ಅನಾಮಧೇಯ ಪತ್ರದಿಂದ ಮದುವೆಯೇ ಮುರಿದು ಬಿತ್ತು!
– ಶೃಂಗೇರಿಯಲ್ಲಿ ಮದುವೆ ಮಂಟಪದಿಂದ ಹೊರಬಂದ ವಧು
– ಮದುವೆ ಮನೆಯಲ್ಲಿ ಗಲಾಟೆ: ಠಾಣೆಯಲ್ಲಿ ದೂರು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶೃಂಗೇರಿ: ಮದುಮಗಳಿಗೆ ಬಂದ ಅನಾಮಧೇಯ ಪತ್ರದಿಂದಾಗಿ ಮದುವೆಯು ಅರ್ಧಕ್ಕೆ ನಿಂತು ಹೋದ ಘಟನೆ ಶೃಂಗೇರಿ ಪಟ್ಟಣದ ಈಡಿಗ ಸಮುದಾಯ ಭವನದಲ್ಲಿ ನಡೆದಿದೆ. ದೀಕ್ಷಿತ್ ಹೆಗ್ಡೆ ಮತ್ತು ಸುಷ್ಮಾ ಅವರ ವಿವಾಹ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ಮದುವೆ ಶಾಸ್ತ್ರಗಳು ನಡೆಯುತ್ತಿದ್ದ ಸಂದರ್ಭದಲ್ಲೇ ಮದುಮಗಳಾದ ಸುಷ್ಮಾ ಅವರಿಗೆ ಐದು ಪುಟಗಳ ಅನಾಮಧೇಯ ಪತ್ರವೊಂದು ಬಂದಿದ್ದು, ಅದರಲ್ಲಿ ವರನ ಸರಣಿ ಸುಳ್ಳುಗಳು ಅನಾವರಣಗೊಂಡಿದೆ.
ಇದರಿಂದ ಆಕ್ರೋಶಗೊಂಡ ಸುಷ್ಮಾ ದೀಕ್ಷಿತ್ ಮನೆಯವರನ್ನು ಪ್ರಶ್ನಿಸಿದಾಗ ಮದುವೆಯಾದ ಮೇಲೆ ಎಲ್ಲವನ್ನು ವಿವರವಾಗಿ ಹೇಳುತ್ತೇವೆ ಎಂದು ಮುಂದೂಡಿದ್ದಾರೆ. ಹೀಗಾಗಿ ಸುಷ್ಮಾ ಅವರು ಮದುವೆಯನ್ನು ಮುರಿದುಕೊಂಡು ಅದರಿಂದ ಹೊರಬಂದಿದ್ದಾರೆ ಎನ್ನಲಾಗಿದೆ. ಇದು ಸುಷ್ಮಾ ಅವರಿಗೆ ಎರಡನೇ ಮದುವೆಯಾಗಿದ್ದು, ಒಬ್ಬ ಮಗನಿದ್ದಾನೆ. ದೀಕ್ಷಿತ್ ಆತನಿಗೆ ತಂದೆಯ ಸ್ಥಾನವನ್ನು ನೀಡುತ್ತಾನೆ, ತನಗೆ ಆಸರೆಯಾಗುತ್ತಾನೆ ಎನ್ನುವ ಭರವಸೆಯಿಂದ ಸುಷ್ಮಾ ಅವರು ಈ ಮದುವೆಗೆ ಒಪ್ಪಿಕೊಂಡಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ.
ಮದುವೆ ಮನೆಯಲ್ಲಿ ಗಲಾಟೆ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದ ಸಿಡಿಪಿಓ ಅಧಿಕಾರಿಗಳು ಮತ್ತು ಪೊಲೀಸರು ಸುಷ್ಮಾ ಅವರು ಮದುವೆ ಬೇಡವೆಂದಾಗ ರಾಜಿಯ ಮೂಲಕ ತಿಳಿಹೇಳಲು ಪ್ರಯತ್ನಿಸಿದರು. ಆದರೆ ಸುಷ್ಮಾ ಅವರು “ನಂಬಿಕೆ ದ್ರೋಹ ಮಾಡಿದವನ ಜೊತೆ ನಾನು ಜೀವನ ನಡೆಸಲು ಸಾಧ್ಯವಿಲ್ಲ” ಎಂದು ನಿಷ್ಠುರವಾಗಿ ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿರುವ ಸುಷ್ಮಾ ಅವರು “ದೀಕ್ಷಿತ್ ತನ್ನ ವಯಸ್ಸಿನ ಕುರಿತು ಸುಳ್ಳು ಹೇಳಿದ್ದಾರೆ, ಎರಡನೆಯದಾಗಿ ದೀಕ್ಷಿತ್ ವಿರುದ್ಧ ಈಗಾಗಲೇ ಕೆಲವು ಪ್ರಕರಣಗಳು ದಾಖಲಾಗಿವೆ. ತಾಯಿಗೆ ಅನಾರೋಗ್ಯವಿದ್ದರೂ ಆ ವಿಚಾರವನ್ನು ಮುಚ್ಚಿಟ್ಟಿದ್ದಾರೆ ಎಂದು ಹೇಳಲಾಗಿದೆ. 2021ರಲ್ಲಿ ನಡೆದ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ದೀಕ್ಷಿತ್ ಭಾಗಿಯಾಗಿದ್ದ. ನಾನು ಎಷ್ಟೇ ವೈಯಕ್ತಿಕ ವಿಚಾರಗಳನ್ನು ಕೇಳಿದರೂ ಮೊದಲು ಮದುವೆಯಾಗಲಿ ಆಮೇಲೆ ಎಲ್ಲವನ್ನು ಹೇಳುತ್ತೇನೆ ಎಂದು ಹಾರಿಕೆಯ ಉತ್ತರ ನೀಡಿ ನನ್ನನ್ನು ಸುಮ್ಮನಾಗಿಸುತ್ತಿದ್ದ” ಎಂದು ಹೇಳಿಕೆ ನೀಡಿದ್ದಾರೆ. ಸುಷ್ಮಾ ಅವರು ನೀಡಿರುವ ದೂರಿನ ಆಧಾರದ ಮೇಲೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








