ಭಟ್ಕಳದಲ್ಲಿದ್ದಾರೆ 14 ಜನ ಪಾಕಿಸ್ತಾನಿ ಪ್ರಜೆಗಳು !!
* ದೀರ್ಘಾವಧಿ ವೀಸಾ ಹೊಂದಿರುವ 14 ಜನ ಪಾಕ್ ಮಹಿಳೆಯರು
* ಸದ್ಯಕ್ಕಿಲ್ಲ ಇವರ ಗಡಿಪಾರು, ಇನ್ನು ಹೆಚ್ಚಿನ ಸಂಖ್ಯೆ ಇರುವ ಸಾಧ್ಯತೆ
NAMMMUR EXPRESS NEWS
ಕಾರವಾರ: ಭಟ್ಕಳದಲ್ಲಿ 14 ಮಂದಿ ಪಾಕಿಸ್ತಾನ ಪ್ರಜೆಗಳು ನೆಲೆಸಿದ್ದು, ಅವರು ದೀರ್ಘಾವಧಿ ವೀಸಾ ಹೊಂದಿದ್ದು ಭಾರತದಲ್ಲೇ ಇರಲಿದ್ದಾರೆ.
ಪಹಲ್ಗಾಮ್ನಲ್ಲಿ ಹಿಂದೂಗಳ ನರಮೇಧ ನಡೆದ ಬೆನ್ನಲ್ಲೇ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನಿ ಪ್ರಜೆಗಳು 48 ಗಂಟೆಯಲ್ಲಿ ದೇಶ ತೊರೆಯಲು ಕೇಂದ್ರ ಸರ್ಕಾರದ ಗಡುವು ನೀಡಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನೆಲಸಿರುವ 14 ಜನ ಪಾಕಿಸ್ತಾನ ಮೂಲದ ಮಹಿಳೆಯರಿದ್ದು ದೀರ್ಘಾವಧಿ ವೀಸಾ ಇರುವ ಕಾರಣ ಭಟ್ಕಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಭಟ್ಕಳ ಹಾಗೂ ಪಾಕಿಸ್ತಾನದ ನಡುವೆ ಸ್ವತಂತ್ರ ಪೂರ್ವದಲ್ಲೇ ವೈವಾಹಿಕ ಸಂಬಂಧಗಳು ನಡೆಯುತ್ತಿತ್ತು, ಭಟ್ಕಳದ ಮುಸ್ಲಿಂ ಹೆಣ್ಣನ್ನು ಪಾಕಿಸ್ತಾನದ ವರನಿಗೆ ನೀಡಿದರೆ ಪಾಕಿಸ್ತಾನದ ಹೆಣ್ಣನ್ನು ಭಟ್ಕಳಕ್ಕೆ ನೀಡುವುದು ನಡೆದುಕೊಂಡು ಬಂದಿದೆ.
ಈಗಾಗಲೇ ಹಲವು ವರ್ಷದಿಂದ 10 ಪಾಕಿಸ್ತಾನ ಮೂಲದ ಮಹಿಳೆಯರಿದ್ದು ಇವರಲ್ಲಿ ನಾಲ್ಕು ಜನ ಭಾರತದಲ್ಲೇ ಮಕ್ಕಳು ಜನಿಸಿದ್ದಾರೆ. ಪ್ರತಿ ಎರಡು ವರ್ಷಕ್ಕೆ ಒಮ್ಮೆ ಇವರ ವೀಸಾ ನವೀಕರಣವಾಗುತ್ತದೆ.
ಈ ಮಹಿಳೆಯರು ಭಾರತದ ಪೌರತ್ವಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರೂ ಈವರೆಗೂ ಇವರಿಗಾಗಲಿ ಭಾರತದಲ್ಲಿ ಹುಟ್ಟಿದ ಇವರ ಮಕ್ಕಳಿಗೆ ಪೌರತ್ವ ನೀಡಿಲ್ಲ. ದೀರ್ಘಾವಧಿ ವೀಸಾ ಹಾಗೂ ಭಾರತೀಯ ಪುರುಷರನ್ನು ವಿವಾಹವಾಗಿದ್ದರಿಂದ ಸದ್ಯ ಈ 14 ಮಹಿಳೆಯರು ಭಟ್ಕಳದಲ್ಲೇ ಇರಲಿದ್ದಾರೆ.
ಕೆಲವು ವರ್ಷದ ಹಿಂದೆ ಬಾಂಗ್ಲಾದ ಮಹಿಳೆ ಸಹ ಗಡಿ ಉಲ್ಲಂಘಿಸಿ ಭಟ್ಕಳಕ್ಕೆ ಬಂದು ಇಲ್ಲಿನ ಯುವಕನನ್ನು ವಿವಾಹವಾಗಿದ್ದು ಈಕೆ ಸದ್ಯ ಜೈಲಿನಲ್ಲಿದ್ದು ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದೆ.
ಭಟ್ಕಳದಲ್ಲಿ 14 ಜನ ಪಾಕಿಸ್ತಾನಿ ಮಹಿಳೆಯರಲ್ಲದೇ ಹೆಚ್ಚಿನ ಸಂಖ್ಯೆಯ ಮಹಿಳೆಯರು ಇರುವ ಸಾಧ್ಯತೆ ಇದ್ದು ಈ ಕುರಿತು ಮಾಹಿತಿ ಕಲೆಹಾಕಲು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ಭಟ್ಕಳಕ್ಕೆ ತೆರಳಿದ್ದು ಮಾಹಿತಿ ಕಲೆಹಾಕುತಿದ್ದಾರೆ.








