ಶಿವಮೊಗ್ಗ ವಿಮಾನ ನೈಟ್ ಲ್ಯಾಂಡಿಂಗ್ ಸಮೀಕ್ಷೆ ಪಾಸ್!
– ಇನ್ನು ಮುಂದೆ ರಾತ್ರಿ ವಿಮಾನ ಕೂಡ ಓಡಾಟ ಶುರು?
– ಆಗುಂಬೆ: ಘನ ವಾಹನಗಳ ಸಂಚಾರಕ್ಕೆ ಹಣ ವಸೂಲಿ ಆರೋಪ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಶಿವಮೊಗ್ಗ: ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದಲ್ಲಿ ಬಹುನಿರೀಕ್ಷಿತ ವಿಮಾನಗಳ ನೈಟ್ ಲ್ಯಾಂಡಿಂಗ್ ಸೌಲಭ್ಯಕ್ಕೆ ಅಗತ್ಯವಿರುವ ಪ್ರಕ್ರಿಯೆಗಳು ವೇಗ ಪಡೆದುಕೊಂಡಿವೆ. ಈ ಸಂಬಂಧ ಕೈಗೊಳ್ಳಲಾಗಿದ್ದ ಮಣ್ಣು ಪರೀಕ್ಷೆಯ ವರದಿ ಈಗ ಪಾಸಿಟಿವ್ ಆಗಿ ಬಂದಿದೆ. ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರು ಈ ಕುರಿತು ಹೇಳಿಕೆ ನೀಡಿದ್ದಾರೆ.
ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿದ ಅವರು, ‘ವಿಮಾನ ನಿಲ್ದಾಣದಲ್ಲಿ ಡಾಪ್ಲರ್ ವೆರಿ ಹೈ ಫ್ರೀಕ್ವೆನ್ಸಿ ಓಮ್ನಿ ರೇಂಜ್ (DoVR) ಉಪಕರಣ ಅಳವಡಿಸಲು ಉದ್ದೇಶಿಸಲಾಗಿದೆʼ ಎಂದು ತಿಳಿಸಿದರು.
ಅತ್ಯಾಧುನಿಕ ತಾಂತ್ರಿಕ ಉಪಕರಣ ಅಳವಡಿಸಲು ಮೊದಲು ಆ ಪ್ರದೇಶದ ಭೂಮಿಯ ಸ್ಥಿರತೆ ಪರೀಕ್ಷಿಸುವುದು ಕಡ್ಡಾಯವಾಗಿದೆ. ಅದರಂತೆ DoVR ಸ್ಥಾಪಿಸಲು ಉದ್ದೇಶಿಸಲಾದ ಜಾಗದ ಮಣ್ಣನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈಗ ಮಣ್ಣಿನ ಪರೀಕ್ಷಾ ವರದಿ ಲಭ್ಯವಾಗಿದ್ದು, ಉಪಕರಣ ಅಳವಡಿಕೆಗೆ ಮಣ್ಣು ಪೂರಕವಾಗಿದೆ ಎಂದು ದೃಢಪಟ್ಟಿದೆ. ಮಣ್ಣು ಪರೀಕ್ಷೆ ಯಶಸ್ವಿಯಾದ ಬೆನ್ನಲ್ಲೇ, DoVR ಕೆಲಸ ಪ್ರಾರಂಭವಾಗಿವೆ, ಎಂದು ನಂಜಯ್ಯನಮಠ ಅವರು ತಿಳಿಸಿದ್ದಾರೆ. ಈ ತಾಂತ್ರಿಕ ಸೌಲಭ್ಯವು ಕಾರ್ಯಗತಗೊಂಡರೆ, ವಿಮಾನಗಳು ರಾತ್ರಿ ವೇಳೆ ಹಾಗೂ ಮಂದ ವಾತಾವರಣ ಇರುವ ಸಂದರ್ಭದಲ್ಲೂ ಸುರಕ್ಷಿತವಾಗಿ ವಿಮಾನವನ್ನ ಇಳಿಯಲು ಸಹಕಾರಿಯಾಗಲಿದೆ.
ಆಗುಂಬೆ: ಘನ ವಾಹನಗಳ ಸಂಚಾರಕ್ಕೆ ಹಣ ವಸೂಲಿ ಆರೋಪ!
ತೀರ್ಥಹಳ್ಳಿ: ಆಗುಂಬೆ ಘಾಟಿಯಲ್ಲಿ ಅತೀ ದೊಡ್ಡ ಘನ ವಾಹನಗಳಿಗೆ ಅನುಮತಿ ಇಲ್ಲದೆ ಇದ್ದರೂ ಸಹ ಆಗುಂಬೆ ಚೆಕ್ ಪೋಸ್ಟ್ ನಲ್ಲಿ ಹಣ ವಸೂಲಿ ಮಾಡಿ ಅತೀ ದೊಡ್ಡ ಘನ ವಾಹನ ಓಡಾಟಕ್ಕೆ ಅನುಮತಿ ನೀಡಲಾಗುತ್ತಿದೆ. ಸರಿ ಸುಮಾರು 19 ರಿಂದ 20 ಅಡಿ ಉದ್ದದ ಈಚರ್ ಗಾಡಿಗಳನ್ನು ರಾತ್ರಿಯ ವೇಳೆ ಹಣ ಪಡೆದುಕೊಂಡು ಆಗುಂಬೆ ಘಾಟಿಯಲ್ಲಿ ಬಿಡಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.
ಈ ಬಗ್ಗೆ ಚೆಕ್ ಪೋಸ್ಟ್ ನಲ್ಲಿದ್ದವರನ್ನು ವಿಚಾರಿಸಿದರೆ ನಮಗೇನು ಗೊತ್ತಿಲ್ಲ, ದಿನ ಹೋಗುತ್ತಿವೆ ಎಂಬ ಸಾಬೂಬು ಉತ್ತರ ಹೇಳುತ್ತಿದ್ದಾರೆ. ಸಿಸಿಟಿವಿ ಹಾಳಾಗಿದೆ, ಫಾರೆಸ್ಟ್ ಅಧಿಕಾರಿಗಳು ಬರಬೇಕು ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಒಂದು 19 ಅಡಿ ಈಚರ್ ಲಾರಿಗೆ ಒಂದು ಸಾವಿರಕ್ಕೂ ಹೆಚ್ಚು ಹಣ ಪಡೆದುಕೊಳ್ಳುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಈ ಹಣ ಯಾರ ಜೇಬಿಗೆ ಹೋಗುತ್ತದೆ ಎಂಬುದು ತಿಳಿಯಬೇಕಿದೆ.
ಘಾಟಿಯಲ್ಲಿ ಪಾಸಾದ 19 ಅಡಿ ಈಚರ್ ಗಾಡಿಗಳು ಎರಡು ಮೂರನೇ ಕಿರಿದಾದ ತಿರುವುಗಳಲ್ಲಿ ಗಾಡಿಯು ಸರಿಯಾಗಿ ತಿರುಗದೆ ಗಾಡಿಯ ಡ್ರೈವರ್ ಗಾಡಿಯನ್ನು ಹಿಂದೆ ಮುಂದೆ ತೆಗೆದು ಹರಸಾಹಸಪಟ್ಟು ಗಾಡಿಯನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಇನ್ನೂ ಕೆಲವು ಗಾಡಿಯವರು ರಾತ್ರಿಯ ಸಮಯವಾದ್ದರಿಂದ ಹಿಂದೆ ಮುಂದೆ ಗಾಡಿ ತೆಗೆಯಲು ಗೊತ್ತಾಗದೆ ರೋಡ್ ದಂಡೆಗೆ ಲಾರಿಗುದ್ದಿ ಘಾಟಿದಂಡೆ ಪುಡಿ ಪುಡಿ ಮಾಡಿ ಹಿಂದೆ ಮುಂದೆ ಲಾರಿತೆಗೆದು ಹೋಗುತ್ತಿದ್ದಾರೆ.
ಈ ರೀತಿ ಇತ್ತೀಚೆಗೆ ರಾತ್ರಿ 10 ಗಂಟೆ ನಂತರ ಸಮಯದಲ್ಲಿ ಗಾಡಿಗಳು ಪಾಸಾಗುತ್ತಿವೆ ಎಂಬ ಮಾತು ನಿರಂತರವಾಗಿ ಕೇಳಿ ಬರುತ್ತಿದೆ. ಹಾಗೆಯೇ ಸಣ್ಣ ಗಾಡಿಗಳಾದ ಬಾಳೆಕಾಯಿ, ತರಕಾರಿ, ಜಲ್ಲಿ, ಮೀನು, ಕೋಳಿ ಗಾಡಿಗಳಿಗೆ ಸಣ್ಣ ಪುಟ್ಟ ಗೂಡ್ಸ್ ಪಿಕಪ್ ಗಳಿಗೆ 50 ರಿಂದ ನೂರು ರೂಪಾಯಿ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಮಾತು ಕೂಡ ಕೇಳಿ ಬಂದಿದೆ.
ವಾಹನಗಳಲ್ಲಿ ಏನಿದೆ ಎಂಬುದನ್ನು ಪರಿಶೀಲಿಸದೆ ಹಣ ತೆಗೆದುಕೊಂಡು ವಾಹನ ಬಿಡುತ್ತಿದ್ದಾರೆ ಎಂಬ ದೂರು ವಾಹನ ಚಾಲಕರಿಂದಲೇ ಕೇಳಿ ಬಂದಿದೆ. ಜಿಲ್ಲಾಧಿಕಾರಿಗಳ ಆದೇಶ ಇದ್ದರು ಸಹ ಹಣ ವಸೂಲಿ ಮಾಡಿ ಘನ ( ಅತೀ ದೊಡ್ಡ) ವಾಹನ ಓಡಾಟಕ್ಕೆ ಅನುಮತಿ ನೀಡುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರಿಂದ ದೂರು ಕೇಳಿ ಬರುತ್ತಿದೆ.








