ಸ್ಮಾರ್ಟ್ ಫೋನ್, ಇಂಟರ್ ನೆಟ್ ಬಳಕೆದಾರರಿಗೆ ಶಾಕ್!
– ಡೇಟಾ ದರ ಹೆಚ್ಚಳಕ್ಕೆ ಕೇಂದ್ರ ನಿರ್ಧಾರ
– ಇಂಟರ್ನೆಟ್ ಚಟ ಕಡಿಮೆ ಮಾಡಲು ಮಾಸ್ಟರ್ ಪ್ಲಾನ್?
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನವದೆಹಲಿ: ಇಂಟರ್ ನೆಟ್ ಡೇಟಾ ಬಳಕೆಯ ಮೇಲೆ ಹೊಸದಾಗಿ ಡೇಟಾ ತೆರಿಗೆಯನ್ನು ವಿಧಿಸಲು ಕೇಂದ್ರ ಸರ್ಕಾರವು ನಿರ್ಧಾರವನ್ನು ಕೈಗೊಂಡಿದ್ದು, ಇದರಿಂದ ಸ್ಮಾರ್ಟ್ ಫೋನ್ ಮತ್ತು ಇಂಟರ್ ನೆಟ್ ಬಳಕೆದಾರರು ಆಘಾತಕ್ಕೆ ಒಳಗಾಗಿದ್ದಾರೆ. ಜನವರಿ ತಿಂಗಳಿನಲ್ಲಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಟೆಲಿಕಾಂ ಇಲಾಖೆಯ ಪರಾಮರ್ಶನ ಸಭೆ ನಡೆದಿದ್ದು, ಅಲ್ಲಿ ಇದರ ಕುರಿತು ಚರ್ಚೆಯನ್ನು ನಡೆಸಲಾಗಿತ್ತು ಎನ್ನಲಾಗಿದೆ. ಸರ್ಕಾರದ ಆದಾಯವನ್ನು ಹೆಚ್ಚಿಸಲು ಮತ್ತು ಯುವ ಜನತೆಯಲ್ಲಿ ಅಧಿಕವಾಗುತ್ತಿರುವ ಇಂಟರ್ ನೆಟ್ ಚಟವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎನ್ನುವ ಮಾಹಿತಿ ಲಭಿಸಿದೆ.
ಸಮೀಕ್ಷೆಯ ಪ್ರಕಾರ ಕಳೆದ ಹಣಕಾಸು ವರ್ಷದಲ್ಲಿ ಭಾರತೀಯ ಪ್ರಜೆಗಳು ಒಟ್ಟು 229 ಬಿಲಿಯನ್ ಜಿಬಿ ಡೇಟಾ ಬಳಸಿದ್ದು, ಪ್ರತಿ ಒಂದು ಜಿಬಿಯ ಮೇಲೆ ಕೇವಲ ಒಂದು ರೂಪಾಯಿಯನ್ನು ವಿಧಿಸಿದರೂ ಕೂಡ, ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಒಂದು ವರ್ಷಕ್ಕೆ ಸರಾಸರಿ 22,900 ಕೋಟಿಯಷ್ಟು ಆದಾಯ ಬರಲಿದೆ ಎಂದು ಊಹಿಸಲಾಗಿದೆ. ಇದಕ್ಕೂ ಮೊದಲೇ ಟೆಲಿಕಾಂ ಸೇವೆಗಳ ಮೇಲೆ ಶೇಕಡಾ 18ರಷ್ಟು ಜಿಎಸ್ ಟಿಯನ್ನು ಪಾವತಿಸಲಾಗುತ್ತಿದ್ದು, ಇನ್ನೂ ಹೆಚ್ಚುವರಿಯಾಗಿ ಡೇಟಾ ತೆರಿಗೆಯನ್ನು ವಿಧಿಸಿದರೆ ಸಾಮಾನ್ಯ ಜನರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬರುತ್ತಿದೆ.
ಆದರೆ ಬಳಕೆಯ ಒಂದು ನಿರ್ದಿಷ್ಟ ಮಿತಿಯ ನಂತರ ಈ ತೆರಿಗೆ ಅನ್ವಯವಾಗುತ್ತದೆಯೇ ಅಥವಾ ಎಲ್ಲಾ ವರ್ಗದ ಜನರಿಗೂ ಇದು ಅನ್ವಯವಾಗುತ್ತದೆಯೇ ಎನ್ನುವುದರ ಕುರಿತು ಇನ್ನೂ ಯಾವುದೇ ರೀತಿಯ ಸ್ಪಷ್ಟ ಮಾಹಿತಿ ಲಭಿಸಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ತೆರಿಗೆಯ ಅನುಷ್ಠಾನದಿಂದ ಉಂಟಾಗಬಹುದಾದ ಸಾಧಕ ಬಾಧಕಗಳ ವಿಚಾರವಾಗಿ ಅಧ್ಯಯನ ನಡೆಸಲು ಟೆಲಿಕಾಂ ಇಲಾಖೆಗೆ ಸೂಚನೆಯನ್ನು ನೀಡಲಾಗಿದ್ದು, ಸೆಪ್ಟೆಂಬರ್ 2026ರ ವರೆಗೆ ಕಾಲಾವಕಾಶ ನೀಡಲಾಗಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭಿಸಿದೆ.








