ಮೂಡಿಗೆರೆ: ಕಾಫಿ ಬೆಳೆಯ ಖರೀದಿದಾರರು ಮತ್ತು ಮಾರಾಟಗಾರರ ಸಭೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮೂಡಿಗೆರೆ: ಎಸ್ಎಂ ಸೇಹಗಲ್ ಫೌಂಡೇಶನ್ ವತಿಯಿಂದ ಅಡ್ಯಂತರ ಸಮುದಾಯ ಭವನದಲ್ಲಿ, ಕಾಫಿ ಬೆಳೆಯುವ ಸಣ್ಣ ರೈತರಿಗೆ ತರಬೇತಿ ನೀಡುವ ಉದ್ದೇಶದಿಂದ ಕಾಫಿ ಬೆಳೆಯ ಖರೀದಿದಾರರು ಮತ್ತು ಮಾರಾಟಗಾರರ ನಡುವೆ ಸಭೆಯನ್ನು ಏರ್ಪಡಿಸಲಾಗಿತ್ತು. ಈ ತರಬೇತಿ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲೆ, ಹಾಸನ ಜಿಲ್ಲೆ, ಶೃಂಗೇರಿ, ನರಸಿಂಹರಾಜಪುರ, ಮೂಡಿಗೆರೆ, ಬೇಲೂರು ಸೇರಿದಂತೆ ವಿವಿಧ ಭಾಗಗಳಿಂದ 650ಕ್ಕೂ ಹೆಚ್ಚಿನ ಆಯ್ಕೆಯಾದ ಕಾಫಿ ರೈತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸೇಹಗಲ್ ಫೌಂಡೇಶನ್ ನ ಯೋಜನಾ ಮುಖ್ಯಸ್ಥರಾದ ಶಿವಶರಣಪ್ಪ ಅವರು “ಈ ಭಾಗದಲ್ಲಿನ ಸಣ್ಣ ಕಾಫಿ ರೈತರನ್ನು ಗುರಿಯಾಗಿಸಿಕೊಂಡು ಪುನರುತ್ಪಾದಕ ಕಾಫಿ ಕೃಷಿ ಪದ್ಧತಿಯ ಬಗ್ಗೆ ತರಬೇತಿಯನ್ನು ನೀಡುತ್ತಿದ್ದೇವೆ. ಈ ಪದ್ಧತಿಯ ಅಳವಡಿಕೆಯಿಂದಾಗಿ ಕಾಫಿ ಬೆಳೆಯಲ್ಲಿ ಉತ್ತಮ ಫಲಿತಾಂಶವನ್ನು ರೈತರು ನಿರೀಕ್ಷಿಸುತ್ತಿದ್ದಾರೆ. ಈಗಾಗಲೇ ಕೆಲ ರೈತರು ಪದ್ಧತಿಯ ಅಳವಡಿಕೆಯನ್ನು ಸಂಪೂರ್ಣವಾಗಿ ಮಾಡಿಕೊಂಡಿದ್ದಾರೆ. ಜೊತೆಗೆ ನಮ್ಮ ಸಂಸ್ಥೆಯು ಮಹಿಳಾ ರೈತರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮೂಲಕ ಅವರಿಗೆ ಉತ್ತೇಜನ ನೀಡುತ್ತಾ ಬಂದಿದೆ” ಎಂದು ತಮ್ಮ ಸಂಸ್ಥೆಯು ನಿರ್ವಹಿಸುತ್ತಿರುವ ಸಮಾಜಮುಖಿ ಕಾರ್ಯಗಳ ಬಗ್ಗೆ ತಿಳಿಸಿದರು.
ಭಾರತೀಯ ಕಾಫಿ ಸಂಶೋಧನಾ ಸಂಸ್ಥೆಯಿಂದ ಆಗಮಿಸಿದ್ದ ಡಾ.ಮಧು ಎಸ್ ಗಿರಿ ಅವರು ಎಸ್ಎಂ ಸೇಹಗಲ್ ಫೌಂಡೇಶನ್ ಅನ್ನು ಉದ್ದೇಶಿಸಿ, ಈ ಸಂಸ್ಥೆಯು ಮಲೆನಾಡು ಭಾಗದಲ್ಲಿ ಸಣ್ಣ ಕಾಫಿ ರೈತರಿಗಾಗಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬರುತ್ತಿದೆ. ಇವರ ಈ ಸಮಾಜಮುಖಿ ಕಾರ್ಯಾಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ. ಹಾಗೆಯೇ ಸಣ್ಣ ಕಾಫಿ ರೈತರು ಪುನರುತ್ಪಾದನಾ ಕೃಷಿ ಪದ್ಧತಿಯನ್ನು ಅಳವಡಿಕೆ ಮಾಡಿಕೊಳ್ಳಲು ರೈತರಿಗೆ ಕೀಟ ನಿರ್ವಹಣೆ, ರೋಗ ನಿರ್ವಹಣೆ, ಕಾಫಿ ಗಿಡದ ಕಸಿಯ ಕುರಿತು ತರಬೇತಿಗಳನ್ನು ನೀಡಿದ್ದೇವೆ. ರೈತರಿಗೆ ಈಗಿನ ಪ್ರಮುಖ ಸವಾಲು ಎಂದರೆ ಹವಾಮಾನ ಬದಲಾವಣೆ ಎಂದು ಹೇಳಿದರು. ಮತ್ತೋರ್ವ ವಿಜ್ಞಾನಿಯಾದ ಡಾ.ಚಂದ್ರಶೇಖರ್ ಅವರು ಕಾಫಿ ಬೆಳೆಯಲ್ಲಿ ಮಣ್ಣಿನ ಪರೀಕ್ಷೆ ಅತ್ಯಂತ ಮುಖ್ಯವಾದ ಭಾಗ. ರೈತರು ಈ ಪರೀಕ್ಷೆಯನ್ನು ಪ್ರತಿ ವರ್ಷವೂ ಕೈಗೊಳ್ಳಬೇಕು.
ಇದರಿಂದ ಮಣ್ಣಿನ ಅಪೇಕ್ಷೆ ಏನು ಎನ್ನುವುದನ್ನು ಅರಿತು ನಾವು ಮುಂದಿನ ಕೃಷಿ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದರು. ಸುಧನ್ವ ಭಟ್ ಮತ್ತು ಕೌಸಲ್ಯ ಅಳೆಹಳ್ಳಿ ಅವರು ಎಸ್ಎಂ ಸೇಹಗಲ್ ಫೌಂಡೇಶನ್ ನ ತರಬೇತಿ ಕಾರ್ಯಕ್ರಮಗಳ ಬಗ್ಗೆ ಹಾಗೂ ಪುನರುತ್ಪಾದನಾ ಕೃಷಿ ಚಟುವಟಿಕೆಯ ಅಳವಡಿಕೆಯಿಂದ ಉಂಟಾದ ಬದಲಾವಣೆಗಳ ಕುರಿತು ವಿವರಣೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ಕಾಫಿ ಸಂಬಂಧಿತ ಖರೀದಿದಾರರು, ಇತರ ಪರಿಕರಗಳು, ಸಾವಯವ ಗೊಬ್ಬರ, ಗಿಡ, ಯಂತ್ರೋಪಕರಣಗಳು, ಕಾಫಿ ತಂತ್ರಜ್ಞಾನಗಳು ಮತ್ತು ಕಾಫಿ ರೈತರಿಗೆ ಅನುಕೂಲವಾಗುವಂತಹ ಸ್ಟಾಲ್ ಗಳ ವ್ಯವಸ್ಥೆಯನ್ನು ಮಾಡಿದ್ದು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ರೈತರು ಭಾಗವಹಿಸಿದ್ದು ವಿಶೇಷ ಸಂಗತಿಯಾಗಿತ್ತು. ಈ ಸಂದರ್ಭದಲ್ಲಿ ಎಸ್ಎಂ ಸೇಹಗಲ್ ಫೌಂಡೇಶನ್ ನ ಕಾರ್ಯಕ್ರಮಗಳ ಮುಖ್ಯಸ್ಥರಾದ ಸುಮಂತ್ ಹಾಗೂ ಜಿಲ್ಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.








