ಕಾಡಾನೆ ಸಮಸ್ಯೆ: ಶಾಶ್ವತ ಪರಿಹಾರಕ್ಕೆ ಸರ್ಕಾರದ ಪ್ಲಾನ್!
– ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಆನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಸರ್ಕಾರದ ಕ್ರಮ: ಅರಣ್ಯ ಸಚಿವ ಈಶ್ವರ್ ಖಂಡ್ರೆ
– ಬಾಳೆಹೊನ್ನೂರು ರೈತ ಸಂವಾದ: ಕಾಫಿ ನಾಡಲ್ಲಿ ಆನೆಯದ್ದೇ ಸದ್ದು!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಚಿಕ್ಕಮಗಳೂರು: ಮಲೆನಾಡನ್ನು ಕಾಡುತ್ತಿರುವ ಅರಣ್ಯ ಮತ್ತು ಕಾಡು ಪ್ರಾಣಿಗಳು ಅದರಲ್ಲೂ ಕಾಡು ಆನೆ ಹಾವಳಿ ತಡೆಯಲು ಶಾಶ್ವತ ಪರಿಹಾರ ಮಾಡಲು ಸರ್ಕಾರ ಮುಂದಾಗಿದೆ. ಈ ಬಗ್ಗೆ ಸರ್ಕಾರದ ಯೋಜನೆಗಳ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾಹಿತಿ ನೀಡಿದ್ದಾರೆ. ರೈತರ ಜೀವ, ಜೀವನೋಪಾಯ ಮತ್ತು ಅರಣ್ಯ ಸಂರಕ್ಷಣೆಯ ನಡುವೆ ಸಮತೋಲನ ಸಾಧಿಸುವುದು ನಮ್ಮ ಗುರಿ. ಮಾನವ–ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಹಾಗೂ ವೈಜ್ಞಾನಿಕ ಪರಿಹಾರ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಅರಣ್ಯ ಸಂರಕ್ಷಣೆಯಲ್ಲಿ ಅರಣ್ಯವಾಸಿಗಳು ಮತ್ತು ರೈತರ ಪಾತ್ರ ಅತ್ಯಂತ ಮಹತ್ವದಾಗಿದೆ. ಅರಣ್ಯ ಇಲಾಖೆ ಯಾವುದೇ ಜನರ ವಿರುದ್ಧವಲ್ಲ. ಆದರೆ ಸುಪ್ರೀಂಕೋರ್ಟ್ ತೀರ್ಪುಗಳು ಹಾಗೂ ಕೇಂದ್ರ–ರಾಜ್ಯ ಸರ್ಕಾರಗಳ ಅರಣ್ಯ ಕಾಯಿದೆಗಳ ಪಾಲನೆ ನಮ್ಮ ಕರ್ತವ್ಯವಾಗಿದೆ.ಅರಣ್ಯ ಜಮೀನನ್ನು ಅನ್ಯ ಉದ್ದೇಶಕ್ಕೆ ಬಳಸಲು ಅವಕಾಶವಿಲ್ಲ. ಮೂಲಸೌಕರ್ಯ ಅಭಿವೃದ್ಧಿಗೆ ಅರಣ್ಯ ಭೂಮಿ ಬಳಸಬೇಕಾದರೆ ಅರಣ್ಯ ಸಂರಕ್ಷಣಾ ನಿಯಮಗಳಂತೆ ಪರ್ಯಾಯ ಭೂಮಿ ಪಡೆದು ಅರಣ್ಯ ಬೆಳೆಸುವುದು ಕಡ್ಡಾಯವಾಗಿದೆ ಎಂದರು.
ರಾಜ್ಯದಲ್ಲಿ ಅತೀ ಹೆಚ್ಚು ಕಾಡು ಆನೆಗಳು!
ಮಾನವ–ವನ್ಯಜೀವಿ ಸಂಘರ್ಷ ನಿಯಂತ್ರಣಕ್ಕೆ ಸರ್ಕಾರದ ಸ್ಪಷ್ಟ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇತ್ತೀಚಿನ ಆನೆ ದಾಳಿಯಲ್ಲಿ ಸಂಭವಿಸಿದ ಜೀವಹಾನಿ ಅತ್ಯಂತ ನೋವಿನ ಸಂಗತಿ. ಸರ್ಕಾರ ತಕ್ಷಣವೇ ಆನೆ ಸೆರೆ ಕಾರ್ಯಾಚರಣೆಗೆ ಆದೇಶ ನೀಡಿತ್ತು. ರಾಜ್ಯದಲ್ಲಿ 6,395 ಆನೆಗಳೊಂದಿಗೆ ಕರ್ನಾಟಕ ಗಜಪಡೆ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಹುಲಿ ಸಂಖ್ಯೆಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಆನೆ, ಹುಲಿಗಳ ಸಂಖ್ಯೆಯ ಹೆಚ್ಚಳ ಮತ್ತು ಅರಣ್ಯ ಕ್ಷೀಣತೆಯಿಂದ ಮಾನವ–ವನ್ಯಜೀವಿ ಸಂಘರ್ಷ ಹೆಚ್ಚಾಗಿದೆ.
ಶಾಶ್ವತ ಪರಿಹಾರಕ್ಕಾಗಿ ಕೈಗೊಂಡಿರುವ ಕ್ರಮಗಳು
– ಆನೆ, ಕಾಡೆಮ್ಮೆ, ಕಾಡುಕೋಣಗಳು ನಾಡಿಗೆ ಪ್ರವೇಶಿಸದಂತೆ 140 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಪ್ರಸ್ತಾವನೆ.
– ಸೂಕ್ಷ್ಮ ಪ್ರದೇಶಗಳಲ್ಲಿ ₹12 ಕೋಟಿ ವೆಚ್ಚದಲ್ಲಿ 7 ಕಿ.ಮೀ. ಬ್ಯಾರಿಕೇಡ್ ಕಾಮಗಾರಿ – ಶೀಘ್ರ ಆರಂಭ
– ಕೊಪ್ಪದಲ್ಲಿ ಆನೆ ಹಾವಳಿ ಹೆಚ್ಚಿರುವುದರಿಂದ ಪ್ರತ್ಯೇಕ ಆನೆ ಕಾರ್ಯಪಡೆ ಸ್ಥಾಪನೆಗೆ ಶೀಘ್ರ ಆದೇಶ
– ಥರ್ಮಲ್ ಡ್ರೋನ್ ಕ್ಯಾಮರಾಗಳ ಮೂಲಕ ವನ್ಯಜೀವಿಗಳ ಚಲನ–ವಲನದ ಮಾಹಿತಿ ಸಾರ್ವಜನಿಕರಿಗೆ ತಲುಪಿಸುವ ವ್ಯವಸ್ಥೆ
– ದೇಶೀಯವಾಗಿ ಅಭಿವೃದ್ಧಿಪಡಿಸಿದ ರೇಡಿಯೋ ಕಾಲರ್ಗಳನ್ನು ಹಿಂಡು ಆನೆಗಳಿಗೆ ಅಳವಡಿಸಿ, ಜನವಸತಿ ಪ್ರದೇಶಕ್ಕೆ ಬಂದಾಗ ತಕ್ಷಣ ಮಾಹಿತಿ ನೀಡುವ ವ್ಯವಸ್ಥೆ
– ಮಧ್ಯಪ್ರದೇಶದಲ್ಲಿ ಯಶಸ್ವಿಯಾಗಿ ಅನುಸರಿಸಿದ ಮಾದರಿಯ ಅಧ್ಯಯನಕ್ಕಾಗಿ ತಜ್ಞರ ತಂಡ ಕಳುಹಿಸಲಾಗುತ್ತಿದೆ.
ಬಾಳೆಹೊನ್ನೂರು ರೈತ ಸಂವಾದ: ಕಾಫಿ ನಾಡಲ್ಲಿ ಆನೆಯದ್ದೇ ಸದ್ದು!
ಬಾಳೆಹೊನ್ನೂರಲ್ಲಿ ಇತ್ತೀಚಿಗೆ ಅರಣ್ಯ ಸಚಿವರ ಜತೆ ರೈತ ಸಂವಾದ ನಡೆದಿದ್ದು, ಭಾರಿ ಚರ್ಚೆ, ಕೋಲಾಹಲಕ್ಕೆ ಕಾರಣವಾಯಿತು. ಶಾಸಕ ಟಿ. ಡಿ. ರಾಜೇಗೌಡ ಸೇರಿ ರೈತ ಸಂಘಟನೆಗಳು, ಮಲೆನಾಡು ರೈತ ಒಕ್ಕೂಟ, ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಸೇರಿ ಅನೇಕ ಸಂಘಟನೆಗಳ ಪದಾಧಿಕಾರಿಗಳು, ರಾಜಕಾರಣಿಗಳು, ಅಧಿಕಾರಿಗಳು ಇದ್ದರು.








