ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗುತ್ತಾ..?
– ಇರಾನ್ ಯುದ್ಧದ ಕಾರ್ಮೋಡ: ಎಲ್ಲಾ ದೇಶಕ್ಕೂ ಎಫೆಕ್ಟ್
– ಪೆಟ್ರೋಲ್, ಡೀಸೆಲ್ ದರಗಳು ಲೀಟರ್ ಗೆ 5 -8 ರೂ. ಹೆಚ್ಚಳ?
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ನವ ದೆಹಲಿ: ಇರಾನ್ ದೇಶವು ಪ್ರತಿಕಾರವಾಗಿ ಎಂಕೆಡಿ ವಿಯೋಮ್ ಎನ್ನುವ ತೈಲ ಟ್ಯಾಂಕರ್ ಮೇಲೆ ಡ್ರೋನ್ ಮೂಲಕ ದಾಳಿ ನಡೆಸಿದ ಘಟನೆ ಕಳೆದೆರಡು ದಿನಗಳ ಹಿಂದೆ ಸಂಭವಿಸಿತ್ತು. ಪರಿಣಾಮವಾಗಿ ತೈಲ ಸಾಗಾಟ ಕಡಿಮೆಗೊಳ್ಳುವ ಸಾಧ್ಯತೆಯಿದ್ದು, ಬೆಲೆ ಏರಿಕೆಯಾಗುವ ಸಂಭವವಿದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದ್ದವು.
ಇದೀಗ ಸಾರ್ವಜನಿಕರ ಕಲ್ಪನೆಯಂತೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಕಾಣುತ್ತಿದ್ದು, ಇದರ ಜೊತೆಗೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಕೂಡ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನಮ್ಮ ಭಾರತವು ಒಟ್ಟು ಕಚ್ಚಾ ತೈಲದ ಅಗತ್ಯತೆಗಿಂತ ಶೇಕಡ 80ರಷ್ಟು ಹೆಚ್ಚಿನ ಭಾಗವನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಬದಲಾವಣೆ ಉಂಟಾದಲ್ಲಿ ಅದು ದೇಶದ ಬೆಲೆಗಳ ಮೇಲೂ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.
ಆರ್ಥಿಕ ತಜ್ಞರು “ಇತ್ತೀಚೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಶೇಕಡ ಹತ್ತರಷ್ಟು ಏರಿಕೆಯಾಗಿರುವುದರ ಕುರಿತು ವರದಿಗಳು ಪ್ರಕಟಗೊಂಡಿದೆ. ಇದರ ಪರಿಣಾಮ ಭಾರತದ ಮೇಲು ಬೀರಲಿದ್ದು ಪೆಟ್ರೋಲ್ ಮತ್ತು ಡೀಸೆಲ್ ದರಗಳು ಲೀಟರ್ ಗೆ ಐದು ರೂಪಾಯಿಯಿಂದ ಎಂಟು ರೂಪಾಯಿಗೆ ಹೆಚ್ಚಳವಾಗುವ ಸಾಧ್ಯತೆ ಇದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಭಾರತ ದೇಶಕ್ಕೆ ತೈಲವನ್ನು ಪೂರೈಸುವ ದೇಶಗಳಲ್ಲಿ ಸೌದಿ ಅರೇಬಿಯಾ ಕೂಡ ಒಂದಾಗಿದ್ದು, ಅಲ್ಲಿನ ತೈಲ ಸಂಸ್ಕರಣಾಗಾರಗಳಲ್ಲಿ ಯಾವುದೇ ರೀತಿಯ ತೊಂದರೆ ಉಂಟಾದರೆ, ಇದರಿಂದಾಗಿ ಉತ್ಪಾದನೆ ಸ್ಥಗಿತಗೊಂಡರೆ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಾಸಗಳು ಉಂಟಾಗಿ, ಬೆಲೆಗಳು ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿರುತ್ತವೆ ಎನ್ನುತ್ತಾರೆ ವಿಶ್ಲೇಷಕರು.
ತೈಲ ದರದ ಏರಿಕೆಯಿಂದಾಗಿ ಸರಕು ಸಾಗಣೆ ವೆಚ್ಚ, ತರಕಾರಿ, ಹಾಲು ಮತ್ತು ದಿನಸಿ ಪದಾರ್ಥಗಳ ಬೆಲೆಗಳು ಸಹ ಏರಿಕೆ ಕಾಣಲಿದ್ದು ಇದು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಆರ್ಥಿಕ ಹೊರೆಯನ್ನು ಹೆಚ್ಚಿಸಲಿದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಇದು ನೇರವಾಗಿ ದೇಶದ ಹಣದುಬ್ಬರದ ಮೇಲು ತೀವ್ರತರವಾದ ಪ್ರಭಾವ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಆರ್ಥಿಕ ಸ್ಥಿರತೆಗೆ ಸವಾಲುಗಳು ಎದುರಾಗಿ, ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಯಾಗಿ, ಷೇರು ಮಾರುಕಟ್ಟೆಯಲ್ಲೂ ಅಸ್ಥಿರತೆ ಕಂಡು ಬರಲಿದೆ. ಇದಕ್ಕೆ ಸಂಬಂಧಿಸಿದಂತೆ ದೇಶದ ಪ್ರಜೆಗಳ ಗಮನ ಸರ್ಕಾರ ಕೈಗೊಳ್ಳುವ ಕ್ರಮಗಳ ಮೇಲೆ ಕೇಂದ್ರೀಕರಿಸಿದೆ.|








