ಕರಾವಳಿ ಟಾಪ್ ನ್ಯೂಸ್
• ಬೆಳ್ತಂಗಡಿ: ಅಕ್ರಮ ಡೀಸೆಲ್ ದಾಸ್ತಾನು: ದಾಳಿ
• ಕಡಬ: ಬಾವಿ ತೋಡಲು ಸ್ಫೋಟಕ ಬಳಕೆ; ಮನೆಗಳಿಗೆ ಹಾನಿ
• ಬಂಟ್ವಾಳ: ಬಸ್ ನಲ್ಲಿ ಚಿನ್ನಾಭರಣ ಕಳುವು; ಆರೋಪಿ ಸೆರೆ
• ಉಡುಪಿ: ಕುಡಿದ ಅಮಲಲ್ಲಿ ವೃದ್ಧೆಯ ಕೊಲೆ..!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಳ್ತಂಗಡಿ: ಬೆಳ್ತಂಗಡಿ ಆಹಾರ ಇಲಾಖೆಯ ಆಹಾರ ನಿರೀಕ್ಷಕರಾದ ವಿಶ್ವ, ಆಹಾರ ಶಿರಸ್ತೇದಾರರಾದ ಸಂತೋಷ್ ಮತ್ತವರ ತಂಡವು ಕಾರ್ಯಾಚರಣೆ ನಡೆಸಿದ ಘಟನೆ, ಕಣಿಯೂರು ಗ್ರಾಮದಲ್ಲಿ ನಡೆದಿದೆ. ಮುದೆಲ್ತಿಯಾರ್ ಎನ್ನುವಲ್ಲಿನ ಜಗದೀಶ್ ಎನ್ನುವವರ ಮನೆಯ ಶೆಡ್ ನಲ್ಲಿ ಡೀಸೆಲ್ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ. 20 ಬ್ಯಾರಲ್ ನಲ್ಲಿ 200 ಲೀಟರ್ ನಂತೆ 4.000 ಲೀಟರ್ ಡೀಸೆಲ್, 5 ಬ್ಯಾರಲ್ ಕ್ಯಾನ್ ನಲ್ಲಿ 35 ಲೀಟರ್ ನಂತೆ ಸಂಗ್ರಹಿಸಿಟ್ಟಿದ್ದ 175 ಲೀಟರ್ ಡೀಸೆಲ್ ಹಾಗೂ 5 ಖಾಲಿ ಕ್ಯಾನ್ ಗಳಿದ್ದವು ಎನ್ನಲಾಗಿದೆ.
ಒಟ್ಟು 3.50.000 ರೂಪಾಯಿಯಷ್ಟು ಬೆಲೆ ಬಾಳುತ್ತದೆ ಎಂದು ಅಂದಾಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ಜಗದೀಶ್ ಮತ್ತು ಹರೀಶ್ ಎನ್ನುವವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವುದೇ ಬಗೆಯ ಅನುಮತಿ ಇಲ್ಲದೆ, ಅಕ್ರಮವಾಗಿ ಡೀಸೆಲ್ ಅನ್ನು ದಾಸ್ತಾನು ಮಾಡಿರುವ ಕುರಿತು ಬಾತ್ಮೀದಾರರಿಂದ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.
• ಕಡಬ: ಬಾವಿ ತೋಡಲು ಸ್ಫೋಟಕ ಬಳಕೆ; ಮನೆಗಳಿಗೆ ಹಾನಿ
ಕಡಬ: ಬಾವಿಯನ್ನು ತೋಡುವ ಸಮಯದಲ್ಲಿ ಬಳಕೆ ಮಾಡಿರುವ ಸ್ಫೋಟಕದಿಂದಾಗಿ ಸುತ್ತಮುತ್ತಲಿದ್ದ ಮನೆಗಳಿಗೆ ಹಾನಿಯಾಗಿರುವ ಘಟನೆ, ರಾಮಕುಂಜ ಗ್ರಾಮದ ಕಂಪ ಎನ್ನುವಲ್ಲಿ ನಡೆದಿದೆ. ಮೈಸೂರು ಮೂಲದ ಸೋಮಶೇಖರ್ ಎನ್ನುವವರು ತಮ್ಮ ಸಂಬಂಧಿಕರಿಂದ 33 ಸೆಂಟ್ಸ್ ಜಾಗವನ್ನು ಖರೀದಿಸಿದ್ದು, ಅಲ್ಲಿ ಅಡಿಕೆ ಮರಗಳಿವೆ ಎನ್ನಲಾಗಿದೆ. ಅದೇ ಜಾಗದಲ್ಲಿ ನೀರಿಗಾಗಿ ಬಾವಿಯನ್ನು ತೋಡಲು ಆರಂಭಿಸಿದ್ದು, 15 ಅಡಿ ಆಳಕ್ಕೆ ಹೋಗುತ್ತಿದ್ದಂತೆಯೇ ಕಲ್ಲು ಸಿಕ್ಕಿರುವ ಹಿನ್ನೆಲೆಯಲ್ಲಿ ಸ್ಫೋಟಕ ಬಳಸಲು ನಿರ್ಧರಿಸಿದ್ದಾರೆ.
ಪರಿಣಾಮವಾಗಿ ಅಕ್ಕಪಕ್ಕದ ಎರಡು ಮನೆಗಳ ಗೋಡೆಗಳಲ್ಲಿ ಬಿರುಕು ಕಂಡುಬಂದಿದ್ದು, ಮನೆಯ ಮಾಲೀಕರು ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ. ವಾಮನ ಮೂಲ್ಯ, ಕೆ.ಟಿ. ಮೋಹನ್ ಎನ್ನುವವರು ನೀಡಿರುವ ದೂರಿನ ಆಧಾರದ ಮೇಲೆ ಕಡಬ ಠಾಣೆಯ ಇನ್ಸ್ಪೆಕ್ಟರ್ ಜಂಬೂರಾಜ್ ಮಹಾಜನ್ ಅವರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಂಗಳವಾರದಂದು ಬಾವಿಯೊಳಗೆ ಸ್ಫೋಟವಾಗದೆ ಉಳಿದುಕೊಂಡಿದ್ದ ಮದ್ದು ಗುಂಡನ್ನು ತೆರವುಗೊಳಿಸಲು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳು ಆಗಮಿಸಿ, ಕಾರ್ಯಾಚರಣೆಯನ್ನು ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮತ್ತು ಎಫ್ಎಸ್ಎಲ್ ತಂಡ ಜೊತೆಗೂಡಿತು ಎನ್ನುವ ಸಂಗತಿ ತಿಳಿದುಬಂದಿದೆ.
• ಬಂಟ್ವಾಳ: ಬಸ್ ನಲ್ಲಿ ಚಿನ್ನಾಭರಣ ಕಳುವು; ಆರೋಪಿ ಸೆರೆ
ಬಂಟ್ವಾಳ: ಕಳೆದ ಕೆಲವು ತಿಂಗಳುಗಳ ಹಿಂದೆ ಬಸ್ ನಲ್ಲಿ ನಡೆದ ಕಳುವು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪತ್ತೆ ಹಚ್ಚಿ, ಆತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನವೆಂಬರ್ ತಿಂಗಳಿನಲ್ಲಿ ಕಲ್ಲಡ್ಕದ ಕುದ್ರೆಬೆಟ್ಟು ಸಮುದ್ರದ ಸಮೀಪದ ಹೊಟೇಲ್ ಬಳಿ ನಿಲ್ಲಿಸಿದ್ದ ದುರ್ಗಾಂಬ ಬಸ್ ನಲ್ಲಿ ಬ್ರಹ್ಮಾವರ ಮೂಲದ ದಂಪತಿಗಳು ಬ್ಯಾಗ್ ನಲ್ಲಿ ಇರಿಸಿದ್ದ 180 ಗ್ರಾಂ ತೂಕದ ಸುಮಾರು 20.00.000 ರೂಪಾಯಿಗಳಷ್ಟು ಬೆಲೆಬಾಳುವ ಚಿನ್ನಾಭರಣ ಕಳ್ಳತನವಾಗಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ.ಅರುಣ್ ಕೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್ ಕುಮಾರ್ ಭೂಮಾರೆಡ್ಡಿ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳದ ಎಎಸ್ ಪಿ, ಯಶ್ ಕುಮಾರ್ ಶರ್ಮಾ ಅವರ ನಿರ್ದೇಶನದಂತೆ, ಪ್ರಕರಣದ ತನಿಖಾಧಿಕಾರಿಗಳಾದ ಬಂಟ್ವಾಳ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅನಂತ ಪದ್ಮನಾಭ ಅವರ ನೇತೃತ್ವದಲ್ಲಿ ಬಂಟ್ವಾಳ ನಗರ ಠಾಣೆಯ ಉಪನಿರೀಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿ ಅವರು ಸಿಬ್ಬಂದಿಗಳಾದ ವಿಜಯ್ ಕುಮಾರ್, ಸುರೇಶ್ ಕುಮಾರ್, ರಾಜೇಶ್, ಇರ್ಷಾದ್, ಬಸವರಾಜ್, ವಿಜಯ್ ಕುಮಾರ್, ರೇವತಿ ಹಾಗೂ ಗಣಕಯಂತ್ರ ಸಿಬ್ಬಂದಿಗಳಾದ ಸಂಪತ್ ಕುಮಾರ್ ಮತ್ತು ದಿವಾಕರ್ ಅವರ ಜೊತೆಗೂಡಿ ಆರೋಪಿಯನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿದರು.
ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿಯನ್ನು ಮಧ್ಯಪ್ರದೇಶ ಮೂಲದ ಸಮದ್ ಖಾನ್ ಎಂದು ಗುರುತಿಸಲಾಗಿದೆ. ಈ ಸಂದರ್ಭದಲ್ಲಿ ಆತ ಕಳುವು ಮಾಡಿದ್ದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಯಿತು.
• ಉಡುಪಿ: ವಿನಾಕಾರಣ ನಡೆದ ವೃದ್ಧೆಯ ಕೊಲೆ
ಉಡುಪಿ: ಕುಡಿದ ಅಮಲಿನಲ್ಲಿ ನಡೆದ ಗಲಾಟೆಯಿಂದ, ವೃದ್ಧೆಯೊಬ್ಬರ ಕೊಲೆಯಾದ ಘಟನೆ, ಮಣಿಪುರ ಗ್ರಾಮದ ಕೆನರಾಡಿಯಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ವನಜ ಪೂಜಾರ್ತಿ ಎಂದು ಗುರುತಿಸಲಾಗಿದೆ. ವಲೇರಿಯನ್ ಮೆಂಡೋನ್ಸಾ ಅವರು ವನಜ ಪೂಜಾರ್ತಿ ಅವರ ಮನೆಗೆ ಆಗಾಗ ಮದ್ಯಸೇವನೆಗೆ ಆಗಮಿಸುತ್ತಿದ್ದರು ಎನ್ನಲಾಗಿದೆ. ಅದೇ ರೀತಿ ಸೋಮವಾರ ಸಂಜೆ 5:00 ಗಂಟೆಯಿಂದ ಮಂಗಳವಾರ ಬೆಳಿಗ್ಗೆ 7:00ಗಂಟೆಯ ಸಮಯದಲ್ಲಿ ಪ್ರವೀಣ್ ಮೆಂಡೋನ್ಸಾ ಮತ್ತು ವಲೇರಿಯನ್ ಮೆಂಡೋನ್ಸಾ ನಡುವೆ ಕ್ಷುಲ್ಲಕ ಕಲಹ ಏರ್ಪಟ್ಟಿದೆ.
ಕುಡಿದಿದ್ದರಿಂದ ಗಲಾಟೆ ವಿಕೋಪಕ್ಕೆ ಹೋಗಿ, ಇಬ್ಬರೂ ಹರಿತವಾದ ಆಯುಧವೊಂದರಿಂದ ವನಜ ಪೂಜಾರ್ತಿ ಅವರ ಮೇಲೆ ಹಲ್ಲೆ ನಡೆಸಿ, ಕೊಲೆಯೆಸಗಿದ್ದಾರೆ ಎನ್ನಲಾಗಿದೆ. ಮಂಗಳವಾರದಂದು ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆಯನ್ನು ನಡೆಸಿ, ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧನಕ್ಕೆ ಒಳಪಡಿಸಿದ್ದು, ತನಿಖೆ ಮುಂದುವರಿದಿದೆ ಎನ್ನುವ ಸಂಗತಿ ತಿಳಿದುಬಂದಿದೆ.








