿ ಅಕ್ಕಿ ಬದಲಾಗಿ ನೀಡುತ್ತಿರುವ ಹಣ ಕಳೆದ 4 ತಿಂಗಳಿಂದ ಫಲಾನುಭವಿಗಳ ಖಾತೆಗೆ ಜಮೆಯಾಗಿಲ್ಲ. ಈಗಾಗಲೇ ಸಾಕಷ್ಟು ಬಾರಿ ಈ ಸಮಸ್ಯೆ ಎದುರಾದರೂ, ಪರಿಹರಿಸುವ ನಿಟ್ಟಿನಲ್ಲಿ ಯಾವೊಬ್ಬರೂ ಕ್ರಮ ವಹಿಸಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕಿನಲ್ಲಿ ಒಟ್ಟು 2.30 ಲಕ್ಷ ಬಿಪಿಎಲ್ ಪಡಿತರ ಚೀಟಿದಾರರು ಇದ್ದಾರೆ. ಇದರಲ್ಲಿ ಬ್ಯಾಂಕ್ ಖಾತೆ, ಕೆವೈಸಿ ಸೇರಿದಂತೆ ಇನ್ನಿತರೆ ಕಾರಣಗಳಿಂದ ಕೆಲ ಕುಟುಂಬಗಳಿಗೆ ಅನ್ನಭಾಗ್ಯದ ಹಣ ಪಡೆಯಲು ಸಾಧ್ಯವಾಗಿಲ್ಲ. ಇನ್ನುಳಿದಂತೆ ಆದ್ಯತಾ ಪಡಿತರ ಚೀಟಿ ಹೊಂದಿರುವವರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಅನ್ವಯ 5 ಕೆ.ಜಿ. ಅಕ್ಕಿಯೊಂದಿಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿ ನೀಡಲು ಕ್ರಮವಹಿಸಿತ್ತು. ಆದರೆ ಅಕ್ಕಿ ಕೊರತೆ ಕಾರಣದಿಂದ 5 ಕೆ.ಜಿ ಅಕ್ಕಿ ಬದಲು ಪ್ರತಿ ಕೆ.ಜಿಗೆ 34ರೂ.ರಂತೆ ಪಡಿತರ ಚೀಟಿಯಲ್ಲಿರುವ ಕುಟುಂಬದ ಮುಖ್ಯಸ್ಥರ ಖಾತೆಗೆ ಹಣ ಜಮೆ ಮಾಡಲು ಮುಂದಾಗಿತ್ತು. ಆದರೆ ಈ ಡಿಬಿಟಿ ಮೂಲಕ ಖಾತೆ ಜಮೆ ಮಾಡುವ ಕಾರ್ಯ ಸಮರ್ಪಕವಾಗಿ ಪ್ರತಿ ತಿಂಗಳು ಆಗದೆ ಫಲಾನುಭವಿಗಳು ಪ್ರತಿ ತಿಂಗಳು ಕಾಯುವ ಪರಿಸ್ಥಿತಿ ಆಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸರ್ಕಾರ ಕ್ರಮ ವಹಿಸಬೇಕು.