ಅಡಿಕೆ ದರ ಏರಿಕೆ!
– 50,000 ರೂ. ದಾಟಿ, ಈಗ 53,856ಕ್ಕೆ ಜಂಪ್
– ಬೆಟ್ಟೆ 56,300 ರೂ. ಗೊರಬಲು 41 ಸಾವಿರ?!
– ಚುನಾವಣೆ ಬಳಿಕ ಮತ್ತಷ್ಟು ಏರಿಕೆ ಸಾಧ್ಯತೆ
NAMMUR EXPRESS NEWS
ಅಡಿಕೆ ದರ ಕಳೆದೆರಡು ವಾರದಲ್ಲಿ ಎಲ್ಲಾ ವೆರೈಟಿಗಳು ಧಾರಣೆ ಮೇಲ್ಮುಖವಾಗಿ ಏರುತ್ತಿದ್ದು, ರೈತರ ಮುಖದಲ್ಲಿ ಮಂದಹಾಸ ಕಾಣುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳಿಂದ ಒಂದೇ ರೀತಿ 47,000-48,000 ನಡೆಯುತ್ತಿದ್ದ ರಾಶಿ ಅಡಿಕೆ ಧಾರಣೆ, ಕಳೆದ ವಾರ 50,000 ರೂ. ದಾಟಿ, ಈಗ 53,856ಕ್ಕೆ ತಲುಪಿದೆ. ಇನ್ನೂ ಏರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗುತ್ತಿದೆ. ಅದೇ ರೀತಿ, ಮೂರು ತಿಂಗಳ ಹಿಂದೆ 53,000 ಇದ್ದ ಬೆಟ್ಟ ಅಡಿಕೆ ಧಾರಣೆ ಕಳೆದ ವಾರ 55,000 ರೂ. ದಾಟಿ, ಇವತ್ತು 56,333 ರೂ.ಗೆ ತಲುಪಿದೆ. ಇದೇ ಸಮಯದಲ್ಲಿ ಅಡಿಕೆ ಮಾರುಕಟ್ಟೆಗೆ ಬರುತ್ತಿರುವ ಆವಕವೂ ಏರುತ್ತಿದ್ದು, ಅಡಿಕೆ ಆವಕ ಏರಿದರೂ ಅಡಿಕೆ ಧಾರಣೆ ಏರುತ್ತಿರುವುದು ವಿಶೇಷವಾಗಿದೆ.
ಶಿವಮೊಗ್ಗ ಎಪಿಎಂಸಿ ದಾಖಲೆಗಳ ಪ್ರಕಾರ ಹೆಚ್ಚು ವ್ಯಾಪಾರವಾಗುವ ರಾಶಿ ಇಡಿ ಅಡಿಕೆ ಆವಕ ಭಾರೀ ಏರಿಕೆ ಕಂಡಿದೆ. ರಾಶಿ ಇಡಿ ಧಾರಣೆ 53,800 ರೂ., ಬೆಟ್ಟೆ 56,300 ರೂ. ದಾಟಿದಾಗ ಸಹಜವಾಗಿಯೇ ಗೊರಬಲು 41 ಸಾವಿರದ ಸನಿಹ ತಲುಪಿದೆ. ಈ ಎಲ್ಲ ವೆರೈಟಿಗಳ ಧಾರಣೆಯ ಏರಿಕೆಯ ಹಿನ್ನೆಲೆಯಲ್ಲಿ ಸಿಪ್ಪೆ ಗೋಟು ದರವೂ ಏರುವ ನಿರೀಕ್ಷೆಯಿದ್ದು, ಸದ್ಯದಲ್ಲೇ ಓಪನ್ ನಗದು ಮಾರುಕಟ್ಟೆಯಲ್ಲಿ 20,000 ರೂ. ದಾಟುವ ನಿರೀಕ್ಷೆ ರೈತರದು. ಎಪಿಎಂಸಿ ಮಂಡಿ ಮತ್ತು ಸೊಸೈಟಿಗಳಲ್ಲಿ ಸಿಪ್ಪೆ ಗೋಟು ವ್ಯವಹಾರವೂ ಬಹಳ ಕಮ್ಮಿ. ಎಪಿಎಂಸಿ ಒಳಗೆ ವ್ಯಾಪ್ತಿಗೆ ಬರದೆಯೇ ಸಿಪ್ಪೆ ಗೋಟು ವ್ಯವಹಾರ ನೆಡೆಯುತ್ತದೆ. ಅದನ್ನು ಎಪಿಎಂಸಿ ವ್ಯಾಪ್ತಿಯ ಒಳಗೆ ಸಂಪೂರ್ಣ ತರಲು ಪ್ರಯತ್ನ ನೆಡೆಯುತ್ತಿಲ್ಲ.