ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ : ಸಿಎಂ ಘೋಷಣೆ!
– ಬ್ರಾಹ್ಮಣ ಸಮುದಾಯಕ್ಕೆ ಸಿಹಿ ಸುದ್ದಿ ಕೊಟ್ಟ ಸರ್ಕಾರ
– ಬೇಳೂರು ಗೋಪಾಲ ಕೃಷ್ಣ ಮನವಿಗೆ ಸ್ಪಂದನೆ
ಹವಿಗನ್ನಡ, ಹವ್ಯಕ ಕನ್ನಡ, ಹೈವಗನ್ನಡ, ಹೈಗಭಾಷೆ ಎಂಬ ಹೆಸರುಗಳಿಂದ ಗುರುತಿಸಲ್ಪಡುವ ಹವ್ಯಕ ಭಾಷೆಯು ಕನ್ನಡದ ಸಾಮಾಜಿಕ ಉಪಭಾಷೆಯಾಗಿದ್ದು, ಭಾಷಾ ವೈವಿಧ್ಯ ಹಾಗೂ ಭಾಷಾ ಶ್ರೀಮಂತಿಕೆ ಕಾರಣದಿಂದಾಗಿ ಭಾಷಾ ಜಗತ್ತಿನಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಇದೀಗ ರಾಜ್ಯ ಸರ್ಕಾರ ಹವ್ಯಕ ಭಾಷಾ ಅಕಾಡೆಮಿ ಸ್ಥಾಪನೆ ಘೋಷಣೆ ಮಾಡಿದೆ. ಇಂದಿನ ಶಿಷ್ಟ ಕನ್ನಡದಿದ ಭಿನ್ನವಾಗಿ ಹಳಗನ್ನಡದ ಭಾಷಾ ರೂಪಗಳನ್ನು ಇಂದಿಗೂ ಉಳಿಸಿಕೊಂಡು ಬಂದಿರುವುದು ಇದರ ವಿಶೇಷ. ಪ್ರಾಂತ್ಯವಾರು ಭಾಷಾ ವೈವಿಧ್ಯ ಹವಿಗನ್ನಡದ ಶ್ರೀಮಂತಿಕೆಯ ಪ್ರತೀಕವಾಗಿದೆ.
ಇದು ಕನ್ನಡದ ಇತರ ಉಪಭಾಷೆಗಳ ಕಳೆದುಹೋಗಿರುವ ಹಳೆ ಕನ್ನಡದ ಅನೇಕ ವೈಶಿಷ್ಟ್ಯಗಳನ್ನು ಇಂದಿಗೂ ಉಳಿಸಿಕೊಂಡಿದೆ. ಹವ್ಯಕ ಕನ್ನಡವು ಉತ್ತರಕನ್ನಡ, ದಕ್ಷಿಣಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಕೊಡಗು, ಕಾಸರಗೋಡು ಮುಂತಾದ ಪ್ರದೇಶಗಳಲ್ಲಿ ವಾಸವಾಗಿರುವ ಹವ್ಯಕರ ಮನೆ ಮಾತಾಗಿದೆ. ಇಂದು ಕನ್ನಡದಲ್ಲಿ ಆರು ಲಕ್ಷಕ್ಕೂ ಅಧಿಕ ಜನ ಹವ್ಯಕ ಕನ್ನಡವನ್ನು ಮಾತಾಡುತ್ತಾರೆ. ಕನ್ನಡ ಭಾಷೆ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಹವಿಗನ್ನಡದ ಅಧ್ಯಯನ ಬಹಳ ಮುಖ್ಯವಾಗಿದ್ದು, ಇದುವರೆಗೆ ಲಭ್ಯವಿರುವ ಅತ್ಯಂತ ಹಳೆಯ ಕನ್ನಡ ಸಾಹಿತ್ಯ ಮತ್ತು ಶಾಸನಗಳಲ್ಲಿಯೂ ಕಂಡುಬರುವ ಕೆಲವು ಆದಿ-ದ್ರಾವಿಡ ಲಕ್ಷಣಗಳನ್ನು ಹವಿಗನ್ನಡವು ಇಂದಿಗೂ ಉಳಿಸಿಕೊಂಡಿದೆ.
ಆದ್ದರಿಂದ ಹವಿಗನ್ನಡದ ಅಮೂಲಾಗ್ರ ಅಧ್ಯಯನ ಹಾಗ ಸಂರಕ್ಷಣೆಗಾಗಿ ಹವ್ಯಕ ಭಾಷಾ ಅಕಾಡೆಮಿಯ ಸ್ಥಾಪನೆ ಅತ್ಯಗತ್ಯವಾಗಿದೆ. ಇದನ್ನು ಮನಗಂಡು, ಈ ವಿಶಿಷ್ಟ ಮತ್ತು ಅಪರೂಪದ ಭಾಷೆಯ ಅಧ್ಯಯನ, ಅಭಿವೃದ್ಧಿ ಮತ್ತು ಸಂರಕ್ಷಣೆ ದೃಷ್ಟಿಯಿಂದ ಹವ್ಯಕ ಭಾಷಾ ಅಕಾಡೆಮಿಯನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಘೋಷಿದ್ದಾರೆ. ಈ ಮಹತ್ವದ ನಿರ್ಧಾರ ಪ್ರಕಟಿಸಿದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹವ್ಯಕ ಸಮಾಜ ಅಭಿನಂದನೆ ಸಲ್ಲಿಸಿದೆ. ಸಾಗರ ಶಾಸಕ ಬೇಳೂರು ಗೋಪಾಲ ಕೃಷ್ಣ ಈ ಬಗ್ಗೆ ಮನವಿ ಸಲ್ಲಿಸಿ ದ್ದರು.








