ಪೆಟ್ರೋಲ್ ತುಂಬಿಸಲು ಮುಗಿಬಿದ್ದ ಜನ!
– ಪೆಟ್ರೋಲ್ ದರ ಹೆಚ್ಚಾಗುವ ಆತಂಕಕ್ಕೆ ಜನರ ಕ್ಯೂ
– ಕಾರವಾರ ಸೇರಿ ರಾಜ್ಯದ ಹಲವೆಡೆ ಘಟನೆ
– ಎಲ್ಪಿಜಿ ಸಿಲಿಂಡರ್ ದರ ಏರಿಕೆ: ಹೋಟೆಲ್ ತಿಂಡಿ ಭಾರ!?
– ಅಗ್ನಿವೀರ್ ನೇಮಕಾತಿಗೆ ಅರ್ಜಿ ಆಹ್ವಾನ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಂಗಳೂರು/ಕಾರವಾರ: ಮಧ್ಯ ಪ್ರಾಚ್ಯದಲ್ಲಿ ಭುಗಿಲೆದ್ದಿರುವ ಇರಾನ್ ಮತ್ತು ಇರಾಕ್ ನಡುವಿನ ಯುದ್ಧ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರೀ ತಲ್ಲಣ ಸೃಷ್ಟಿಸಿದೆ. ಜಾಗತಿಕ ಮಟ್ಟದಲ್ಲಿ ತೈಲ ರಫ್ತಿಗೆ ಹೊಡೆತ ಬಿದ್ದ ಪರಿಣಾಮ ಭಾರತದಲ್ಲಿಯೂ ಎಲ್ಪಿಜಿ ಗ್ಯಾಸ್ ದರದಲ್ಲಿ ದಿಢೀರ್ ಏರಿಕೆಯಾಗಿದೆ. ಇನ್ನೊಂದೆಡೆ, ಯುದ್ಧದ ಕಾರಣದಿಂದ ಇಂಧನ ಕೊರತೆಯಾಗಲಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಿಂದ ಆತಂಕಗೊಂಡ ಉತ್ತರ ಕನ್ನಡ ಜಿಲ್ಲೆಯ ಜನತೆ ಪೆಟ್ರೋಲ್, ಡೀಸೆಲ್ಗಾಗಿ ಬಂಕ್ಗಳಿಗೆ ಮುಗಿಬೀಳುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ, ದಾಂಡೇಲಿ ಸೇರಿದಂತೆ ವಿವಿಧ ಭಾಗಗಳ ಜನ ಪೆಟ್ರೋಲ್ ಖರೀದಿಗೆ ಮುಂದಾಗಿದ್ದಾರೆ.
ಸಾಮಾನ್ಯವಾಗಿ ಜಿಲ್ಲೆಯಲ್ಲಿ ಪ್ರತಿದಿನ 1 ಲಕ್ಷದ 20 ಸಾವಿರ ಲೀಟರ್ ಪೆಟ್ರೋಲ್ ಖರ್ಚಾಗುತ್ತಿತ್ತು. ಆದರೆ ಜನರ ಈ ದಿಢೀರ್ ಮುಗಿಬೀಳುವಿಕೆಯಿಂದಾಗಿ ಪ್ರತಿದಿನದ ಬಳಕೆ ಬರೋಬ್ಬರಿ 3 ಲಕ್ಷ ಲೀಟರ್ಗೆ ಏರಿಕೆ ಕಂಡಿದೆ. ಜಿಲ್ಲೆಯಲ್ಲಿ ಐಓಸಿ (IOC) ಯ ಒಟ್ಟು 110 ಬಂಕ್ಗಳಿದ್ದು, ಇವುಗಳಲ್ಲಿ ಸರಾಸರಿ 20 ಸಾವಿರ ಲೀಟರ್ ಸಂಗ್ರಹಣಾ ಸಾಮರ್ಥ್ಯದ ಟ್ಯಾಂಕ್ಗಳಿವೆ. ಸಾಕಷ್ಟು ಇಂಧನ ಲಭ್ಯವಿದ್ದರೂ ಜನ ಆತಂಕದಿಂದ ವಾಹನಗಳ ಟ್ಯಾಂಕ್ ಫುಲ್ ಮಾಡಿಸುತ್ತಿದ್ದಾರೆ. ರಾಜ್ಯದಲ್ಲಿ ಅನೇಕ ಕಡೆ ಇಂತಹ ದೃಶ್ಯ ಕಂಡು ಬಂದಿದೆ. ದೆಹಲಿಯಲ್ಲಿ ಸ್ಪಷ್ಟನೆ ನೀಡಿರುವ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, “ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆ ಇದ್ದರೂ ಭಾರತದಲ್ಲಿ ಇಂಧನ ಕೊರತೆ ಉಂಟಾಗುವುದಿಲ್ಲ. ದೇಶದಲ್ಲಿ ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಸೇರಿದಂತೆ ಸಾಕಷ್ಟು ಇಂಧನ ದಾಸ್ತಾನು ಲಭ್ಯವಿದೆ” ಎಂದು ಮಾಹಿತಿ ನೀಡಿದ್ದಾರೆ.
ಎಲ್ಪಿಜಿ ಸಿಲಿಂಡರ್ ದರ ಏರಿಕೆ: ಹೋಟೆಲ್ ತಿಂಡಿ ಭಾರ!?
ಎಲ್ಪಿಜಿ ಸಿಲಿಂಡರ್ ದರ ಏರಿಕೆ ಹಿನ್ನೆಲೆ ಹೋಟೆಲ್ ಅಲ್ಲಿ ತಿಂಡಿ ಊಟ ದರ ಹೆಚ್ಚಾಗುವ ಸಾಧ್ಯತೆ ಇದೆ.
ಅಗ್ನಿವೀರ್ ನೇಮಕಾತಿಗೆ ಅರ್ಜಿ ಆಹ್ವಾನ
ದಾವಣಗೆರೆ : ಅಗ್ನಿಪಥ್ ಯೋಜನೆಯಡಿ 2027ನೇ ಸಾಲಿನ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಶಿವಮೊಗ್ಗ, ದಾವಣಗೆರೆ, ಬಾಗಲಕೋಟೆ, ವಿಜಯ ಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಗದಗ, ಉಡುಪಿ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಏಪ್ರಿಲ್ 1ರೊಳಗೆ http://www.joinindinarmy.nic.in ರ ಮೂಲಕ ನೋಂದಾಯಿಸಿಕೊಳ್ಳುವುದು.








