ಬಜೆಟ್ ಮಲೆನಾಡಿಗೆ ಹಲವು ಘೋಷಣೆ!
– ಅಡಿಕೆ ರೋಗ ನಿಯಂತ್ರಣಕ್ಕೆ 10 ಕೋಟಿ ಅನುದಾನ
– ರಾಜಧಾನಿಯ ಪ್ರಸಿದ್ಧ ಆಸ್ಪತ್ರೆಗೆ ಶಾಂತವೇರಿ ಗೋಪಾಲಗೌಡರ ಹೆಸರು
– ಡಾ. ಯು.ಆರ್. ಅನಂತಮೂರ್ತಿ ಅಧ್ಯಯನ ಕೇಂದ್ರ ಸ್ಥಾಪನೆಗೆ ಘೋಷಣೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶಿವಮೊಗ್ಗ/ ಚಿಕ್ಕಮಗಳೂರು: ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ದಾಖಲೆಯ 17 ನೇ ಬಾರಿ ಬಜೆಟ್ ಮಂಡಿಸಿದ್ದಾರೆ. ಮಲೆನಾಡಿನ ಅನೇಕ ಭಾಗದದಲ್ಲಿ ಜೀವನ ಆಧಾರ ಬೆಳೆಯಾದ ಅಡಿಕೆ ಬೆಳೆಯಲ್ಲಿ ಕಂಡುಬರುವ ಎಲೆಚುಕ್ಕಿ, ಹಳದಿ ರೋಗ ನಿವಾರಣೆಗಾಗಿ ಸರ್ಕಾರ 10 ಕೋಟಿ ಅನುದಾನವನ್ನು ಬಜೆಟ್ ಅಲ್ಲಿ ಘೋಷಣೆ ಮಾಡಿದೆ. ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು
.ಇದಕ್ಕೂ ಜೊತೆಗೆ ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆಗೆ ಉತ್ತೇಜನ ನೀಡಲು ಸರ್ಕಾರ ಮತ್ತೊಂದು ಪ್ರಮುಖ ನಿರ್ಧಾರ ಕೈಗೊಂಡಿದೆ. ತೋಟಗಾರಿಕೆಯನ್ನು ರೈತರ ಆದಾಯ ಹೆಚ್ಚಿಸುವ ಪ್ರಮುಖ ಕ್ಷೇತ್ರವಾಗಿ ಅಭಿವೃದ್ಧಿಪಡಿಸುವ ಗುರಿ ಸರ್ಕಾರ ಹೊಂದಿದೆ. ಉತ್ತಮ ಗುಣಮಟ್ಟದ, ಅಧಿಕ ಮೌಲ್ಯದ ಮತ್ತು ಮಾರುಕಟ್ಟೆ ಆಧಾರಿತ ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇದು ಮಲೆನಾಡ ಕೃಷಿಗೆ ಅನುಕೂಲ ಆಗಲಿದೆ.
ಡಾ. ಯು.ಆರ್. ಅನಂತಮೂರ್ತಿ ಅಧ್ಯಯನ ಕೇಂದ್ರ ಸ್ಥಾಪನೆಗೆ ಘೋಷಣೆ
ಕರ್ನಾಟಕದ ಸಾಂಸ್ಕೃತಿಕ ಮತ್ತು ಸಾಹಿತ್ಯ ಪರಂಪರೆಯನ್ನು ಸಮೃದ್ಧಗೊಳಿಸುವ ಮಹತ್ವದ ನಿರ್ಧಾರವಾಗಿ 2026–27ರ ರಾಜ್ಯ ಬಜೆಟ್ನಲ್ಲಿ ತೀರ್ಥಹಳ್ಳಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಅಧ್ಯಯನ ಕೇಂದ್ರ ಸ್ಥಾಪನೆಗೆ ಘೋಷಣೆ ಮಾಡಲಾಗಿದೆ. ಇತ್ತೀಚಿಗೆ ತೀರ್ಥಹಳ್ಳಿಯ ನಿಯೋಗ ಸಿಎಂ ಭೇಟಿ ಮಾಡಿ ಮನವಿ ಮಾಡಿತ್ತು. ಇದೀಗ ತೀರ್ಥಹಳ್ಳಿಯಲ್ಲಿ ಅಧ್ಯಯನ ಕೇಂದ್ರ ಬರಲಿದೆ. ತೀರ್ಥಹಳ್ಳಿಯಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆಯಾಗುವುದು ಸಾಹಿತ್ಯ ಪ್ರೇಮಿಗಳಿಗೆ, ಸಂಶೋಧಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಹತ್ತರ ಪ್ರೇರಣೆಯಾಗಲಿದೆ.
ರಾಜಧಾನಿಯ ಪ್ರಸಿದ್ಧ ಆಸ್ಪತ್ರೆಗೆ ಶಾಂತವೇರಿ ಗೋಪಾಲಗೌಡರ ಹೆಸರು
ಮಲೆನಾಡೆಂದರೆ ಸದಾ ಸ್ಮರಣೀಯರಾದ ಧೀಮಂತ ನಾಯಕ ದಿ ಶಾಂತವೇರಿ ಗೋಪಾಲಗೌಡರು, ಭೂ ಸುಧಾರಣೆ-ಉಳುವವನೆ ಹೊಲದೊಡೆಯ ಘೋಷಣೆ ಅಡಿ ಭೂಸುಧಾರಣೆ ಅನುಷ್ಠಾನ ಜಾರಿಗೆ ಹೋರಾಡಿದ,ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಧೀಮಂತ ಸಮಾಜವಾದಿ ಶಾಂತವೇರಿ ಗೋಪಾಲಗೌಡರ ಹೆಸರನ್ನು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯ ಹೆಸರಿಗೆ ಮರು ನಾಮಕರಣ ಮಾಡಿರುವುದು ಮಲೆನಾಡಿಗೆ ಅತೀವ ಹೆಮ್ಮೆಯ ಸಂಗತಿಯಾಗಿದೆ.








