ದೇಶಾದ್ಯಂತ 4ಜಿ ಮೊಬೈಲ್ ಟವರ್ಗಳ ಸ್ಥಾಪನೆ
– ಶಿವಮೊಗ್ಗದಲ್ಲಿ 90 ಹೊಸ ಟವರ್ ಲೋಕಾರ್ಪಣೆ
– ಮೊಬೈಲ್ ನೆಟ್ವರ್ಕ್ ಇಲ್ಲದ ಹಳ್ಳಿಗಳಿಗೆ ಟೆಲಿಕಾಂ ಪ್ರವೇಶ
NAMMUR EXPRESS NEWS
ಶಿವಮೊಗ್ಗ: ಬಿಎಸ್ಎನ್ಎಲ್ ವತಿಯಿಂದ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ‘ಸ್ವದೇಶಿ 4ಜಿ’ ನೆಟ್ವರ್ಕ್ನ ಮೊಬೈಲ್ ಟವರ್ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದು ಇದರಲ್ಲಿ ಶಿವಮೊಗ್ಗ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ 90 ಮೊಬೈಲ್ ಟವರ್ಗಳು ಸೇರಿವೆ. ಒಡಿಶಾದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ದೇಶದೆಲ್ಲೆಡೆಯ 97,500 ಮೊಬೈಲ್ ಟವರ್ಗಳನ್ನು ಉದ್ಘಾಟಿಸಲಾಯಿತು. ಇದರಲ್ಲಿ 92,600 4ಜಿ ನೆಟ್ವರ್ಕ್ಗಳಾಗಿವೆ. ಇವುಗಳನ್ನು ಸುಮಾರು 37 ಸಾವಿರ ಕೋಟಿ ರೂ. ವೆಚ್ಚದಲ್ಲಿಅಭಿವೃದ್ಧಿಪಡಿಸಲಾಗಿದೆ. ಕ್ಲೌಡ್ ತಂತ್ರಜ್ಞಾನ ಆಧರಿಸಿ ಭವಿಷ್ಯಕ್ಕೆ ಸಿದ್ಧವಾಗುವಂತೆ ವಿನ್ಯಾಸಗೊಳಿಸಲಾಗಿದ್ದು, 5ಜಿಗೆ ಸರಾಗವಾಗಿ ಅಪ್ಗ್ರೇಡ್ ಮಾಡುವ ಸಾಮರ್ಥ್ಯ ಹೊಂದಿವೆ.
ದೇಶದಾದ್ಯಂತ ಮೊಬೈಲ್ ನೆಟ್ವರ್ಕ್ ಇಲ್ಲದ 26,700ಕ್ಕೂ ಹೆಚ್ಚು ಹಳ್ಳಿಗಳಿಗೆ ಈಗ ಟೆಲಿಕಾಂ ಪ್ರವೇಶ ಪಡೆದುಕೊಂಡಿದೆ. ಇದರಿಂದ ದೇಶದ ಸುಮಾರು 20 ಲಕ್ಷಕ್ಕೂ ಹೆಚ್ಚು ಹೊಸ ಚಂದಾದಾರರಿಗೆ ಪ್ರಯೋಜನವಾಗಲಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಪಶ್ಚಿಮಘಟ್ಟ ವ್ಯಾಪ್ತಿಯ ಕುಗ್ರಾಮಗಳಿಗೆ ಅನುಕೂಲವಾಗುತ್ತದೆ. ಈ ನೆಟ್ವರ್ಕ್ಗಳು ಸೌರಶಕ್ತಿ ಚಾಲಿತವಾಗಿದ್ದು ಭಾರತದ ಅತಿದೊಡ್ಡ ಹಸಿರು ಟೆಲಿಕಾಂ ಸೈಟ್ಗಳ ಸಮೂಹವನ್ನಾಗಿ ಮಾಡಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
4ಜಿ ಸ್ಯಾಜುರೇಶನ್ ಟವರ್ಗಳು
ಹೊಸನಗರ – 14
ಸಾಗರ – 26
ತೀರ್ಥಹಳ್ಳಿ – 16
ಶಿವಮೊಗ್ಗ – 05
ಶಿಕಾರಿಪುರ – 04
ಸೊರಬ- 01
ಭದ್ರಾವತಿ – 01
ಬೈಂದೂರು – 23
ಒಟ್ಟು – 90







