ಕೊಪ್ಪ, ನರಸಿಂಹ ರಾಜಪುರ ಸುದ್ದಿ
ಕೊಪ್ಪದ ಹುಡುಗಿ ರಾಷ್ಟ್ರ ಮಟ್ಟದಲ್ಲಿ ಸಾಧನೆ!
– ರಾಷ್ಟ್ರ ಮಟ್ಟದ ಮುಕ್ತ ಯೂತ್ ಗೇಮ್ಸ್ ಗುಂಡೆಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ
– ರೈತರ ಸಮಸ್ಯೆ ಬಗೆಹರಿಸಲು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದಿಂದ ಮನವಿ
– ಕೊಪ್ಪದಲ್ಲಿ ಹೆಚ್ಚಾಯ್ತಾ ಇಸ್ಪೀಟ್?!: ಕಾಡಲ್ಲಿ ಆಟ ಆಡುತ್ತಿದ್ದ 9 ಮಂದಿ ಬಂಧನ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕೊಪ್ಪ: ಕೊಪ್ಪ ತಾಲ್ಲೂಕಿನ ಅತ್ತಿಕೊಡಿಗೆ ಪಂಚಾಯತಿ ವ್ಯಾಪ್ತಿಯ ಕವನಹಳ್ಳದ ಕ್ಲೆಮೆಂಟ್ ಡಿಸೋಜಾ ಹಾಗೂ ಆಶಾ ಅವರ ಪುತ್ರಿಯಾದ ಅನೀಶಾ ಅವರು ಯೂತ್ ಗೇಮ್ಸ್ ಕೌನ್ಸಿಲ್ ಆಫ್ ಇಂಡಿಯಾ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಆಯೋಜಿ ಸಿದ್ದ ರಾಷ್ಟ್ರ ಮಟ್ಟದ ಮುಕ್ತ ಯೂತ್ ಗೇಮ್ಸ್ನಲ್ಲಿ ಭಾಗವಹಿಸಿ, ಗುಂಡೆಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಕರ್ನಾಟಕ ರಾಜ್ಯ ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಾಂಪಿಯನ್ ಆಗಿರುವ ಅನೀಶಾ ಮಾ.26 ರಿಂದ 30ರವರೆಗೆ ನೇಪಾಳ ದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಯೂತ್ ಗೇಮ್ಸ್ಗೆ ಆಯ್ಕೆಯಾಗಿದ್ದಾರೆ.
ರೈತರ ಸಮಸ್ಯೆ ಬಗೆಹರಿಸಲು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದಿಂದ ಮನವಿ
ನರಸಿಂಹರಾಜಪುರ: ನರಸಿಂಹರಾಜಪುರ ಹಾಗೂ ಚಿಕ್ಕ ಅಗ್ರಹಾರದ ಅರಣ್ಯ ಇಲಾಖೆ ಕಛೇರಿಗಳಿಗೆ ಭೇಟಿ ನೀಡಿ ಆಯಾ ವಲಯಗಳ ವ್ಯಾಪ್ತಿಯಲ್ಲಿ ಆಗಿರುವ 4(1) ನೋಟಿಫಿಕೇಶನ್ಗಳು, ಡೀಮ್ಡ್ ಫಾರೆಸ್ಟ್ ಹಾಗೂ ಡಿಸಿ ರಿಸರ್ವ್ ಕಡತದ ಪ್ರತಿಗಳನ್ನು ದೃಢೀಕರಿಸಿ ಕೊಡುವಂತೆ ಶೃಂಗೇರಿ ಕ್ಷೇತ್ರ ಒಕ್ಕೂಟದ ವತಿಯಿಂದ ಅರಣ್ಯ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಕಾರ್ಯಾಧ್ಯಕ್ಷರಾದ ನಾಗೇಶ್ ಎಂ ಎನ್, ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರ ಹಂಚಿನಮನೆ, ಕ್ಷೇತ್ರ ಸಂಚಾಲಕ ಪ್ರದೀಪ್ ನೀಲುವಾನಿ, ನರಸಿಂಹರಾಜಪುರ ತಾಲೂಕು ಸಂಚಾಲಕ ಅಶೋಕ್, ಕ್ಷೇತ್ರ ಕಚೇರಿ ಕಾರ್ಯದರ್ಶಿ ಸಚಿನ್ ಮೂಡುಬಾಗಿಲು ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಸೃಜನ್ ಕೆ ರವರು ಜೊತೆಗಿದ್ದರು. ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅರಣ್ಯ ಇಲಾಖೆಗಳ ವಲಯಗಳಿಗೆ ಈ ಬಗ್ಗೆ ಮನವಿಯನ್ನು ನೀಡಲು ನಿರ್ಧರಿಸಲಾಗಿದೆ.
ಕೊಪ್ಪದಲ್ಲಿ ಹೆಚ್ಚಾಯ್ತಾ ಇಸ್ಪೀಟ್?!: ಕಾಡಲ್ಲಿ ಆಟ ಆಡುತ್ತಿದ್ದ 9 ಮಂದಿ ಬಂಧನ
ಕೊಪ್ಪ: ಕೊಪ್ಪದಲ್ಲಿ ಇಸ್ಪೀಟ್ ದಂಧೆ ಹೆಚ್ಚಿದೆ. ಇತ್ತೀಚಿಗೆ ಅನೇಕ ಕಡೆ ಇಸ್ಪೀಟ್ ದಂಧೆ ಬಗ್ಗೆ ಪೊಲೀಸರು ದಾಳಿಗೆ ಮುಂದಾಗಿದ್ದಾರೆ. ಇಸ್ಪೀಟ್ ಜೂಜಾಟವಾಡುತ್ತಿರುವ ಖಚಿತವಾದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿಎಸ್ಐ ಶ್ರೀಧರ ನಾಯ್ಕ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ, 9 ಜನ ಆರೋಪಿಗಳನ್ನು ಬಂಧಿಸಿದ ಘಟನೆ ಹರಿಹರಪುರದ ಭಂಡಿಗಡಿ ಗ್ರಾಮದಲ್ಲಿ ನಡೆದಿದೆ.
ಅಕೇಶಿಯ ಪ್ಲಾಂಟೇಶನ್ ಬಳಿಯಲ್ಲಿರುವ ಸರ್ಕಾರಿ ಕಾಡಿನಲ್ಲಿ ಅಕ್ರಮವಾಗಿ ಜೂಜಾಟ ನಡೆಸುತ್ತಿದ್ದ ಅರುಣ್ ಎಚ್ ಎ, ಶಿವರಾಂ ಬಿ.ಟಿ, ಸೂಚನ್ ಎ.ಎಸ್, ಸಚಿನ್ ಎ.ಎಸ್, ರಮೇಶ್ ಹೆಗ್ಡೆ, ರಾಘವೇಂದ್ರ, ರಾಘವೇಂದ್ರ ಎ.ಎನ್, ಅರುಣ ಮತ್ತು ಪ್ರಸನ್ನ ಎ ವೈ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂದರ್ಭದಲ್ಲಿ 52 ಇಸ್ಪೀಟ್ ಎಲೆಗಳನ್ನು, 3930 ರೂಪಾಯಿ ನಗದು ಹಣ, ಪ್ಲಾಸ್ಟಿಕ್ ಚೀಲ, ಮೇಣದಬತ್ತಿ ಸೇರಿದಂತೆ ಜೂಜಾಟಕ್ಕೆ ಬಳಸಿದ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಹರಿಹರಪುರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








