ಮಂಗಳೂರು ಪಲ್ಗುಣಿ ನದಿಗೆ ವಿಷಯುಕ್ತ ನೀರು!?
– ಕೊಳಚೆ ನೀರು ಬಿಡುತ್ತಿರುವ ಕಾರ್ಖಾನೆಗಳು..ಕೇಳೋರಿಲ್ಲ
– ಕಣ್ಣುಮುಚ್ಚಿ ಕುಳಿತಿದೆ ಜಿಲ್ಲಾಡಳಿತ: ಜನ ಹೋರಾಟ ಶುರು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಮಂಗಳೂರಿನ ಕುಳೂರು ಸಮೀಪ ಪಲ್ಗುಣಿ ನದಿಗೆ ಇದೀಗ ವಿಷಯುಕ್ತ ನೀರು ಸೇರುತ್ತಿದೆ. ಸುತ್ತಮುತ್ತಲಿನ ಕೊಳಚೆ ನೀರು ಬಿಡುತ್ತಿರುವ ಕಾರ್ಖಾನೆಗಳು ನಡೆ ಕೇಳೋರಿಲ್ಲವಾಗಿದೆ. ಈ ಬಗ್ಗೆ ಕಣ್ಣುಮುಚ್ಚಿ ಕುಳಿತಿದೆ ಜಿಲ್ಲಾಡಳಿತದ ವಿರುದ್ಧ ಜನ ಹೋರಾಟ ಶುರುವಾಗಿದೆ. ಬೃಹತ್ ಕಾರ್ಖಾನೆಗಳಿಂದ ಹೊರಹೊಮ್ಮುತ್ತಿರುವ ಕಲ್ಮಶವು ಮಳವೂರು ಮೂಲಕ ಫಲ್ಗುಣಿ ನದಿಯ ಅಕ್ಕಪಕ್ಕದಲ್ಲಿ ಸೇರುತ್ತಿದೆ. ಪರಿಣಾಮವಾಗಿ ನೀರಿನಲ್ಲಿ ನೊರೆ ಕಂಡುಬಂದಿದ್ದು, ವಿಪರೀತ ವಾಸನೆಯ ಜೊತೆಗೆ ನದಿಯಲ್ಲಿ ಜೀವಿಸುತ್ತಿರುವ ಮೀನುಗಳು ಸಾಯುತ್ತಿವೆ.
ಅಲ್ಲದೆ ಈ ನದಿಗೆ ಅಣೆಕಟ್ಟೊಂದನ್ನು ಕಟ್ಟಿದ್ದು, ಇಲ್ಲಿಂದಲೇ 10 ಗ್ರಾಮಗಳಿಗೆ ಕುಡಿಯುವ ನೀರಿನ ಸರಬರಾಜಾಗುತ್ತಿದೆ. ಜನರಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತಹ ಆತಂಕ ಮನೆ ಮಾಡಿದೆ. ಅಣೆಕಟ್ಟಿನವರೆಗೆ ಹರಡಿರುವ ಕಲುಷಿತ ನೀರು, ಅಣೆಕಟ್ಟನ್ನು ಪ್ರವೇಶಿಸಿ ನದಿಯಲ್ಲಿ ಬೆರೆಯದೇ ಇರುತ್ತದೆಯೇ ಎನ್ನುವ ಅಭಿಪ್ರಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ. ಜನರ ಜೀವನದೊಂದಿಗೆ ಚೆಲ್ಲಾಟವಾಡುವ ಬದಲಿಗೆ, ಈ ನೀರು ಯಾವ ಯಾವ ಕಾರ್ಖಾನೆಗಳ ಮೂಲಕ ನದಿಯನ್ನು ಸೇರುತ್ತಿದೆ ಎನ್ನುವುದನ್ನು ಸಂಬಂಧಿತ ಇಲಾಖೆಯು ತನಿಖೆ ನಡೆಸಿ, ಸೂಕ್ತ ಕ್ರಮವನ್ನು ಕೈಗೊಂಡು, ಸಮಸ್ಯೆಯನ್ನು ಬಗೆಹರಿಸಬೇಕೆಂದು ಸ್ಥಳೀಯರು ಆಗ್ರಹಪಡಿಸಿದ್ದಾರೆ.
ಜೊತೆಗೆ ಜನಪ್ರತಿನಿಧಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ, ನಾಗರಿಕರೆಲ್ಲ ಒಂದುಗೂಡಿ ಅಧಿಕಾರಿಗಳ ಕಣ್ಣು ತೆರೆಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನೂ ಸಹ ನೀಡಲಾಗಿದೆ. ಈ ಸಂದರ್ಭದಲ್ಲಿ ಬಜ್ಪೆ ನಾಗರಿಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಸಿರಾಜ್ ಬಚ್ಪೆ, ರಾಜ್ಯ ದಲಿತ ಸಂಘದ ಅಧ್ಯಕ್ಷರು, ವೇದಿಕೆಯ ಗೌರವಾಧ್ಯಕ್ಷರಾದ ದೇವದಾಸ್, ಮೊನಕ ಹಾಜಿ, ಸಲೀಮ್ ಹಾಜಿ, ಉಪಾಧ್ಯಕ್ಷರಾದ ಇಂಜಿನಿಯರ್ ಇಸ್ಮಾಯಿಲ್, ವಸಂತ್, ಕಾರ್ಯದರ್ಶಿಗಳಾದ ನಿಸಾರ್ ಕರಾವಳಿ, ದಲಿತ ಸಂಘದ ನಾಯಕರಾದ ಮಂಜಪ್ಪ ಪುತ್ರನ್, ಹಿರಿಯರಾದ ಖಾದರ್ ಜರಿ, ಅನ್ವರ್ ರಜಾಕ್ ಮತ್ತು ಕೆಪಿಸಿಸಿ ಸಾಮಾಜಿಕ ಜಾಲತಾಣದ ಹಫೀಜ್ ಕೊಳಂಬೆ ಉಪಸ್ಥಿತರಿದ್ದರು.








