ಕರಾವಳಿ ಟಾಪ್ ನ್ಯೂಸ್
• ಕಡಬ: ಮದ್ಯವೆಂದು ಕೀಟನಾಶಕ ಸೇವನೆ; ವ್ಯಕ್ತಿ ಅಸ್ವಸ್ಥ!
• ಸುಳ್ಯ: ಕಡಿಮೆ ರಕ್ತದೊತ್ತಡದಿಂದ ಉಪನ್ಯಾಸಕ ಸಾವು
• ಮೂಡಬಿದರೆ: ಗ್ಯಾರೇಜ್ ಧ್ವಂಸ; 13 ಮಂದಿ ವಿರುದ್ಧ ಕೇಸ್
• ಬಂಟ್ವಾಳ: ಲೈಂಗಿಕ ದೌರ್ಜನ್ಯ: 20 ವರ್ಷಗಳ ಶಿಕ್ಷೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಸುಳ್ಯ: ಇದ್ದಕ್ಕಿದ್ದಂತೆ ಕುಸಿದು ಬಿದ್ದು ಉಪನ್ಯಾಸಕರೊಬ್ಬರು ಕಾಲೇಜಿನಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಂಜು ಪಿ ಅವರು ಸುಳ್ಯದ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮಧ್ಯಾಹ್ನ ತರಗತಿಗಳನ್ನು ನಡೆಸಿದ ಬಳಿಕ, ಅಸೌಖ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ವಿದ್ಯಾರ್ಥಿಯ ಸಹಾಯದಿಂದ ಉಪನ್ಯಾಸಕರ ಕೊಠಡಿಗೆ ತೆರಳಿ ವಿಶ್ರಾಂತಿ ಪಡೆದಿದ್ದಾರೆ. ಸ್ವಲ್ಪ ಸಮಯದ ನಂತರ ಕೊಂಚ ಚೇತರಿಸಿಕೊಂಡ ಅವರು, ಔಷಧಿಯನ್ನು ತೆಗೆದುಕೊಳ್ಳಲು ಮೆಡಿಕಲ್ ಶಾಪ್ ಗೆ ಬಂದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.
ತಕ್ಷಣ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಮಂಜು ಅವರನ್ನು ಪರೀಕ್ಷಿಸಿದ ವೈದ್ಯರು ಅವರು ಆಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎನ್ನುವ ಸಂಗತಿ ತಿಳಿದುಬಂದಿದೆ. ಈ ಹಿಂದೆ ಮಂಜು ಅವರು 10 ವರ್ಷಗಳ ಕಾಲ ಕೆ.ಆರ್.ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದು, 2024ರಿಂದ ಸುಳ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಉಪನ್ಯಾಸಕರಾಗಿ ನೇಮಕಗೊಂಡಿದ್ದರು ಎನ್ನುವ ಮಾಹಿತಿ ಲಭಿಸಿದೆ.
• ಮೂಡಬಿದರೆ: ಗ್ಯಾರೇಜ್ ಧ್ವಂಸ; 13 ಮಂದಿ ವಿರುದ್ಧ ಕೇಸ್!
ಮೂಡಬಿದರೆ: ಕಳೆದ ತಿಂಗಳು ನಡೆದ ಗ್ಯಾರೇಜ್ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ, 13 ಮಂದಿ ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ. ಪ್ರಾಂತ್ಯ ಮಾರ್ಪಾಡಿ ಗ್ರಾಮದಲ್ಲಿ ಯಶೋಧರ ಮತ್ತು ಇತರರ ಮಾಲೀಕತ್ವದಲ್ಲಿರುವ ಗ್ಯಾರೇಜ್ ಅನ್ನು ಪುಷ್ಪರಾಜ್ ಎನ್ನುವವರು ಬಾಡಿಗೆಗೆ ಪಡೆದಿದ್ದು, ಅಂಗಡಿಯ ಕೋಣೆಗೆ ಸಂಬಂಧಿಸಿದಂತೆ ಮೂಡಬಿದರೆಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ದಾಖಲಾಗಿತ್ತು ಎನ್ನಲಾಗಿದೆ. ಜೊತೆಗೆ ದಾವೆ ಇತ್ಯರ್ಥವಾಗುವವರೆಗೆ ಬಾಡಿಗೆದಾರರನ್ನು ಹೊರಹಾಕದಂತೆ ನ್ಯಾಯಾಲಯವು ಆದೇಶವನ್ನು ಕೂಡ ಹೊರಡಿಸಿತ್ತು.
ಆದರೆ, ಫೆಬ್ರವರಿ 15ರಂದು ಕೆಲವು ಮಂದಿ ಗ್ಯಾರೇಜ್ ಅನ್ನು ಪ್ರವೇಶಿಸಿ, ಅಲ್ಲಿದ್ದ ಸಲಕರಣೆಗಳನ್ನು ಮತ್ತು ಸಂಬಳ ನೀಡಲೆಂದು ಇಟ್ಟಿದ್ದ 22.೦೦೦ ರೂಪಾಯಿಗಳನ್ನು ತೆಗೆದುಕೊಂಡು ಹೋಗಿರುವುದಷ್ಟೇ ಅಲ್ಲದೆ, ಜೆಸಿಬಿ ಮೂಲಕ ಗ್ಯಾರೇಜ್ ಅನ್ನು ಧ್ವಂಸ ಮಾಡಿದ್ದರು. ಜೊತೆಗೆ ಪುಷ್ಪರಾಜ್ ಅವರೊಂದಿಗೆ ಕಾರ್ಯನಿರ್ವಹಿಸುತ್ತಿದ್ದ ನಾಗೇಶ್, ರಮೇಶ್ ಮತ್ತು ವಿಜಯ್ ಕುಮಾರ್ ಅವರಿಗೆ ಅಪರಿಚಿತರು ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಪರಿಣಾಮವಾಗಿ ಸುಮಾರು 50.೦೦೦ ರೂಪಾಯಿಗಳಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ತೇಜಸ್ ಶೆಟ್ಟಿ, ಪೃಥ್ವಿರಾಜ್, ರಾಜೇಶ್ ಆಚಾರ್ಯ ಸೇರಿದಂತೆ 13 ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎನ್ನುವ ಸಂಗತಿ ತಿಳಿದುಬಂದಿದೆ.
• ಬಂಟ್ವಾಳ: ಲೈಂಗಿಕ ದೌರ್ಜನ್ಯ: 20 ವರ್ಷಗಳ ಶಿಕ್ಷೆ
ಬಂಟ್ವಾಳ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಹಿನ್ನೆಲೆಯಲ್ಲಿ, ಅಬೂಬಕ್ಕರ್ ಗೆ ಮಂಗಳೂರಿನ ವಿಶೇಷ ಪೋಕ್ಸೋ ನ್ಯಾಯಾಲಯವು 20 ವರ್ಷಗಳ ಶಿಕ್ಷೆ ವಿಧಿಸಿದ ಘಟನೆ ನಡೆದಿದೆ. ಅಬೂಬಕ್ಕರ್ ವಿರುದ್ಧ ಅಪರಾಧ ಕ್ರಮ 135/25, ಕಲಂ: 64 (1), 351 (2), ಬಿಎನ್ಎಸ್ ಮತ್ತು 4(2) ಆಫ್ ಚಿಲ್ಡ್ರನ್ ಸೆಕ್ಷುವಲ್ ಅಫೇನ್ಸ್ ಆ್ಯಕ್ಟ್ 2012 ಅಡಿಯಲ್ಲಿ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದು ಪ್ರಕರಣದ ತನಿಖೆಯನ್ನು ನಡೆಸಿದ್ದ ಬಂಟ್ವಾಳ ಗ್ರಾಮಾಂತರ ಠಾಣೆಯ ಆಗಿನ ಪೊಲೀಸ್ ನಿರೀಕ್ಷಕರಾಗಿದ್ದ ಶಿವಕುಮಾರ್ ಬಿ ಅವರು ಸಾಕ್ಷಿಗಳನ್ನು ಕಲೆಹಾಕಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.
ತನಿಖಾ ಸಹಾಯಕರಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಪ್ರಶಾಂತ್ ಕುಮಾರ್ ಮತ್ತು ಸಿಬ್ಬಂದಿಯಾದ ಸಂತೋಷ್ ಜಾದವ್ ಅವರು ಕಾರ್ಯನಿರ್ವಹಿಸಿದ್ದರು. ಪ್ರಕರಣದ ಆಧಾರದ ಮೇಲೆ ಮಂಗಳೂರಿನ ಮಾನ್ಯ ಜಿಲ್ಲಾ ಮತ್ತು ಸತ್ರ ವಿಶೇಷ ಪೋಕ್ಸೋ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಅಬೂಬಕ್ಕರ್ ದೋಷಿ ಎನ್ನುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಆತನಿಗೆ 20 ವರ್ಷಗಳ ಶಿಕ್ಷೆ ಮತ್ತು 50.000ರೂಪಾಯಿ ದಂಡ ವಿಧಿಸಿದೆ ಎನ್ನುವ ಸಂಗತಿ ತಿಳಿದುಬಂದಿದೆ.
• ಕಡಬ: ಮದ್ಯವೆಂದು ಕೀಟನಾಶಕ ಸೇವನೆ; ವ್ಯಕ್ತಿ ಅಸ್ವಸ್ಥ
ಕಡಬ: ಮನೆಯಲ್ಲಿ ತಂದಿರಿಸಿದ್ದ ಮದ್ಯದ ಬಾಟಲ್ ಅನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ, ಕಣ್ತಪ್ಪಿನಿಂದಾಗಿ ಕೀಟನಾಶಕದ ಬಾಟಲಿಯನ್ನು ತೆಗೆದುಕೊಂಡು, ಅದನ್ನು ಸೇವಿಸಿ ವ್ಯಕ್ತಿಯೊಬ್ಬರು ಅಸ್ವಸ್ಥರಾದ ಘಟನೆ ಕಳೆದೆರಡು ದಿನಗಳ ಹಿಂದೆ ನಡೆದಿದೆ.ಶಿಬಾಜಿ ನಿವಾಸಿಯಾದ ಹರೀಶ್ ಮುಗೇರ ಅವರು ರಾತ್ರಿಯ ಸಮಯದಲ್ಲಿ ತಮ್ಮ ಸಾರಾಫಾರ್ಮ್ ನಲ್ಲಿ ತಂದು ಇರಿಸಿದ್ದ ಮದ್ಯವನ್ನು ಸೇವಿಸಬೇಕು ಅಂದುಕೊಂಡ ಸಂದರ್ಭದಲ್ಲಿ ಈ ಅಚಾತುರ್ಯ ನಡೆದಿದೆ ಎನ್ನಲಾಗಿದೆ.
ಪರಿಣಾಮವಾಗಿ ಅವರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿದ್ದು, ತಕ್ಷಣ ಹರೀಶ್ ಅವರ ಪತ್ನಿ ಮತ್ತು ಹರೀಶ್ ಅವರ ಜೊತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದವರು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಯನ್ನು ಕೊಡಿಸಿದರು ಎನ್ನುವ ಮಾಹಿತಿ ಲಭಿಸಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಣೆಯನ್ನು ಪಡೆಯುವ ಸಲುವಾಗಿ ಹರೀಶ್ ಅವರಿಗೆ ತಜ್ಞರಿಂದ ಆಪ್ತ ಸಮಾಲೋಚನೆ ನಡೆಸಲು ಜಿಲ್ಲಾ ವೈದ್ಯಾಧಿಕಾರಿಗಳನ್ನು ಕೋರಲಾಗಿದೆ.







