ಘಾಟಿಯಲ್ಲಿ ಮತ್ತೊಂದು ಬಸ್ಸಿಗೆ ಬೆಂಕಿ!
– ಬಸ್ ಸಂಪೂರ್ಣ ಬೆಂಕಿಗೆ ಆಹುತಿ: ಅಪಾಯದಿಂದ ಪಾರು
– ಹೊಸನಗರದಲ್ಲಿ ಎರಡನೇ ಘಟನೆ: ಎಚ್ಚರಿಕೆ ಕರೆ ಗಂಟೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೊಸನಗರ: ಕುಂದಾಪುರದಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಬೆಂಕಿ ಅವಘಡಕ್ಕೆ ಒಳಗಾದ ಘಟನೆ ಶನಿವಾರದಂದು ಹೊಸನಗರ ತಾಲೂಕಿನ ಹುಲಿಕಲ್ ಘಾಟಿಯಲ್ಲಿ ನಡೆದಿದೆ.
ಕುಂದಾಪುರದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಖಾಸಗಿ ಮಾಲಿಕತ್ವದ ಬಸ್ ಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಎಚ್ಚೆತ್ತ ಚಾಲಕರು ನಿರ್ವಾಹಕರು ಮತ್ತು ಪ್ರಯಾಣಿಕರು ಬಸ್ ನಿಂದ ಕೆಳಗೆ ಇಳಿದುದರ ಪರಿಣಾಮವಾಗಿ ಎಲ್ಲರೂ ಕೂದಲೆಳೆಯ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿಗೆ ಬಸ್ ಸಂಪೂರ್ಣವಾಗಿ ಆಹುತಿಯಾಗಿದೆ. ಎಲ್ಲರೂ ಅಪಾಯದಿಂದ ಪಾರು ಆಗಿದ್ದಾರೆ.
ಘಟನೆ ನಡೆದಿದ್ದು ಹೇಗೆ?
ಶನಿವಾರ ಮಧ್ಯಾಹ್ನ ಕುಂದಾಪುರದಿಂದ ಶಿವಮೊಗ್ಗ ಹೋಗುತ್ತಿದ್ದ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ನಂತರ ಸಂಪೂರ್ಣ ಬಸ್ ಗೆ ಬೆಂಕಿ ಆವರಿಸಿದೆ. ಬಸ್ ನಲ್ಲಿ ಚಾಲಕ ಮತ್ತು ನಿರ್ವಾಹಕ ಸೇರಿ 30 ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆ ಆಗಿಲ್ಲ. ಆರಂಭದಲ್ಲಿ ಇಂಜಿನ್ ನಲ್ಲಿ ಮೊದಲು ಹೊಗೆ ಕಾಣಿಸಿಕೊಂಡು ನಂತರ ಬಸ್ ಗೆ ಸಂಪೂರ್ಣ ಬೆಂಕಿ ಹತ್ತಿಕೊಂಡಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.
ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಬೆಂಕಿ ಬಿದ್ದಿತ್ತು!
ಕಳೆದ ಕೆಲವು ತಿಂಗಳುಗಳ ಹಿಂದೆ ಹೊಸನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಕೂಡ ಬೆಂಕಿಗೆ ಆಹುತಿಯಾಗಿ ಹಲವರು ಗಾಯಗೊಂಡ ಘಟನೆ ಇನ್ನೂ ಮಾಸಿಲ್ಲ. ಅದರ ಬೆನ್ನಲ್ಲೇ ಈ ಘಟನೆ ಜನರಲ್ಲಿ ಆತಂಕವನ್ನು ಮೂಡಿಸಿದೆ.
ಪ್ರಯಾಣಿಕರಿಗೆ ಸುರಕ್ಷತೆ ಹೇಗೆ..?
ದೂರದ ಪ್ರಯಾಣಕ್ಕೆ ಖಾಸಗಿ ಬಸ್ ಗಳನ್ನು ಚಾಲನೆಗೆ ಸಿದ್ಧಗೊಳಿಸುವ ಮೊದಲು ತಾಂತ್ರಿಕವಾಗಿ ಸೇರಿದಂತೆ ಕೆಲವು ಪರಿಶೀಲನೆಗಳನ್ನು ನಡೆಸುವ ಮೂಲಕ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದು ಅಗತ್ಯ. ಇಲ್ಲದಿದ್ದಲ್ಲಿ ಚಾಲಕರು, ನಿರ್ವಾಹಕರು ಮತ್ತು ಪ್ರಯಾಣಿಕರು ಪ್ರಾಣಾಪಾಯಕ್ಕೆ ಒಳಗಾಗಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎನ್ನುವುದು ಸಾರ್ವಜನಿಕರಿಂದ ಕೇಳಿಬರುತ್ತಿದೆ. ಬೆಂಕಿ ಸಂಪೂರ್ಣ ಬಸ್ ಗೆ ಹತ್ತಿಕೊಂಡ ಪರಿಣಾಮ ಸಂಪೂರ್ಣ ಸುಟ್ಟು ಕರಕಲು ಆಗಿದೆ.








