ಮಹಿಳೆ ದೇಶದ ಆಸ್ತಿ, ಕುಟುಂಬದ ಕಣ್ಣು..!
– ಸಾಧನೆಗೆ ಸ್ಫೂರ್ತಿ ಹೆಣ್ಣು…ಸಮಸ್ತ ಮಹಿಳೆಯರಿಗೆ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು
ಮಹಿಳಾ ದಿನಾಚರಣೆ ಮತ್ತೊಮ್ಮೆ ಬಂದಿದೆ. ಮಹಿಳೆಯರಿಗೆ ದೊರಕಬೇಕಾದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯ ಸ್ಥಾನಮಾನಗಳಿಗಾಗಿ, ಲಿಂಗ ಸಮಾನತೆಯ ಕಾರಣಕ್ಕಾಗಿ ಹುಟ್ಟಿಕೊಂಡ ಈ ದಿನವನ್ನು ಪ್ರತಿವರ್ಷ ಮಾರ್ಚ್ 8 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. 1910ರಲ್ಲಿ ಕ್ಲಾರಾ ಜೆಟ್ ಕಿನ್ ಎನ್ನುವ ಮಹಿಳೆಯು ಈ ರೀತಿಯ ದಿನವನ್ನು ಆಚರಿಸಬೇಕು ಎನ್ನುವ ಸಂಗತಿಯನ್ನು ಮಂಡನೆ ಮಾಡಿದರು. ಅದರ ಮರು ವರ್ಷ ಅಂದರೆ 1911ರಿಂದ ಇದು ಆಚರಣೆಗೆ ಬಂದರೂ, 1975ರ ಮಾರ್ಚ್ 8ರಂದು ವಿಶ್ವಸಂಸ್ಥೆಯು ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಎನ್ನುವುದನ್ನು ಅಧಿಕೃತವಾಗಿ ಅಂಗೀಕರಿಸಿತು.
ಇನ್ನು ದೇಶದ ವ್ಯಾಪ್ತಿಯಲ್ಲಿ ನೋಡುವುದಾದರೆ ಜನವರಿ 24ರಂದು ಹೆಣ್ಣು ಮಕ್ಕಳ ದಿನವನ್ನು, ಫೆಬ್ರವರಿ 13ರಂದು ಸರೋಜಿನಿ ನಾಯ್ಡು ಅವರ ಜನ್ಮದಿನದ ನೆನಪಿಗಾಗಿ ರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಹೆಚ್ಚಾಗಿ ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನೇ ಅದ್ಧೂರಿಯಾಗಿ ಮತ್ತು ಪ್ರತಿವರ್ಷ ಕೆಲವು ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಆಚರಿಸಲಾಗುತ್ತಿದೆ.ಇಂದು ಮಹಿಳೆಯು ತನ್ನ ಧೈರ್ಯ ಮತ್ತು ಆತ್ಮಸ್ಥೈರ್ಯದಿಂದ ಎಲ್ಲಾ ಕ್ಷೇತ್ರಗಳಲ್ಲೂ ತನ್ನನ್ನು ಗುರುತಿಸಿಕೊಂಡಿರುವುದಷ್ಟೇ ಅಲ್ಲದೆ ಉನ್ನತ ಸ್ಥಾನಮಾನವನ್ನು ಗಳಿಸಿದ್ದು, ಮುನ್ನುಗ್ಗುತ್ತಿದ್ದರೂ ಕೂಡ, ಕೆಲವೆಡೆ ಮಹಿಳೆಯ ಮೇಲಿನ ದೌರ್ಜನ್ಯ ಇನ್ನೂ ನಿಂತಿಲ್ಲ.
ದೈಹಿಕವಾಗಿ, ಮಾನಸಿಕವಾಗಿ ಮತ್ತು ಅತ್ಯಾಚಾರದ ರೂಪದಲ್ಲೂ ಕೂಡ ಇದು ಮುಂದುವರಿದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇನ್ನು ಕೆಲವೆಡೆ ಮಹಿಳೆಗೆ ದೊರೆತ ಸ್ವಾತಂತ್ರ್ಯವೂ ಸ್ವೇಚ್ಛೆಯಾಗಿ ಮಾರ್ಪಟ್ಟು ದುರುಪಯೋಗಗೊಳ್ಳುತ್ತಿದೆ. ಕೆಲ ಮಹಿಳೆಯರಿಗೆ ಧೈರ್ಯ, ಸ್ಥೈರ್ಯ, ದೃಢತೆ, ಆತ್ಮವಿಶ್ವಾಸ ಎಲ್ಲವೂ ಇದ್ದರೂ ಕೂಡ ಸಮಾಜದಲ್ಲಿ ನಡೆಯುತ್ತಿರುವ ವಂಚನೆ, ಅಹಿತಕರ ಘಟನೆಗಳು, ಅಕ್ರಮ ಚಟುವಟಿಕೆಗಳಿಂದಾಗಿ ಕುಗ್ಗುವ ಸ್ಥಿತಿ ಏರ್ಪಟ್ಟು ತನ್ನ ಅಸ್ತಿತ್ವವನ್ನು ತಾನು ಕಂಡುಕೊಳ್ಳಲಾಗದೆ, ಭವಿಷ್ಯವನ್ನು ರೂಪಿಸಿಕೊಳ್ಳಲಾಗದೆ, ತನ್ನದೇ ಆದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗದೆ ಸೀಮಿತ ಚೌಕಟ್ಟಿನೊಳಗೆ ಬಂಧಿಯಾಗಿ, ಉಸಿರುಗಟ್ಟಿಸುವಂತಹ ವಾತಾವರಣವದಲ್ಲಿ ಜೀವಿಸಬೇಕಾದ ಅನಿವಾರ್ಯತೆಗೆ ತುತ್ತಾಗಿದ್ದಾಳೆ.
ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದಿನ ದಿನಮಾನಗಳಲ್ಲಿ ಹೆಣ್ಣಿನ ವಿಚಾರದಲ್ಲಿ ಪುರುಷರ ಮನಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದರೂ ಕೂಡ ಅದು ಹೆಚ್ಚಿನ ಪ್ರಮಾಣದಲ್ಲಿಲ್ಲ. ತನ್ನನ್ನು ಸಮಾನವಾಗಿ ಕಾಣಬೇಕೆಂದು ಬಯಸುವ ಮಹಿಳೆ, ತಾನೂ ಕೂಡ ಪುರುಷನನ್ನು ಅದೇ ದೃಷ್ಟಿಕೋನದಲ್ಲಿ ನೋಡಬೇಕೆಂದು ಹೇಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತನಗೆ ಸ್ವಾತಂತ್ರ್ಯ ನೀಡಿದ್ದಾರೆ ಎನ್ನುವ ಕಾರಣಕ್ಕಾಗಿ ಪುರುಷನನ್ನು ಗುಲಾಮನನ್ನಾಗಿ ಕಾಣುತ್ತಿರುವ, ತನ್ನ ಹಠ ಸಾಧನೆಯ ದಳವನ್ನಾಗಿ ಉಪಯೋಗಿಸಿಕೊಳ್ಳುತ್ತಿರುವ ಅದೆಷ್ಟೋ ಮಹಿಳೆಯರು ಇಂದು ನಮ್ಮ ಕಣ್ಣ ಮುಂದಿದ್ದಾರೆ. ಇಂದಿನ ದಿನಗಳಲ್ಲಿ ಹಲವಾರು ಮಹಿಳೆಯರು ವಿಕೃತ ಮನಸ್ಥಿತಿಯನ್ನು ಹೊಂದುತ್ತಿರುವುದನ್ನು ನೋಡಿದರೆ ಎದೆ ಝಲ್ಲೆನ್ನಿಸುತ್ತದೆ.
ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಅವರು ‘ನಿನಗೆ ಬೇರೆ ಹೆಸರು ಬೇಕೇ ಸ್ತ್ರೀ ಎಂದರೆ ಅಷ್ಟೇ ಸಾಕೆ’ ಎಂದು ಹಾಡಿ ಹೊಗಳಿದ ಮಾತೃಹೃದಯಿ, ಭೂಮಿತೂಕದವಳು ಈಕೆಯೇ ಎಂದು ಅನುಮಾನಪಡುವಂತಹ ಸನ್ನಿವೇಶಗಳು ನಡೆಯುತ್ತಲೇ ಇದೆ. ಮಹಿಳಾ ದಿನಾಚರಣೆಯ ಉದ್ದೇಶ ಅರ್ಥಪೂರ್ಣವಾಗಲಿ, ಪರಿಪೂರ್ಣವಾಗಲಿ. ತನಗೆ ಸಮಾಜದಿಂದ, ಸರ್ಕಾರದಿಂದ ದೊರಕುತ್ತಿರುವ ಅವಕಾಶಗಳು, ಸೌಕರ್ಯಗಳು, ಸ್ಥಾನಮಾನಗಳ ಮಹತ್ವ ಏನೆಂಬುದು ಮಹಿಳೆಗೇ ಅರಿವಾಗಿ ತನ್ನ ವ್ಯಕ್ತಿತ್ವವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳುವಂತಾಗಲಿ. ಅಂತೆಯೇ ಮಹಿಳೆಯರನ್ನು, ಅವರ ನಿಜವಾದ ಸಾಮರ್ಥ್ಯವನ್ನು, ಸ್ಥಾನಮಾನವನ್ನು ಗೌರವಿಸಿ, ಪೂಜನೀಯ ಭಾವದಿಂದ ಕಾಣುವ ವಿಶಾಲ ಮನೋಭಾವದ ಪುರುಷರಿಗೂ ಕೂಡ ಮಹಿಳಾ ದಿನಾಚರಣೆಯ ಶುಭಾಶಯಗಳು.








