ಮಹಾ ಮಳೆ ಭೂ ಕುಸಿತಕ್ಕೆ 8 ಬಲಿ!
– ಶಿರೂರು ಬಳಿ ಭಾರೀ ಗುಡ್ಡಕುಸಿತ: 7 ಸಾವು
– ಇನ್ನು ಅನೇಕರು ನಾಪತ್ತೆ: ನದಿಯಲ್ಲಿ ತೇಲಿ ಹೋದ ಟ್ಯಾಂಕ್
– ಕರಾವಳಿ -ಕಾರವಾರ ಸಂಪರ್ಕಕ್ಕೆ ಬದಲಿ ಮಾರ್ಗ: ಎಲ್ಲೆಲ್ಲಿ?
NAMMUR EXPRESS NEWS
ಕಾರವಾರ: ಸದ್ಯದ ವರ್ಷಗಳಲ್ಲಿ ಕಂಡು ಕೇಳರಿಯದ ಮಳೆ ಹಾಗೂ ಭೂಕುಸಿತಕ್ಕೆ ಉತ್ತರ ಕನ್ನಡ ತತ್ತರಿಸಿದ್ದು ಭೂಕುಸಿತಕ್ಕೆ ಈವರೆಗೆ 8 ಮಂದಿ ಬಲಿಯಾಗಿದ್ದಾರೆ. ಒಂದೇ ಕಡೆ ಭೂಕುಸಿತವಾಗಿ 7 ಮಂದಿ ಮೃತಪಟ್ಟಿದ್ದಾರೆ. ಮತ್ತೊಂದು ಕಡೆ ಓರ್ವ ಮೃತಪಟ್ಟಿದ್ದಾರೆ.ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿ 66 ಶಿರೂರು ಬಳಿ ಭಾರೀ ಗುಡ್ಡಕುಸಿತ ಉಂಟಾಗಿದೆ. ಗುಡ್ಡದ ಮಣ್ಣಿನಡಿ 10ಕ್ಕೂ ಅಧಿಕ ಮಂದಿ ಸಿಲುಕಿರುವ ಶಂಕೆ ಇದ್ದು, ಒಂದೇ ಕುಟುಂಬದ ಐವರು ಸೇರಿ ಹತ್ತಕ್ಕೂ ಅಧಿಕ ಮಂದಿ ಕಣ್ಮರೆಯಾಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಗುಡ್ಡ ಕುಸಿದ ರಭಸಕ್ಕೆ ನದಿಗೆ 2 ಗ್ಯಾಸ್ ಟ್ಯಾಂಕರ್ಗಳು ಕೊಚ್ಚಿ ಹೋಗಿದೆ. ಗುಡ್ಡದ ಕೆಳಗಿದ್ದ ಲಾರಿ, ಮತ್ತೊಂದು ಟ್ಯಾಂಕರ್ ಹಾಗೂ ಚಾಲಕರು ಪಾರಾಗಿದ್ದಾರೆ. ತುರ್ತು ಕಾರ್ಯಾಚರಣೆಗೆ ಪೊಲೀಸರು ಧಾವಿಸಿದ್ದಾರೆ. ಸ್ಥಳದ ಪರಿಸ್ಥಿತಿಭೀಕರವಾಗಿದ್ದು, ಹೆದ್ದಾರಿ ಸಂಪೂರ್ಣ ಕತ್ತರಿಸಿಹೋಗಿ ಈ ರಸ್ತೆಯಲ್ಲಿ ವಾಹನ ಸಂಚಾರ ನಿಂತೇ ಹೋಗಿದೆ, ಕಾರವಾರ ತಾಲೂಕಿನ ಕಿನ್ನರ ಗ್ರಾಮದಲ್ಲಿ ಭಾರಿ ಮಳೆಗೆ ಮನೆ ಮೇಲೆ ಗುಡ್ಡ ಬಿದ್ದ ಪರಿಣಾಮ ಗೋಡೆ ಕುಸಿದಿದೆ. ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಕಾರವಾರ- ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ಜಲಾವೃತವಾದ ಪರಿಣಾಮ ಚಿಕಿತ್ಸೆಗೆ ಹೊರಟಿದ್ದ ಪಾಶ್ವವಾಯು ಪೀಡಿತರೊಬ್ಬರು ರಸ್ತೆಯಲ್ಲೇ ಲಾಕ್ ಆದರು. ಕಾರವಾರ-ಕೈಗಾ ರಸ್ತೆಯ ಮಂದ್ರಾಳಿ ಬಳಿ ರಸ್ತೆಗೆ ಗುಡ್ಡ ಕುಸಿದಿದ್ದು, ಮನೆಗಳಿಗೂ ಹಾನಿಯಾಗಿತ್ತು. ಸದ್ಯ 2 ದಿನ ಕಾರವಾರ-ಕೈಗಾ ರಸ್ತೆ ಸಂಚಾರ ಬಂದ್ ಆಗಿದೆ. ಅನೇಕ ಕಡೆ ಭೂಕುಸಿತದ ಪರಿಣಾಮ ರಸ್ತೆಗಳು ಅಂಚು ಕುಸಿದು ವಾಹನ ಓಡಾಟಕ್ಕೆ ದುಸ್ತರವಾಗಿವೆ.
24×7 ಕಾರ್ಯ ನಿರ್ವಹಿಸುವ ತುರ್ತು ಕಾರ್ಯಾಚರಣೆ
ಜಿಲ್ಲೆಯ ಸಾರ್ವಜನಿಕರ ರಕ್ಷಣೆಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ 24×7 ಕಾರ್ಯ ನಿರ್ವಹಿಸುವ ತುರ್ತು ಕಾರ್ಯಾಚರಣೆ ಕೇಂದ್ರವನ್ನುತೆರೆಯಲಾಗಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆಯಿಂದಾಗಿ 2 ಮನೆಗಳು ಸಂಪೂರ್ಣ ನಾಶ, 2 ಮನೆಗಳಿಗೆ ತೀವ್ರ ಹಾನಿ ಮತ್ತು 18 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಕಾರವಾರದಲ್ಲಿ 2, ಕುಮಟಾದಲ್ಲಿ 1 ಹಾಗೂ ಹೊನ್ನಾವರದಲ್ಲಿ 2 ಸೇರಿದಂತೆ ಒಟ್ಟು 5 ಕಾಳಜಿ ಕೇಂದ್ರಗಳನ್ನು ತೆರೆದಿದ್ದು ಒಟ್ಟು 93 ಜನರಿಗೆ ಆಶ್ರಯ ಒದಗಿಸಿ ಅಗತ್ಯ ಉಟೋಪಚಾರ ಮತ್ತು ವೈದ್ಯಕೀಯ ನೆರವು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಜಿಲ್ಲಾಡಳಿತದ ಸಹಕಾರ: ತುರ್ತು ಕರೆ ಮಾಡಿ…
ವಿಪತ್ತು ನಿರ್ವಹಣೆ, ಪೊಲೀಸ್, ಅರಣ್ಯ, ಅಗ್ನಿಶಾಮಕ, ಹೆಸ್ಕಾಂ ಇಲಾಖೆಯಿಂದ ಒಬ್ಬೊಬ್ಬ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಎಲ್ಲಾ ಇಲಾಖೆಯೊಂದಿಗೆ ಸಂಪರ್ಕ ಸಾಧಿಸಲು ಎಮರ್ಜೆನ್ಸಿ ಆಪರೇಷನ್ ಸೆಂಟರ್ ಮಾಡಲಾಗಿದೆ. ಎಲ್ಲೇ ಸಹಾಯ ಅಗತ್ಯವಿದ್ದರೂ ತುರ್ತು ಸ್ಪಂದನೆಗೆ ಕ್ರಮವಹಿಸಲಾಗುತ್ತದೆ. ಎಲ್ಲಾ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗೂ ಕೇಂದ್ರಸ್ಥಾನ ಬಿಡದಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಮಳೆಯಿಂದಾಗಿ ಯಾವುದೇ ಅಪಾಯವಾದಲ್ಲಿ ಕೂಡಲೇ ಉಚಿತ ಸಹಾಯವಾಣಿ ಸಂಖ್ಯೆ 1077 ಗೆ ಅಥವಾ ಮೊ.ಸಂ. ಸಂಖ್ಯೆ 9483511015 ಕರೆ, ವಾಟ್ಸಾಪ್ ಮೂಲಕ ಮಾಹಿತಿ ನೀಡಿದಲ್ಲಿ ತಕ್ಷಣ ನೆರವಿಗೆ ಬರಲು ಜಿಲ್ಲಾಡಳಿತ ಸಜ್ಜುಗೊಂಡಿದೆ.
ಸಂಚಾರ ಬದಲಾವಣೆ: ಕರಾವಳಿ ಸಂಪರ್ಕಕ್ಕೆ ಸಹಾಯ ಮಾಡಿ
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 02 ದಿವಸಗಳಿಂದ ಸುರಿಯುತ್ತಿದ್ದ ಭಾರಿ ಮಳೆಯಿಂದ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಗುಡ್ಡ ಕುಸಿತವಾಗಿ ವಾಹನಗಳು ಹಾಗೂ ವಾಸ್ತವ್ಯದ ಮನೆ ನದಿಯ ಪಾಲಾಗಿದ್ದು, ಆಸ್ತಿ-ಪಾಸ್ತಿ ಹಾಗೂ ಜೀವ ಹಾನಿ ಸಂಭವಿಸಿರುತ್ತದೆ. ಅಲ್ಲದೇ ಭಾರಿ ಪ್ರಮಾಣದಲ್ಲಿ ಮಣ್ಣು ರಸ್ತೆಯ ಮೇಲೆ ಬಿದ್ದಿರುವುದರಿಂದ ತೆರವು ಕಾರ್ಯ ಮುಂದುವರಿದಿರುತ್ತದೆ. ತಾತ್ಕಾಲಿಕವಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿರುತ್ತದೆ. ಪರ್ಯಾಯ ಮಾರ್ಗವಾಗಿ ಈ ಕೆಳಗಿನ ಮಾರ್ಗಗಳಲ್ಲಿ ಸಾರ್ವಜನಿಕರು ಸಂಚರಿಸಬಹುದಾಗಿದೆ.
1. ಯಲ್ಲಾಪುರದಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳಿಗೆ ಬಾಳೆಗುಳಿ ಕ್ರಾಸದಿಂದ-ಹೊಸ ಕಂಬಿ ಹಿಲ್ಲೂರು- ಮಾದನಗೇರಿ ಕ್ರಾಸ್-ಕುಮಟಾ ಮುಖಾಂತರ ಮಂಗಳೂರಿಗೆ ಪ್ರಯಾಣಿಸಬಹುದಾಗಿದೆ.
2. ಭಟ್ಕಳದಿಂದ ಕಾರವಾರಕ್ಕೆ ಬರುವ ವಾಹನಗಳು ಕುಮಟಾ- ಮಾದನಗೇರಿ ಕ್ರಾಸ್ದಿಂದ – ಹಿಲ್ಲೂರು- ಹೊಸಕಂಬಿ ಬಾಳೆಗುಳಿ ಮುಖಾಂತರ ಕಾರವಾರಕ್ಕೆ ಪ್ರಯಾಣಿಸಬಹುದಾಗಿದೆ.ಶಿರಸಿ-ಕುಮಟಾ ರಸ್ತೆ ದೇವಿಮನೆ ಮತ್ತು ರಾಗಿಹೋಸಳ್ಳಿ ಮಧ್ಯ ಗುಡ್ಡ ಕುಸಿದು ರಸ್ತೆ ಸಂಪೂರ್ಣ ಬಂದ್ ಆಗಿರುತ್ತದೆ. ಅತಿಯಾಗಿ ಮಳೆ ಬೀಳುತ್ತಿರುವುದರಿಂದ ಮಣ್ಣನ್ನು ತೆರವು ಮಾಡಿದಷ್ಟು ಮತ್ತೆ ಗುಡ್ಡ ಕುಸಿಯತ್ತಿದೆ. ಮಳೆ ಕಡಿಮೆಯಾಗದೆ ಇದ್ದಲ್ಲಿ ಮತ್ತೆ ಹಲವು ಕಡೆಗಳಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇರುವುದರಿಂದ ಕುಮಟಾ-ಶಿರಸಿ ರಸ್ತೆಯಲ್ಲಿ ತಾತ್ಕಾಲಿಕವಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿರುತ್ತದೆ. ಪರ್ಯಾಯ ಮಾರ್ಗವಾಗಿ ಈ ಕೆಳಗಿನ ಮಾರ್ಗಗಳಲ್ಲಿ ಸಾರ್ವಜನಿಕರು ಸಂಚರಿಸಬಹುದಾಗಿದೆ.
1. ಶಿರಸಿಯಿಂದ ಕುಮಟಾಕ್ಕೆ ಹೋಗುವ ವಾಹನಗಳಿಗೆ ಯಲ್ಲಾಪುರ-ಹೊಸಕಂಬಿ-ಹಿಲ್ಲೂರು ಮಾದನಗೇರಿ ಕ್ರಾಸ್ದಿಂದ ಕುಮಟಾಕ್ಕೆ ಸಂಚರಿಸಬಹುದಾಗಿದೆ.
2. ಶಿರಸಿಯಿಂದ ಕಾರವಾರಕ್ಕೆ ಹೋಗುವ ವಾಹನಗಳಿಗೆ ಶಿರಸಿ-ಯಲ್ಲಾಪುರ ಮಾರ್ಗವಾಗಿ ಕಾರವಾರಕ್ಕೆ ಪ್ರಯಾಣಿಸಬಹುದಾಗಿದೆ.
3. ಭಟ್ಕಳದಿಂದ ಶಿರಸಿ ಮಾರ್ಗವಾಗಿ ಹೋಗುವ ವಾಹನಗಳಿಗೆ ಕುಮಟಾ- ಮಾದನಗೇರಿ ಕ್ರಾಸ್ದಿಂದ ಹಿಲ್ಲೂರು-ಹೊಸಕಂಬಿ ಯಲ್ಲಾಪುರ ಮುಖಾಂತರ ಶಿರಸಿಗೆ ಪ್ರಯಾಣಿಸಬಹುದಾಗಿದೆ.







