ಅಡಿಕೆ ರಕ್ಷಣೆಗೆ ಮತ್ತೆ ಸಭೆ: ತಾಂತ್ರಿಕತೆ ಬಗ್ಗೆ ಚರ್ಚೆ!
– ಸಹಕಾರ ನಾಯಕ ಮಂಜುನಾಥ ಗೌಡ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಮಹತ್ವದ ಸಭೆ
– ಎಲೆಚುಕ್ಕೆ, ಕೊಳೆ ರೋಗ ನಿಯಂತ್ರಣಕ್ಕೆ ಹಲವು ಸೂಚನೆ
ಶಿವಮೊಗ್ಗ: ಅಡಿಕೆ ರೈತರ ಬದುಕನ್ನು ಉಳಿಸಿದೆ. ಆದರೆ ಇತ್ತೀಚಿಗೆ ಅಡಿಕೆ ರೋಗಗಳು ರೈತರ ಬದುಕನ್ನು ಕಸಿಯುತ್ತಿವೆ. ಈ ನಡುವೆ ರೋಗ ತಡೆಗೆ ಅನೇಕ ಪ್ರಯತ್ನ ನಡೆಯುತ್ತಿದೆ. ಆದರೂ ಸಮಸ್ಯೆ ನಿಂತಿಲ್ಲ. ಇದೀಗ ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಡಿಕೆ ಬೆಳೆಗಾರರ ಹಿತದೃಷ್ಟಿಯಿಂದ ಮಹತ್ವದ ಜಿಲ್ಲಾ ಮಟ್ಟದ ಭಾಗೀದಾರರ ಸಭೆ ಹಾಗೂ ತಾಂತ್ರಿಕ ಕಾರ್ಯಾಗಾರ ನಡೆಯಿತು. ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ ರೋಗ ಮತ್ತು ಕೊಳೆ ರೋಗಗಳ ಸಮಗ್ರ ನಿಯಂತ್ರಣ ಕುರಿತು ತಜ್ಞರು ಹಾಗೂ ಅಧಿಕಾರಿಗಳು ರೈತರಿಗೆ ವಿವರವಾದ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರು ಹಾಗೂ ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿರುವ, ಅಡಿಕೆ ಬೆಳೆಗಾರರ ಪರ ಸದಾ ಕಾಳಜಿ ವಹಿಸುವ ಡಾ. ಆರ್.ಎಂ. ಮಂಜುನಾಥ್ ಗೌಡ ಅವರು ನೇತೃತ್ವ ವಹಿಸಿದ್ದರು.ಶಿವಮೊಗ್ಗ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ಶ್ರೀ ಹೆಮಂತ್ ಕುಮಾರ್ ಅವರ ಮುಖ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಜಗದೀಶ್ ನಾಯ್ಕ ಅವರು ಅಡಿಕೆ ಬೆಳೆಗಳಲ್ಲಿ ಕಾಣಿಸಿಕೊಳ್ಳುವ ವಿವಿಧ ರೋಗಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಜೊತೆಗೆ ತುಮಕೂರಿನ ಡಾ. ಮಂಜುನಾಥ್ ಅವರು ವೀಡಿಯೊ ಕಾನ್ಫರೆನ್ಸ್ ಮೂಲಕ ಎಲೆಚುಕ್ಕೆ ರೋಗದ ಉಂಟಾಗುವ ಕಾರಣಗಳು, ಅದರ ಹರಡುವಿಕೆ, ತೋಟದ ಮಧ್ಯೆ ಬೆಳೆಸುವ ಉಪ್ಪಬೆಳೆಗಳ ಪರಿಣಾಮ ಮತ್ತು ಅದನ್ನು ನಿಯಂತ್ರಿಸುವ ವೈಜ್ಞಾನಿಕ ಕ್ರಮಗಳ ಬಗ್ಗೆ ರೈತರಿಗೆ ಸ್ಪಷ್ಟ ಮಾರ್ಗದರ್ಶನ ನೀಡಿದರು. ಅಡಿಕೆ ತೋಟಗಳಲ್ಲಿ ಸರಿಯಾದ ನಿರ್ವಹಣೆ, ತೇವಾಂಶ ನಿಯಂತ್ರಣ ಹಾಗೂ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿದರೆ ಎಲೆಚುಕ್ಕೆ ಮತ್ತು ಕೊಳೆ ರೋಗಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದು ತಜ್ಞರು ತಿಳಿಸಿದರು.ಈ ಸಭೆ ಅಡಿಕೆ ಬೆಳೆಗಾರರಿಗೆ ಜಾಗೃತಿ ಮೂಡಿಸುವ ಮಹತ್ವದ ವೇದಿಕೆಯಾಗಿದ್ದು, ಮಲೆನಾಡು ಭಾಗದ ರೈತರಿಗೆ ಉಪಯುಕ್ತ ಮಾಹಿತಿಯನ್ನು ನೀಡುವ ಕಾರ್ಯಕ್ರಮವಾಗಿ ಪರಿಣಮಿಸಿತು.








